ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಮ್ಡ್‌ ಫಾರೆಸ್ಟ್: ಮತ್ತೊಮ್ಮೆ ವೈಜ್ಞಾನಿಕ ಸಮೀಕ್ಷೆ

ವರದಿ ನಂತರ ಸುಪ್ರೀಂ ಕೋರ್ಟ್‌ಗೆ ಅಫಿದಾವಿತ್‌ ಸಲ್ಲಿಕೆ: ಅರಣ್ಯ ಸಚಿವ ಅರವಿಂದ ಲಿಂಬಾವಳಿ
Last Updated 24 ಏಪ್ರಿಲ್ 2021, 5:05 IST
ಅಕ್ಷರ ಗಾತ್ರ

ಪುತ್ತೂರು: ‘ರಾಜ್ಯದಲ್ಲಿರುವ ಡೀಮ್ಡ್ ಫಾರೆಸ್ಟ್ ಬಗ್ಗೆ ಮತ್ತೊಮ್ಮೆ ವೈಜ್ಞಾನಿಕ ಸಮೀಕ್ಷೆ ಮಾಡಿ, ಸಮಗ್ರ ವರದಿ ಸಲ್ಲಿಸಲು ಇಲಾಖೆಗೆ ಸೂಚಿಸಿದ್ದೇನೆ. ಅಂತಿಮ ವರದಿ ಬಂದ ಬಳಿಕ ಆ ಬಗ್ಗೆ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸ ಲಾಗುವುದು’ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡೀಮ್ಡ್ ಫಾರೆಸ್ಟ್‌ನಲ್ಲಿ ಎಷ್ಟು ಭಾಗದಲ್ಲಿ ವಸತಿ, ಕೃಷಿ ಇತ್ಯಾದಿ ಇದೆ. ಸಾರ್ವಜನಿಕ ವ್ಯವಸ್ಥೆಗಾಗಿ ಎಷ್ಟು ಪ್ರದೇಶ ಬೇಕು ಎಂಬುದನ್ನು ನೋಡಿಕೊಂಡು, ಅರಣ್ಯ ವ್ಯಾಪ್ತಿಯಲ್ಲಿ ಎಷ್ಟನ್ನು ಉಳಿಸಿ ಕೊಳ್ಳಹುದು ಎಂಬುದನ್ನು ವರದಿಯಲ್ಲಿ ದಾಖಲಿಸಲಾಗುತ್ತದೆ. ಡೀಮ್ಡ್ ಫಾರೆಸ್ಟ್‌ನಲ್ಲಿ ಎಷ್ಟನ್ನು ಅರಣ್ಯಕ್ಕಾಗಿ ಉಳಿಸಿ ಕೊಳ್ಳುತ್ತೀರಿ ಎಂದು ಕೋರ್ಟ್‌ ಕೇಳಿರುವ ಕಾರಣ ಈ ವರದಿ ಮಹತ್ವದ್ದಾಗಿದೆ’ ಎಂದರು.

‘ದಟ್ಟಾರಣ್ಯ ಹೊರತುಪಡಿಸಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಇತರ ಪ್ರದೇಶಗಳು, ಶಾಲೆ, ಆಸ್ಪತ್ರೆ, ಗೋಶಾಲೆಯಂತಹ ಜಾಗಗಳು ಸಾರ್ವಜನಿಕ ಬಳಕೆಗೆ ಅತ್ಯಗತ್ಯವಿದ್ದು, ಇದಕ್ಕೆ ಜನರ ಬೇಡಿಕೆಯೂ ಇದೆ. ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶ ಮತ್ತು ಸಾರ್ವಜನಿಕ ಬಳಕೆಗೆ ಅಗತ್ಯವಿರುವ ಅರಣ್ಯ ಭೂಮಿಯನ್ನು ಪರಭಾರೆ ಮಾಡುವ ಕುರಿತು ಸುಪ್ರೀಂ ಕೋರ್ಟಿಗೆ ಅಫಿದಾವಿತ್ ಸಲ್ಲಿಸಲಾಗುವುದು’ ಎಂದು ಲಿಂಬಾವಳಿ ಹೇಳಿದರು.

ಕಾಂಡ್ಲಾ ವನ ಉಳಿಸಲು ಕ್ರಮ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ಕಾಂಡ್ಲಾ ಅರಣ್ಯ ಪ್ರದೇಶ ನಶಿಸುತ್ತಿದೆ. ಅದನ್ನು ಉಳಿಸಿ ಬೆಳೆಸಲು ಕ್ರಮ ಕೈಗೊಳ್ಳಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ. ಈ ಕುರಿತು ಈಗಾಗಲೇ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದ್ದು, ಕೋವಿಡ್‌ ಹಾವಳಿ ತಗ್ಗಿದ ನಂತರ ದೆಹಲಿಗೆ ತೆರಳಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೂ ಮನವರಿಕೆ ಮಾಡಿಕೊಡಲಾಗುವುದು. ಇಂತಹ ಸರ್ಕಾರಿ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕುರಿತು ಚರ್ಚಿಸುತ್ತೇನೆ’ ಎಂದು ಅವರು ತಿಳಿಸಿದರು.

‘ಕಾಂಡ್ಲಾ ವನದಲ್ಲಿ ಸರ್ಕಾರಿ ಜಮೀನಿನ ಪಾಲು ಹೆಚ್ಚಿದೆ. ಅದನ್ನು ಅರಣ್ಯ ಇಲಾಖೆಯ ಸುಪರ್ದಿಗೆ ನೀಡುವಂತೆ ಮನವಿ ಸಲ್ಲಿಸಲಾಗುವುದು. ಆಗ ಕಾಂಡ್ಲಾ ವನವನ್ನು ಸಮೃದ್ಧವಾಗಿ ಬೆಳೆಸಲು ಸಾಧ್ಯವಿದೆ’ ಎಂದ ಅವರು, ‘ಗೇರು ಅಭಿವೃದ್ಧಿ ನಿಗಮ (ಕೆಸಿಡಿಸಿ) ಮತ್ತು ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ (ಕೆಎಫ್‍ಡಿಸಿ)ವನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳು, ಶಾಸಕರ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.

‘ಕುದುರೆಮುಖದಿಂದ ಸ್ಥಳಾಂತರಗೊಳ್ಳಿ’
ಕುದುರೆಮುಖ ವನ್ಯಜೀವಿ ಧಾಮದಂತಹ ಮೀಸಲು ಅರಣ್ಯ ಪ್ರದೇಶದಲ್ಲಿ ಅನೇಕ ಕುಟುಂಬಗಳು ವಾಸ್ತವ್ಯವಿದೆ. ಅಲ್ಲಿಂದ ಸ್ಥಳಾಂತರಗೊಳ್ಳಲು 674 ಕುಟುಂಬಗಳು ಒಪ್ಪಿಕೊಂಡಿದ್ದು, ಇನ್ನೂ 760 ಕುಟುಂಬಗಳು ಒಪ್ಪಿಕೊಳ್ಳಬೇಕಾಗಿದೆ. ಆ ಪ್ರದೇಶದಲ್ಲಿ ವಾಸ್ತವ್ಯವಿರುವ ಕುಟುಂಬಕ್ಕೆ ಪರಿಹಾರ ನೀಡಲು ಸರ್ಕಾರ ಸಿದ್ಧವಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

‘ಇದು ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ವನ್ಯಜೀವಿಗಳ ವಾಸಕ್ಕೆ ಜಾಗ ಬಿಟ್ಟು ಕೊಡಬೇಕಾಗಿದೆ. ಈ ಹಿನ್ನೆಲೆಯಲ್ಲಿ 4 ಜಿಲ್ಲೆಗಳ ವ್ಯಾಪ್ತಿಗೆ ಬರುವ ಈ ಮೀಸಲು ಅರಣ್ಯ ಪ್ರದೇಶದಿಂದ ಸ್ಥಳಾಂತರಗೊಳ್ಳುವಂತೆ ನಾನು ವಿನಂತಿಸುತ್ತಿದ್ದೇನೆ. ಅಧಿಕಾರಿಗಳೂ ಅವರ ಮನವೊಲಿಸುವ ಕಾರ್ಯ ನಡೆಸುತ್ತಿದ್ದಾರೆ. ಇಲ್ಲದಿದ್ದಲ್ಲಿ ಮಾನವ-ಕಾಡುಪ್ರಾಣಿಗಳ ಮಧ್ಯೆ ಸಂಘರ್ಷ ಇನ್ನೂ ಹೆಚ್ಚುತ್ತದೆ’ ಎಂದು ಹೇಳಿದರು.

ಸಮಸ್ಯೆ ಆಲಿಸಿದ ಸಚಿವ
ಸುಳ್ಯ:
ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಜಾಲ್ಸೂರು ಗ್ರಾಮದ ಕುಕ್ಕಂದೂರು ತಮಿಳು ಕಾಲೊನಿಗೆ ಶುಕ್ರವಾರ ಸಂಜೆ ಭೇಟಿ ನೀಡಿ ಕೆ.ಎಫ್.ಡಿ.ಸಿ. ರಬ್ಬರ್ ಕಾರ್ಮಿಕರ ಸಮಸ್ಯೆ ಆಲಿಸಿದರು.

ಕೆ.ಎಫ್.ಡಿ.ಸಿ. ರಬ್ಬರ್ ಪ್ಲಾಂಟೇಷನ್ ತೋಟ ವೀಕ್ಷಿಸಿದ ಬಳಿಕ ಕಾಲೊನಿ ನಿವಾಸಿಗಳ ಮನೆ ವೀಕ್ಷಣೆ ಮಾಡಿದರು.

ರಬ್ಬರ್ ಕಾರ್ಮಿಕರಿಗೆ ಹೊಸ ನಿರ್ಮಾಣ ಮಾಡಿ ಕೊಡುವುದಾಗಿ ಸಚಿವರು ಭರವಸೆ ನೀಡಿದರು.

ಮೀನುಗಾರಿಕೆ ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಜಾಲ್ಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ.ಬಾಬು, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕೆ.ಎಫ್.ಡಿ.ಸಿ. ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT