ಹೆದ್ದಾರಿ ಹೊಂಡ ತಕ್ಷಣ ಸರಿಪಡಿಸಿ

7
ಕೆಆರ್‌ಡಿಸಿಎಲ್ ಅಧಿಕಾರಿಗೆ ತಾಲ್ಲೂಕು ಪಂಚಾಯಿತಿ ಇಒ ಸೂಚನೆ

ಹೆದ್ದಾರಿ ಹೊಂಡ ತಕ್ಷಣ ಸರಿಪಡಿಸಿ

Published:
Updated:
ಪುತ್ತೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಾಮಾನ್ಯ ಸಭೆಯು ಅಧ್ಯಕ್ಷೆ ಭವಾನಿ ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

 ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ(ಕೆಆರ್‌ಡಿಸಿಎಲ್) ಸಂಬಂಧಿಸಿದ ಬಹುತೇಕ ರಸ್ತೆಗಳಲ್ಲಿ ಹೊಂಡಗಳು ಸೃಷ್ಠಿಯಾಗಿ, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ತಕ್ಷಣ ಹೊಂಡ ಮುಚ್ಚಿ ರಸ್ತೆಗಳನ್ನು ಸರಿಪಡಿಸಿ ಎಂದು ತಾಲ್ಲೂಕು ಪಣಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಗದೀಶ್. ಎಸ್ ಅವರು ಶುಕ್ರವಾರ ನಡೆದ ಪುತ್ತೂರು ತಾಲ್ಲೂಕು ಪಂಚಾಯಿತಿ ಕೆಡಿಪಿ ಮಾಸಿಕ ಸಭೆಯಲ್ಲಿ ಕೆಆರ್‌ಡಿಸಿಎಲ್ ಅಧಿಕಾರಿಗೆ ಸೂಚಿಸಿದರು.

ಪುತ್ತೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಾಮಾನ್ಯ ಸಭೆಯು ಶುಕ್ರವಾರ ಅಧ್ಯಕ್ಷೆ ಭವಾನಿ ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹದಗೆಟ್ಟ ರಸ್ತೆ ವಿಚಾರವನ್ನು ಪ್ರಸ್ತಾಪಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಅವರು ಪುತ್ತೂರಿನಿಂದ ಅಮ್ಚಿನಡ್ಕದವರೆಗೆ ಮಾಣಿ ಮೈಸೂರು ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡಗಳು ಬಿದ್ದಿವೆ. ಶಿರಾಡಿ ರಸ್ತೆ ಸಂಚಾರಕ್ಕೆ ಮುಕ್ತವಾಗದ ಹಿನ್ನೆಲೆಯಲ್ಲಿ ಘನ ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುತ್ತಿದ್ದು, ಇದರಿಂದಾಗಿ ರಸ್ತೆ ಹಾಳಾಗುತ್ತಿದೆ. ಅಲ್ಲದೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲಿಯೇ ನೀರು ಹರಿಯುತ್ತಿದೆ ಎಂದರು. ರಸ್ತೆ ಹೊಂಡ ಮುಚ್ಚುವ ಮತ್ತು ಚರಂಡಿಗಳನ್ನು ನಿಮರ್?ಸುವ ಕೆಲಸ ತಕ್ಷಣ ಆಗಬೇಕು ಎಂದು ಅವರು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆಆರ್‌ಡಿಸಿಎಲ್ ಅಧಿಕಾರಿಯವರು ಮಾಣಿಯಿಂದ ಪುತ್ತೂರಿನವರೆಗೆ ಇದ್ದ ರಸ್ತೆ ಹೊಂಡಗಳನ್ನು ಮುಚ್ಚಲಾಗಿದೆ. ಪುತ್ತೂರು-ಅಮ್ಚಿನಡ್ಕ ರಸ್ತೆಯಲ್ಲಿರುವ ಹೊಂಡಗಳನ್ನು ತಕ್ಷಣ ಮುಚ್ಚಿ ಸರಿಪಡಿಸುತ್ತೇವೆ ಎಂದರು.

ಟೆಂಡರ್ ಆಗದೆ ಸಮವಸ್ತ್ರ ವಿಳಂಬ: ಶಿಕ್ಷಣ ಇಲಾಖೆಗೆ ಸಂಬಂಧಿಸಿ ಸಭೆಗೆ ಮಾಹಿತಿ ನೀಡಿದ ಕ್ಷೇತ್ರ ಸಂಪನ್ಮೂಲ ಸಮನ್ವಯಧಿಕಾರಿ ವಿಷ್ಣುಪ್ರಸಾದ್ ಅವರು ಈ ಬಾರಿ ವಾಷರ್?ಕ ಗುರಿಗಿಂತ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಈ ಬಾರಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಒಟ್ಟು 47,616 ವಿದ್ಯಾರ್ಥಿಗಳ ದಾಖಲಾತಿಯಾಗಿದೆ. 185 ಶಿಕ್ಷರ ಕೊರತೆ ಇದ್ದು, 100 ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ ಎಂದರು.

ತಾಲ್ಲೂಕಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿಕ್ಕಿದೆಯೇ ಎಂಬ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ ಅವರ ಪ್ರಶ್ನೆಗುತ್ತರಿಸಿದ ವಿಷ್ಣುಪ್ರಸಾದ್ ಅವರು ಕೆಲವು ಶಾಲೆಗಳಿಗೆ ಮಾತ್ರ ಸಮವಸ್ತ್ರ ವಿತರಣೆ ಮಾಡಲಾಗಿದೆ. ಹಿಂದೆ ಮೇ ತಿಂಗಳಿನಲ್ಲಿಯೇ ಸಮವಸ್ತ್ರ ನೀಡುವ ವ್ಯವಸ್ಥೆ ಇತ್ತು. ಆದರೆ ಈ ಬಾರಿ ವಿಳಂಬವಾಗಿದೆ. ಜಿಲ್ಲೆಯಲ್ಲಿಯೇ ಈ ಬಾರಿ ವಿಳಂಬವಾಗಿದ್ದು, ಕೇವಲ 10 ಜಿಲ್ಲೆಗಳಿಗೆ ಮಾತ್ರ ಸಮವಸ್ತ್ರ ವಿತರಿಸಲಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ  ಮಾತನಾಡಿ ಮೇ ತಿಂಗಳಲ್ಲಿ ನೀಡಲಾಗುತ್ತಿದ್ದ ಸಮವಸ್ತ್ರ ಈ ಬಾರಿ ವಿಳಂಬವಾಗಲು ಕಾರಣ ಏನು ಎಂದು ಪ್ರಶ್ನಿಸಿದರು. ಟೆಂಡರ್ ಪ್ರಕ್ರಿಯೆ ಆಗದೆ ಇರುವ ಕಾರಣ ವಿಳಂಬವಾಗಿದೆ ಎಂದು ವಿಷ್ಣುಪ್ರಸಾದ್ ಅವರು ಉತ್ತರಿಸಿದರು.

ಪುತ್ತೂರು ತಾಲ್ಲೂಕಿನಲ್ಲಿ ಎಷ್ಟು ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಷ್ಣುಪ್ರಸಾದ್  ‘ಶಿರಾಡಿಯ ಅಡ್ಡಹೊಳೆ ಶಾಲೆಯಲ್ಲಿ ಕೇವಲ 3 ವಿದ್ಯಾರ್ಥಿಗಳಿದ್ದರು. ಈ ಹಿನ್ನೆಲೆಯಲ್ಲಿ ಅ ಶಾಲೆಯನ್ನು ಮುಚ್ಚಲಾಗಿದೆ’ ಎಂದರು. ಹೆಚ್ಚು ಮಕ್ಕಳಿರುವ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವ ಕೆಲಸ ಮಾಡಬೇಡಿ. ಅಗತ್ಯವಿದ್ದರೆ ಅಲ್ಲಿಗೆ ಶಿಕ್ಷಕರನ್ನು ನಿಯೋಜಿಸುವ ಕುರಿತು ಕ್ರಮ ಕೈಗೊಳ್ಳಿ ಎಂದು ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಹರೀಶ್ ಬಿಜತ್ರೆ ಅವರು ಸೂಚಿಸಿದರು.

ಜಾಗಕೊಡಿ-ಮೆಸ್ಕಾಂ ಕೋರಿಕೆ: ಮೆಸ್ಕಾಂ ಸಹಾಯಕ ಎಂಜಿನಿಯರ್ ಪ್ರಶಾಂತ್ ಪೈ ಅವರು ಮಾಡಾವು 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಂತೆ ಬೇರೆಡೆಯೂ ಮಾಡುವ ಯೋಜನೆ ಇದೆ. ಇದಕ್ಕಾಗಿ ಕೈಕಾರದಲ್ಲಿ ನಿವೇಶನ ನೋಡಿದ್ದೇವು. ಆದರೆ ಕಂದಾಯ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅನಂತ ಶಂಕರ ಅವರು ಅ ಭಾಗದಲ್ಲಿ ಯಾವುದೇ ನಿವೇಶನ ಇಲ್ಲ ಎಂದು ತಿಳಿದಿದೆ. ಆದರೂ ಈ ಕುರಿತು ಜಂಟಿ ಸವರ್? ಮಾಡುವ ಎಂದರು. ಒಳಮೊಗ್ರು ಗ್ರಾಮದ ಪುಂಡಿಕಾಯಿ ಎಂಬಲ್ಲಿಯೂ ನಿವೇಶನ ಇದೆ ಎಂದ ಪ್ರಶಾಂತ್ ಪೈ ಅವರು ಈ ಎರಡೂ ಭಾಗದಲ್ಲಿ ಎಲ್ಲಿಯಾದರೂ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ ಅವರಲ್ಲಿ ಕೇಳಿಕೊಂಡರು.

ದೇವರ ಕಟ್ಟೆ ಬಳಿಯೇ ಕೊಳಕು: ‘ಪುತ್ತೂರು ಸರ್ಕಾರಿ ಬಸ್ಸು ನಿಲ್ದಾಣದ ಎದುರುಭಾಗದಲ್ಲಿರುವ ದೇವರ ಕಟ್ಟೆಯ ಬಳಿಯ ಹಿಂಭಾಗದಲ್ಲಿ ಕೊಳಕು ಕಂಡು ಬರುತ್ತಿದೆ. ದೇವರ ಕಟ್ಟೆಯ ಬಳಿಯೇ ಹೀಗಾದರೆ ಹೇಗೆ’ ಎಂದು ಅಧ್ಯಕ್ಷೆ ಭವಾನಿ ಚಿದಾನಂದ ಅವರು ಸಾರಿಗೆ ಸಂಸ್ಥೆಯ ಅಧಿಕಾರಿಯನ್ನು ಪ್ರಶ್ನಿಸಿ ‘ ಸ್ವಾಸ್ಥ್ಯ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು’ ತಿಳಿಸಿದರು.

ಸರ್ಕಾರ ಹೊಸ ಬಜೆಟ್‌ನಲ್ಲಿ ರೈತರ ಸಾಲಮನ್ನಾದ ಕುರಿತು ಘೋಷಣೆ ಮಾಡಿದೆ. ಸಾಲಮನ್ನಾದ ಅನೂಕೂಲ ಯಾರಿಗೆಲ್ಲಾ ಸಿಕ್ಕಿದೆ ಎಂಬ ಕುರಿತು ಮುಂದಿನ ಸಭೆಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರು ಸಹಕಾರ ಇಲಾಖೆಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !