ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಡೆಲಿವರಿ ಸಿಬ್ಬಂದಿಗೆ ವೇಗಮಿತಿ

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್‌ ಡಾ.ಪಿ.ಎಸ್‌.ಹರ್ಷ
Last Updated 23 ಆಗಸ್ಟ್ 2019, 16:09 IST
ಅಕ್ಷರ ಗಾತ್ರ

ಮಂಗಳೂರು: ಝೊಮ್ಯಾಟೊ, ಸ್ವಿಗ್ಗಿ, ಉಬರ್‌ ಈಟ್ಸ್‌ ಸೇರಿದಂತೆ ವಿವಿಧ ಕಂಪನಿಗಳ ಆಹಾರ ಡೆಲಿವರಿ ಸಿಬ್ಬಂದಿ ಅತಿ ವೇಗದಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರುವ ದೂರುಗಳಿದ್ದು, ಅವರಿಗೆ ಪ್ರತಿ ಗಂಟೆಗೆ 40 ಕಿಲೋ ಮೀಟರ್‌ ವೇಗಮಿತಿ ನಿಗದಿಪಡಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ತಿಳಿಸಿದರು.

ಶುಕ್ರವಾರ ನಡೆದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರ ದೂರಿಗೆ ಪ್ರತಿಕ್ರಿಯಿಸಿದ ಕಮಿಷನರ್‌, ‘ಆಹಾರ ಡೆಲಿವರಿ ಸಿಬ್ಬಂದಿ ಅತಿವೇಗದಿಂದ ವಾಹನ ಚಾಲನೆ ಮಾಡುತ್ತಿದ್ದಾರೆ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂಬ ದೂರುಗಳು ಬರುತ್ತಿವೆ. ಆದ್ದರಿಂದ ವೇಗಮಿತಿ ನಿಗದಿಪಡಿಸಲು ನಿರ್ಧರಿಸಲಾಗಿದೆ’ ಎಂದರು.

ಶೀಘ್ರದಲ್ಲಿ ಎಲ್ಲ ಮೊಬೈಲ್‌ ಅಪ್ಲಿಕೇಷನ್ ಆಧಾರಿತ ಆಹಾರ ಡೆಲಿವರಿ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಸಲಾಗುವುದು. 40 ಕಿ.ಮೀ. ವೇಗ ಮಿತಿ ಅಳವಡಿಸಿಕೊಳ್ಳುವಂತೆ ಸೂಚಿಸಲಾಗುವುದು. ಈ ಕಂಪನಿಗಳ ಎಲ್ಲ ಸಿಬ್ಬಂದಿಯ ದ್ವಿಚಕ್ರ ವಾಹನಗಳಲ್ಲಿ ಜಿಪಿಎಸ್‌ ಅಳವಡಿಸಿದ್ದು, ವೇಗದ ಮಿತಿ ಕುರಿತು ನಿಗಾ ಇರಿಸಲಾಗುವುದು. ಮಿತಿ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಆರ್‌ಟಿಒಗೆ ಪತ್ರ:

‘ಕೆಲವು ಖಾಸಗಿ ನಗರ ಸಾರಿಗೆ ಬಸ್‌ಗಳು ನಿಗದಿಯಂತೆ ಟ್ರಿಪ್ ಮಾಡುವುದಿಲ್ಲ. ಕೆಲವೊಮ್ಮೆ ಅರ್ಧಕ್ಕೆ ಟ್ರಿಪ್‌ ರದ್ದು ಮಾಡುತ್ತವೆ. ಇದರಿಂದ ಈ ಭಾಗದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ’ ಎಂದು ಪಚ್ಚನಾಡಿ ಮತ್ತು ಕೋಡಿಕ್ಕಲ್ ಭಾಗದ ಜನರು ದೂರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್‌, ‘ಟ್ರಿಪ್‌ ರದ್ದು ಮಾಡುವ ಸಮಸ್ಯೆ ಕುರಿತು ಹೆಚ್ಚಿನ ದೂರುಗಳು ಬರುತ್ತಿವೆ. ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (ಆರ್‌ಟಿಒ) ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗುವುದು’ ಎಂದು ಭರವಸೆ ನೀಡಿದರು.

‘ಮರೋಳಿಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಹಳೆಯ ಕಚೇರಿ ಇದ್ದ ಜಾಗದಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ನಿಲ್ಲಿಸಲಾಗಿದೆ. ವರ್ಷಗಳಿಂದ ಅಲ್ಲಿಯೇ ನಿಂತಿರುವ ವಾಹನಗಳು ಹುಲ್ಲು, ಪೊದೆಯಿಂದ ಆವೃತವಾಗಿವೆ. ಇದರಿಂದ ಪಾದಚಾರಿಗಳಿಗೂ ತೊಂದರೆ ಆಗುತ್ತಿದೆ’ ಎಂದು ಭಾಸ್ಕರ್ ಎಂಬುವವರು ದೂರಿದರು.

ನ್ಯಾಯಾಲಯದ ಅನುಮತಿ ಪಡೆದು ಇಂತಹ ವಾಹನಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹರ್ಷ ಅವರು ತಿಳಿಸಿದರು.

ದಟ್ಟಣೆಯ ಅವಧಿಯಲ್ಲಿ ನಗರದೊಳಕ್ಕೆ ಸರಕು ಸಾಗಣೆ ವಾಹನಗಳಿಂದ ಸರಕುಗಳನ್ನು ಇಳಿಸುವುದರಿಂದ ಸುಗಮ ಸಂಚಾರಕ್ಕೆ ಮತ್ತಷ್ಟು ಸಮಸ್ಯೆಯಾಗುತ್ತಿದೆ. ಆದ್ದರಿಂದ ದಟ್ಟಣೆಯ ಅವಧಿಯಲ್ಲಿ ನಗರದೊಳಗೆ ಸರಕು ಇಳಿಸುವುದನ್ನು ನಿಷೇಧಿಸಬೇಕು ಎಂದು ದಿನೇಶ್‌ ಎಂಬುವವರು ಸಲಹೆ ನೀಡಿದರು.

‘ಬೆಂಗಳೂರಿನಲ್ಲಿ ದಟ್ಟಣೆಯ ಅವಧಿಯಲ್ಲಿ ನಗರದೊಳಕ್ಕೆ ಸರಕು ಇಳಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ’ ಎಂದ ಅವರು, ಮಂಗಳೂರಿನಲ್ಲೂ ಅಂತಹ ಕ್ರಮ ಕೈಗೊಳ್ಳುವ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಸಂಚಾರ ಉಪ ವಿಭಾಗದ ಎಸಿಪಿ ಕೆ.ಮಂಜುನಾಥ ಶೆಟ್ಟಿ ಅವರಿಗೆ ನಿರ್ದೇಶನ ನೀಡಿದರು.

ಪಡೀಲ್‌ನಲ್ಲಿ ವಾಹನ ಶೋ ರೂಂ ಒಂದರ ಎದುರಿನಲ್ಲಿ ಹೊಸ ವಾಹನಗಳನ್ನು ಇಳಿಸುವುದರಿಂದ ವಾಹನಗಳ ಸಂಚಾರ ಮತ್ತು ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೊಬ್ಬರು ದೂರಿದರು. ಸಂಚಾರ ಉಪ ವಿಭಾಗದ ಎಸಿಪಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಲಿದ್ದು, ದಟ್ಟಣೆ ಅವಧಿಯಲ್ಲಿ ವಾಹನಗಳನ್ನು ಇಳಿಸದಂತೆ ಶೋರೂಂ ಮಾಲೀಕರಿಗೆ ಸೂಚನೆ ನೀಡುತ್ತಾರೆ ಎಂದು ಭರವಸೆ ನೀಡಿದರು.

ಪಕ್ಷಿಕೆರೆಯಲ್ಲಿ ರಸ್ತೆ ಒತ್ತುವರಿ, ಕಾಪಿಕಾಡ್‌ ರಸ್ತೆಯಲ್ಲಿ ಮರಗಳ ರೆಂಬೆಗಳು ಮುರಿದು ಬೀಳುತ್ತಿರುವುದು, ಮುಖ್ಯ ರಸ್ತೆಗಳಲ್ಲಿ ರೆಡಿಮಿಕ್ಸ್‌ ಕಾಂಕ್ರೀಟ್‌ ಪೂರೈಕೆ ವಾಹನಗಳಿಂದ ಸಂಚಾರ ದಟ್ಟಣೆ ಸೃಷ್ಟಿಯಾಗುತ್ತಿರುವುದು, ಬಸ್‌ಗಳಲ್ಲಿ ಕರ್ಕಶ ಹಾರನ್‌ ಬಳಕೆ, ಶಕ್ತಿನಗರದಲ್ಲಿ ಆಟೊ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಸೇರಿದಂತೆ ಹಲವು ದೂರುಗಳು ಬಂದವು.

ಡಿಸಿಪಿಗಳಾದ ಅರುಣಾಂಗ್ಷು ಗಿರಿ ಮತ್ತು ಲಕ್ಷ್ಮೀಗಣೇಶ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT