ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬಗಳ ಸಂಭ್ರಮಕ್ಕೆ ಕೋವಿಡ್‌ ಕರಿನೆರಳು

ಕರಾವಳಿಯಲ್ಲಿ ವರಮಹಾಲಕ್ಷ್ಮಿ ಪೂಜೆ, ಬಕ್ರೀದ್ ಇಂದು
Last Updated 30 ಜುಲೈ 2020, 16:37 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯಲ್ಲಿ ಈ ಬಾರಿ ವರ ಮಹಾಲಕ್ಷ್ಮಿ ಪೂಜೆ ಹಾಗೂ ಬಕ್ರೀದ್ ಆಚರಣೆ ಒಟ್ಟಿಗೆ ಬಂದಿದ್ದು, ಕೋವಿಡ್–19 ಸಂಕಷ್ಟದ ಮಧ್ಯೆಯೂ ಹಬ್ಬಗಳ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ.

ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ನಡೆಯಲಿದ್ದು, ಮಾರುಕಟ್ಟೆಯಲ್ಲಿ ಗುರುವಾರ ಭರ್ಜರಿ ವ್ಯಾಪಾರ ನಡೆದಿದೆ. ಹೂವು, ಹಣ್ಣುಗಳ ದರ ತುಸು ಹೆಚ್ಚಾಗಿದ್ದರೂ, ಜನರು ಮಾತ್ರ ಖರೀದಿಯಿಂದ ಹಿಂದೆ ಸರಿದಿಲ್ಲ. ಪೂಜೆಗೆ ಬೇಕಾದ ಹೂವು, ಬಳೆ, ಅರಿಶಿನ, ಕುಂಕುಮ ಖರೀದಿಯಲ್ಲಿ ತೊಡಗಿದ್ದರೆ, ಇತ್ತ ವ್ಯಾಪಾರ ವಹಿವಾಟೂ ಜೋರಾಗಿದೆ.

ವರಮಹಾಲಕ್ಷ್ಮೀ ಪೂಜೆಗೆ ಮುಖ್ಯವಾಗಿ ಬೇಕಾಗಿರುವುದೇ ಹೂ ಹಣ್ಣುಗಳು. ನಗರದ ಮಲ್ಲಿಕಟ್ಟೆ, ಬಿಜೈ, ಕಂಕನಾಡಿ, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌ ರಸ್ತೆ ಬದಿಗಳಲ್ಲಿ ವ್ಯಾಪಾರಸ್ಥರು ವ್ಯಾಪಾರದಲ್ಲಿ ತೊಡಗಿದ್ದರು. ಮಲ್ಲಿಗೆ, ಗುಲಾಬಿ, ಸೇವಂತಿಗೆ ಹೀಗೆ ನಾನಾ ರೀತಿಯ ಹೂವುಗಳ ಖರೀದಿಗೆ ಜನರು ಹೆಚ್ಚಿನ ಆಸಕ್ತಿ ತೋರಿದರು. ಜತೆಗೆ ಹಣ್ಣುಗಳ ವ್ಯಾಪಾರವೂ ಭರದಿಂದ ಸಾಗಿತ್ತು.

ಚಾರ್ಮಾಡಿ ಘಾಟ್‌ನಲ್ಲಿ ರಾತ್ರಿ ವಾಹನ ಸಂಚಾರ ಬಂದ್‌ ಆಗಿದ್ದು, ಬೆಂಗಳೂರು, ಬಯಲುಸೀಮೆ ಭಾಗಗಳಿಂದ ಹೂ, ಹಣ್ಣು, ತರಕಾರಿಗಳನ್ನು ಶಿರಾಡಿಘಾಟ್ ಮೂಲಕವೇ ತರಬೇಕಾಗಿದೆ.

ವರಮಹಾಲಕ್ಷ್ಮೀ ಹಬ್ಬ ವಿಶೇಷವಾಗಿ ಮಹಿಳೆಯರ ಹಬ್ಬವಾಗಿದ್ದು, ಮನೆಗಳಲ್ಲಿ ಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು, ಸುತ್ತಲಿನ ಮನೆಗಳ ಹೆಣ್ಣುಮಕ್ಕಳನ್ನು ಕರೆದು ಹಬ್ಬದ ಊಟ ನೀಡುವುದು ನಡೆದುಕೊಂಡು ಬಂದಿದೆ. ಇದಕ್ಕಾಗಿಯೇ ಮಹಿಳೆಯೂ ಬಿರುಸಿನ ಖರೀದಿಯಲ್ಲಿ ತೊಡಗಿದ್ದರು.

ಇನ್ನು ದೇವಸ್ಥಾನಗಳಲ್ಲಿಯೂ ಸೀಮಿತ ಜನರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದ್ದು, ದೇವಸ್ಥಾನಗಳಲ್ಲಿ ಅರ್ಚಕರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

‘ಈದ್ಗಾ ಮಸೀದಿಯಲ್ಲಿ ಪ್ರಾರ್ಥನೆ ಇಲ್ಲ’

‘ಕೋವಿಡ್-19 ಇರುವುದರಿಂದ ರಾಜ್ಯ ಸರ್ಕಾರದ ವಕ್ಫ್ ಇಲಾಖೆಯ ಸೂಚನೆಯಂತೆ ನಗರದ ಈದ್ಗಾ ಮಸೀದಿಯಲ್ಲಿ ಈ ವರ್ಷ ಬಕ್ರೀದ್‌ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ’ ಎಂದು ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಅಧ್ಯಕ್ಷ ವೈ. ಅಬ್ದುಲ್ಲ ಕುಂಞಿ ತಿಳಿಸಿದ್ದಾರೆ.

‘ಸಾವಿರಾರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ ಅವರು ಮಾಡಿದ್ದ ತ್ಯಾಗ ಬಲಿದಾನದ ಸ್ಮರಣೆಯೇ ಬಕ್ರೀದ್‌ ಹಬ್ಬದ ವೈಶಿಷ್ಟ್ಯ. ಇದನ್ನು ತ್ಯಾಗ– ಬಲಿದಾನದ ಹಬ್ಬ ಎಂದೂ ಕರೆಯಲಾಗುತ್ತದೆ. ಮುಸ್ಲಿಮರು ಈ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿಕೊಂಡು ಬರುತ್ತಾರೆ’ ಎಂದು ಜಮಾಅತೆ ಇಸ್ಲಾಮಿ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಯು. ತಿಳಿಸಿದ್ದಾರೆ.

‘ಶಾಂತಿ, ಸಮಾನತೆ, ಸೌಹಾರ್ದದಿಂದ ಬಾಳಬೇಕು ಎಂಬುದು ಹಬ್ಬದ ಸಂದೇಶವಾಗಿದೆ. ಸದ್ಯಕ್ಕೆ ಕೊರೊನಾ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಅತ್ಯಂತ ಶ್ರದ್ಧೆಯಿಂದ, ಸರ್ಕಾರ ನೀಡಿದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಹಬ್ಬ ಆಚರಿಸಬೇಕು. ಅನಗತ್ಯವಾಗಿ ಜನ ಸೇರುವುದು ಸುತ್ತಾಡುವುದು ಮಾಡಬಾರದು’ ಎಂದು ಮನವಿ ಮಾಡಿದ್ದಾರೆ.

‘ತ್ಯಾಗ ಮತ್ತು ಬಲಿದಾನದ ಸಂಕೇತವಾದ ಈದ್‌ ಉಲ್‌ ಅಝ್‍ಹಾ (ಬಕ್ರೀದ್‌) ಹಬ್ಬವು ನಾಡಿನ ಜನತೆಗೆ ಸುಖ ಹಾಗೂ ಸಮೃದ್ಧಿಯನ್ನು ನೀಡುವಂತಾಗಲಿ’ ಎಂದು ಜಿಲ್ಲಾ ವಕ್ಫ್ ಸಮಿತಿಯ ಅಧ್ಯಕ್ಷ ಯು.ಕೆ. ಮೋನು ಕಣಚೂರು ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT