ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾಲಿಫೈಯರ್‌ ಹಣಾಹಣಿಗೆ ಕೆಕೆಆರ್‌

ಕನ್ನಡಿಗ ಬೌಲರ್‌ಗಳಾದ ಗೌತಮ್‌, ಗೋಪಾಲ್‌ ಶ್ರಮ ವ್ಯರ್ಥ; ಕೋಲ್ಕತ್ತ ತಂಡಕ್ಕೆ ಕಾರ್ತಿಕ್, ರಸೆಲ್ ಆಟದ ಬಲ
Last Updated 23 ಮೇ 2018, 19:19 IST
ಅಕ್ಷರ ಗಾತ್ರ

ಕೋಲ್ಕತ್ತ: ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ ಕೋಲ್ಕತ್ತ ನೈಟ್‌ ರೈಡರ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕ್ವಾಲಿಫೈಯರ್ ಹಂತದ ಹಣಾಹಣಿಗೆ ಸಜ್ಜಾಯಿತು.

ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎಲಿಮಿನೇಟರ್‌ ಸ್ಪರ್ಧೆಯಲ್ಲಿ ಕೋಲ್ಕತ್ತ ತಂಡ 25 ರನ್‌ಗಳಿಂದ ಗೆದ್ದಿತು. ಇದೇ 25ರಂದು ಇದೇ ಅಂಗಣದಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಈ ತಂಡ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಆಡಲು ಅರ್ಹತೆ ಗಳಿಸಲಿದೆ.

ಬುಧವಾರ 170 ರನ್‌ಗಳ ಗುರಿ ಬೆನ್ನತ್ತಿದ ರಾಯಲ್ಸ್‌ ಉತ್ತಮ ಆರಂಭ ಕಂಡಿತ್ತು. ಅಜಿಂಕ್ಯ ರಹಾನೆ (46; 41 ಎ; 1 ಸಿ, 4 ಬೌಂ) ಮತ್ತು ರಾಹುಲ್ ತ್ರಿಪಾಠಿ ಮೊದಲ ವಿಕೆಟ್‌ಗೆ 47 ರನ್‌ ಸೇರಿಸಿದರು.

ಮೂರನೇ ಕ್ರಮಾಂಕದ ಸಂಜು ಸ್ಯಾಮ್ಸನ್‌ (50; 38 ಎ, 2 ಸಿ, 4 ಬೌಂ) ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿದರು.

ಈ ಮೂವರ ಆಟದ ಬಲದಿಂದ ತಂಡ 16ನೇ ಓವರ್‌ನಲ್ಲಿ 126 ರನ್‌ ಗಳಿಸಿತ್ತು. ನಂತರ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕೋಲ್ಕತ್ತ ತಂಡ ಗೆಲುವು ತನ್ನದಾಗಿಸಿಕೊಂಡಿತು.

ಕಾರ್ತಿಕ್‌, ರಸೆಲ್‌ ಆಟದ ಬಲ: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತ್ತ ನೈಟ್ ರೈಡರ್ಸ್‌ ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಪತನದ ಹಾದಿ ಹಿಡಿದಿತ್ತು. ಈ ಸಂದರ್ಭದಲ್ಲಿ ಜೊತೆಗೂಡಿದ ನಾಯಕ ದಿನೇಶ್ ಕಾರ್ತಿಕ್ (52; 38 ಎ, 2 ಸಿ, 4 ಬೌಂ) ಮತ್ತು ಏಳನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್‌ (49; 25 ಎ, 5 ಸಿ, 3 ಬೌಂ) ತಂಡಕ್ಕೆ ಬಲ ತುಂಬಿದರು.

51 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕಾರ್ತಿಕ್‌ ಮತ್ತು ಶುಭಮನ್‌ ಗಿಲ್ 55 ರನ್ ಸೇರಿಸಿದರು. ಗಿಲ್ ಔಟಾದ ನಂತರ ರಸೆಲ್ ಕೂಡ ನಾಯಕನಿಗೆ ಉತ್ತಮ ಸಹಕಾರ ನೀಡಿದರು. 18ನೇ ಓವರ್‌ನಲ್ಲಿ ಕಾರ್ತಿಕ್ ಮರಳಿದ ನಂತರವೂ ರಸೆಲ್‌ ಮಿಂಚಿನ ಆಟ ಮುಂದುವರಿಸಿದರು.

ಕನ್ನಡಿಗ ಸ್ಪಿನ್ ಜೋಡಿಯ ಮೋಡಿ: ಕರ್ನಾಟಕದ ಜೋಡಿಯಾದ ಆಫ್‌ಸ್ಪಿನ್ನರ್‌ ಕೃಷ್ಣಪ್ಪ ಗೌತಮ್ ಮತ್ತು ಲೆಗ್ ಸ್ಪಿನ್ನರ್‌ ಶ್ರೇಯಸ್ ಗೋಪಾಲ್‌ ಅವರ ದಾಳಿಗೆ ಕೋಲ್ಕತ್ತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಲುಗಿದರು.

ಆರಂಭಿಕ ಬ್ಯಾಟ್ಸ್‌ಮನ್‌ ಸುನಿಲ್ ನಾರಾಯಣ್‌ ಅವರು ಗೌತಮ್‌ಗೆ ವಿಕೆಟ್ ಒಪ್ಪಿಸಿದರೆ ಅವರ ಜೋಡಿ ಕ್ರಿಸ್ ಲಿನ್‌ ಅವರು ಶ್ರೇಯಸ್‌ ಎಸೆತದಲ್ಲಿ ಔಟಾದರು. ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು ಗೌತಮ್‌ ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್ ಔಟ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT