ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ್ಯಾಡಿಯಿಂದ ಬಿ.ಸಿ. ರೋಡ್‌ವರೆಗೆ ಪಾದಯಾತ್ರೆ: ರಮಾನಾಥ ರೈ

ಅಡ್ಡಹೊಳೆ–ಬಿ.ಸಿ. ರೋಡ್ ಹೆದ್ದಾರಿ ಕಾಮಗಾರಿ ಆರಂಭಿಸಲು ಆಗ್ರಹ
Last Updated 3 ಜನವರಿ 2019, 14:54 IST
ಅಕ್ಷರ ಗಾತ್ರ

ಮಂಗಳೂರು: ಬೆಂಗಳೂರು–ಮಂಗಳೂರು ನಡುವಿನ ಸಂಪರ್ಕ ಸಾಧನವಾಗಿರುವ ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆಯಿಂದ ಬಿ.ಸಿ. ರೋಡ್‌ವರೆಗಿನ ಕಾಮಗಾರಿ ಸ್ಥಗಿತಗೊಂಡಿದ್ದು, ಕೂಡಲೇ ಪುನರಾರಂಭಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌ನಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದೇ 14 ರಿಂದ 16 ರವರೆಗೆ ಪಾದಯಾತ್ರೆ ನಡೆಯಲಿದ್ದು, ನೆಲ್ಯಾಡಿಯಿಂದ ಆರಂಭವಾಗಲಿದೆ. ಉಪ್ಪಿನಂಗಡಿ, ಮಾಣಿ ಹಾಗೂ ಬಿ.ಸಿ. ರೋಡ್‌ನಲ್ಲಿ ಬಹಿರಂಗ ಸಭೆ ನಡೆಯಲಿವೆ ಎಂದರು.

ಮೊದಲ ದಿನವಾದ ಇದೇ 14 ರಂದು ನೆಲ್ಯಾಡಿಯಿಂದ ಆರಂಭವಾಗುವ ಪಾದಯಾತ್ರೆ ಉಪ್ಪಿನಂಗಡಿವರೆಗೆ ನಡೆಯಲಿದೆ. ಅಲ್ಲಿ ವಾಸ್ತವ್ಯ ಮಾಡಲಾಗುವುದು. ಎರಡನೇ ದಿನ ಉಪ್ಪಿನಂಗಡಿಯಿಂದ ಮಾಣಿಯವರೆಗೆ ಹಾಗೂ ಇದೇ 16 ರಂದು ಮಾಣಿಯಿಂದ ಬಿ.ಸಿ. ರೋಡ್‌ವರೆಗೆ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಈ ಭಾಗದ ಜೀವನಾಡಿ ಇದ್ದಂತೆ. ಬೆಂಗಳೂರಿನಿಂದ ಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿದೆ. ಹಾಸನದಿಂದ ಬಿ.ಸಿ. ರೋಡ್‌ವರೆಗಿನ ಹೆದ್ದಾರಿ ಕಾಮಗಾರಿಗೆ ಹಿಂದಿನ ಯುಪಿಎ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಆಸ್ಕರ್‌ ಫರ್ನಾಂಡಿಸ್‌ ಮಂಜೂರಾತಿ ನೀಡಿದ್ದರು. ಅದರಂತೆ ಭೂಸ್ವಾಧೀನ ಪ್ರಕ್ರಿಯೆಯೂ ನಡೆದಿದೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಹಾಸನದಿಂದ ಮಾರನಹಳ್ಳಿ ಮೂಲಕ ಗುಂಡ್ಯವರೆಗಿನ 63 ಕಿ.ಮೀ. ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಿದ ಎಲ್‌ ಆಂಡ್‌ ಟಿ ಕಂಪನಿ, ಎರಡನೇ ಹಂತದಲ್ಲಿ ಗುಂಡ್ಯದಿಂದ ಬಿ.ಸಿ. ರೋಡ್‌ವರೆಗಿನ ಕಾಮಗಾರಿ ಕೈಗೆತ್ತಿಕೊಂಡಿತ್ತು. ಇದೀಗ ಗುತ್ತಿಗೆದಾರರಿಗೆ ಹಣ ಪಾವತಿ ಆಗದೇ ಇದ್ದುದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದರು.

ಹೆದ್ದಾರಿ ಪ್ರಾಧಿಕಾರದಿಂದ ಗುತ್ತಿಗೆದಾರ ಕಂಪನಿಗೆ ಹಣ ಬಿಡುಗಡೆ ಮಾಡಬೇಕು. ಆದರೆ, ಅನುದಾನವೇ ಇಲ್ಲದೇ ಬಿಲ್‌ ಪಾವತಿ ಆಗಿಲ್ಲ. ಹೀಗಾಗಿ ಎಲ್‌ ಆಂಡ್‌ ಟಿ ಕಂಪನಿ ಕಾಮಗಾರಿಗೆ ಸ್ಥಗಿತಗೊಳಿಸಿರುವುದಾಗಿ ತಿಳಿದು ಬಂದಿದೆ. ಇದೀಗ ಕಾಮಗಾರಿ ಸ್ಥಗಿತಗೊಂಡಿರುವುದು ಅಲ್ಲಿನ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ವೇಳೆ ಮಳೆಗಾಲದವರೆಗೆ ಪೂರ್ಣವಾಗದೇ ಇದ್ದಲ್ಲಿ, ನೂರಾರು ಜನರು ಪ್ರಾಣಕ್ಕೆ ಕುತ್ತು ಬರಲಿದೆ ಎಂದು ಎಚ್ಚರಿಸಿದರು.

ಕೂಡಲೇ ಕಾಮಗಾರಿ ಆರಂಭಿಸಬೇಕು. ಜನರಿಗೆ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಪಕ್ಷದ ಹಿರಿಯ ನಾಯಕರು, ಸ್ಥಳೀಯ ನಾಯಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್‌ಕುಮಾರ್‌, ಮೇಯರ್‌ ಭಾಸ್ಕರ್‌ ಕೆ., ಮಾಜಿ ಶಾಸಕ ಜೆ.ಆರ್. ಲೋಬೊ, ಪದಾಧಿಕಾರಿಗಳಾದ ಶಾಲೆಟ್ ಪಿಂಟೋ, ಶಶಿಧರ್‌ ಹೆಗ್ಡೆ, ನವೀನ್‌ ಡಿಸೋಜ, ವೆಂಕಪ್ಪಗೌಡ, ಕೆ.ಕೆ. ಶಾಹುಲ್‌ ಹಮೀದ್‌, ಧನಂಜಯ ಅಡ್ಪಂಗಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT