ಗುರುವಾರ , ಜನವರಿ 27, 2022
27 °C

ಐಸಿಸ್‌ ನಂಟು ಶಂಕೆ: ಮಾಜಿ ಶಾಸಕ ದಿ. ಇದಿನಬ್ಬ ಮೊಮ್ಮಗನ ಪತ್ನಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಐಸಿಸ್‌ ಸಂಘಟನೆಯ ಜತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಮೇರೆಗೆ ಸಮೀಪದ ಉಳ್ಳಾಲದ ದೀಪ್ತಿ ಮಾರ್ಲ ಯಾನೆ ಮರಿಯಂ ಎಂಬ ಮಹಿಳೆಯನ್ನು ಎನ್‌ಐಎ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಬಂಧಿತ ಮಹಿಳೆ ಮಾಜಿ ಶಾಸಕ ದಿ. ಇದಿನಬ್ಬ ಅವರ ಮೊಮ್ಮಗನ ಪತ್ನಿ.

2021ರ ಆಗಸ್ಟ್‌ 4ರಂದು ಇದಿನಬ್ಬ ಅವರ ಪುತ್ರ ಬಿ.ಎಂ. ಬಾಷಾ ಅವರ ಮನೆ ಮೇಲೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಇದಿನಬ್ಬ ಅವರ ಮೊಮ್ಮಗ ಅಬ್ದುಲ್‌ ರಹಿಮಾನ್‌ ಅವರನ್ನು ಬಂಧಿಸಿದ್ದರು. ಜತೆಗೆ ರಹಿಮಾನ್‌ ಸಹೋದರ ಅನಾಸ್‌ ಹಾಗೂ ಅವರ ಪತ್ನಿ ದೀಪ್ತಿ ಅವರನ್ನೂ ವಿಚಾರಣೆಗೆ ಒಳಪಡಿಸಿದ್ದರು. ದೀಪ್ತಿ ಅವರಿಗೆ ಐಎಸ್‌ ಸಂಘಟನೆಯ ಜತೆಗೆ ನಂಟು ಇದೆ ಎಂಬ ಶಂಕೆ ಆಗಲೇ ವ್ಯಕ್ತವಾಗಿತ್ತು. ಆದರೆ, ಆ ಸಮಯದಲ್ಲಿ ಅವರಿಗೆ ಚಿಕ್ಕ ಮಗು ಇದೆ ಎಂಬ ಕಾರಣಕ್ಕೆ ಬಂಧಿಸಿರಲಿಲ್ಲ. ಸೋಮವಾರ ಬೆಳಿಗ್ಗೆ, ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಮನೆಯ ಮೇಲೆ ಪುನಃ ದಾಳಿ ನಡೆಸಿದ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.

ನವದೆಹಲಿಯಿಂದ ಬಂದಿದ್ದ ಸಹಾಯಕ ತನಿಖಾಧಿಕಾರಿ, ಡಿಎಸ್‌ಪಿ ಕೃಷ್ಣಕುಮಾರ್‌, ಇನ್‌ಸ್ಪೆಕ್ಟರ್‌ ಅಜಯ್‌ ಸಿಂಗ್‌, ಹಾಗೂ ಮೋನಿಕಾ ಧಿಕ್ವಾಲ್‌ ಅವರ ತಂಡ ದೀಪ್ತಿ ಅವರನ್ನು ಬಂಧಿಸಿದೆ. ಇಲ್ಲಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಿಚಾರಣೆಗಾಗಿ ನೇರವಾಗಿ ದೆಹಲಿಗೆ ಕರೆದೊಯ್ಯಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು