ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಿನ್ ₹ 2 ಸಾವಿರಕ್ಕೆ ಮರಳು ಕೊಡಿಸಲಿ: ಮಾಜಿ ಸಚಿವ ರಮಾನಾಥ ರೈ

Last Updated 19 ಸೆಪ್ಟೆಂಬರ್ 2020, 8:15 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ ಹೇಳಿಕೆಗೆ ಬದ್ಧರಾಗಿ, ₹2 ಸಾವಿರಕ್ಕೆ ಲೋಡ್ ಮರಳು ಕೊಡಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಾಲದಲ್ಲಿ ಮರಳಿನ ಸಮಸ್ಯೆ ಉಂಟಾಗಿತ್ತು. ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 105 ಪರವಾನಗಿದಾರರು ಮರಳುಗಾರಿಕೆ ನಡೆಸುತ್ತಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಯಾರಿಗೂ ಪರವಾನಗಿ ನೀಡದಿದ್ದರೂ ಡ್ರೆಜ್ಜಿಂಗ್, ಜೆಸಿಬಿ ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದೆ. ಅಕ್ರಮವಾಗಿ ಅವ್ಯಾಹತವಾಗಿ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿದೆ. ನಳಿನ್ ಕುಮಾರ್ ಬೆಂಬಲಿಗರೇ ನೇರವಾಗಿ ಇದರಲ್ಲಿ ಪಾಲ್ಗೊಂಡಿದ್ದಾರೆ. ಪರವಾನಗಿ ಪಡೆದು ಮರಳುಗಾರಿಕೆ ನಡೆಸುವುದು ದಂಧೆಯೋ, ಇಲ್ಲ ಪರವಾನಗಿ ಇಲ್ಲದೇ ನಡೆಸುವುದು ದಂಧೆಯೋ ಎಂದು ಸಂಸದರೇ ಜನತೆಗೆ ತಿಳಿಸಲಿ ಎಂದು ಛೇಡಿಸಿದರು.

ಹಲ್ಲೆ - ಹತ್ಯೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಧರ್ಮಾಧಾರಿತ ಹತ್ಯೆಗಳಲ್ಲಿ ಕಾಂಗ್ರೆಸ್‌ನ ಯಾವುದೇ ಕಾರ್ಯಕರ್ತ ಭಾಗಿಯಾಗಿಲ್ಲ. ಯಾವುದೇ ಧೋಷಾರೋಪಣೆ ಪಟ್ಟಿ, ಎಫ್ಐಆರ್‌ನಲ್ಲಿ ಕಾಂಗ್ರೆಸಿಗರ ಹೆಸರಿಲ್ಲ. ಅದರಲ್ಲಿ ಎರಡು ಸಂಘಟನೆಗಳ ಕಾರ್ಯಕರ್ತರು ಇದ್ದಾರೆ. ಬಂಟ್ವಾಳ ತಾಲ್ಲೂಕಿನ ಹರೀಶ್ ಎಂಬವರ ಹತ್ಯೆ ಆರೋಪಿಗಳಿಗೆ ಆಡಳಿತ ಪಕ್ಷದ ಸಂಘಟನೆಗಳಲ್ಲಿ ಉನ್ನತ ಸ್ಥಾನ ನೀಡಿ, ಪದಾಧಿಕಾರಿಗಳನ್ನಾಗಿ ಮಾಡಿದ್ದಾರೆ. ಹತ್ಯೆಗೆ ಪ್ರೋತ್ಸಾಹಿಸುತ್ತಿರುವವರು ಯಾರು? ಎಂದು ಬಿಜೆಪಿ ದಾಖಲೆ ಸಹಿತ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಈ ಹಿಂದೆ ಡಾಲರ್ ಬೆಲೆ ₹15 ಕ್ಕೆ ಬರಲಿದೆ ಎಂದ ನಳಿನ್ ಕುಮಾರ್ ಕಟೀಲ್, ಈಗ ₹ 2 ಸಾವಿರಕ್ಕೆ ಮರಳು ಕೊಡಿಸುತ್ತೇವೆ ಎಂದಿದ್ದಾರೆ. ಇವರ ಹೇಳಿಕೆಗಳು ನರೇಂದ್ರ ಮೋದಿ ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಾಕಿದ ಹಾಗಿದೆ ಎಂದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೇಳಿದ ಹಾಗೆ, ಈ ಡಾಲರ್ ನಳಿನ್ ಒಬ್ಬ ಹಾಸ್ಯಗಾರ ಎಂದು ವ್ಯಂಗ್ಯವಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಕುಮಾರ್ ರೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT