ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಭಟ್‌ಗೆ ಅಂತಿಮ ವಿದಾಯ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ: ಅಂತಿಮ ಯಾತ್ರೆಗೆ ಅಭಿಮಾನಿ ಬಳಗ
Last Updated 8 ಡಿಸೆಂಬರ್ 2021, 4:22 IST
ಅಕ್ಷರ ಗಾತ್ರ

ಪುತ್ತೂರು: ಕರಾವಳಿಯಲ್ಲಿ ಬಿಜೆಪಿ ತಳಪಾಯ ಹಾಕಿದ ಭೀಷ್ಮ, ಸ್ವಾಭಿಮಾನಿ ವ್ಯಕ್ತಿತ್ವದ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಹಾಗೂ ಅಂತಿಮ ಸಂಸ್ಕಾರಕ್ಕೆ ದೊಡ್ಡ ಅಭಿಮಾನಿ ಪಡೆ ಸೇರಿತ್ತು.

ಬಿಜೆಪಿ ಸಂಘ ಪರಿವಾರದ ಕಾರ್ಯಕರ್ತರ ಹಾಗೂ ವಿವಿಧ ಪಕ್ಷದ ಸಂಘಟನೆಗಳ ಕಾರ್ಯಕರ್ತರ ಸಮ್ಮುಖದಲ್ಲಿ ಮಂಗಳವಾರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

ಸೋಮವಾರ ಸಂಜೆ ವಿಧಿವಶರಾದ ಮಾಜಿ ಶಾಸಕ ಉರಿಮಜಲು ಕೆ.ರಾಮ ಭಟ್ ಅವರ ನಗರದ ಕೊಂಬೆಟ್ಟುವಿನಲ್ಲಿರುವ ಮನೆಯಲ್ಲಿ ಮಂಗಳವಾರ ಬೆಳಿಗ್ಗೆ ಅಂತಿಮ ಯಾತ್ರೆ ಸಿದ್ಧತೆನಡೆಯಿತು.

ಪುಷ್ಪಾಲಂಕಾರದೊಂದಿಗೆ ಸಿದ್ಧಪಡಿಸಿದ್ದ ತೆರೆದ ವಾಹನದಲ್ಲಿ ಕೊಂಬೆಟ್ಟಿನಲ್ಲಿರುವ ಅವರ ನಿವಾಸದಿಂದ ವಿವೇಕಾನಂದ ಪದವಿ ಕಾಲೇಜು ಮತ್ತು ಎಂಜಿನಿಯರಿಂಗ್ ಕಾಲೇಜಿಗೆ ಮೆರವಣಿಗೆ ಮೂಲಕ ಪಾರ್ಥಿವ ಶರೀರ ಕೊಂಡೊಯ್ದು ನುಡಿನಮನ ಸಲ್ಲಿಸಲಾಯಿತು.
ಬಳಿಕ ಅಲ್ಲಿಂದ ಮೆರವಣಿಗೆ ಮೂಲಕ ಇಲ್ಲಿನ ಕೋಅಪರೇಟಿವ್ ಟೌನ್ ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ರಾಮ ಭಟ್ ಅವರು ಮಾಜಿ ಶಾಸಕರಾಗಿದ್ದ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು. ಪಾರ್ಥಿವ ಶರೀರಕ್ಕೆ ಸರ್ಕಾರದ ಪರವಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು. ಕುಶಾಲತೊಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿದರು.

ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು ನುಡಿನಮನ ಸಲ್ಲಿಸಿದರು. ಬಳಿಕ ಮಹಾಲಿಂಗೇಶ್ವರ ದೇವಳದ ಎದುರು ಭಾಗದ ಮಡಿವಾಳಕಟ್ಟೆ ಹಿಂದೂ ರುದ್ರಭೂಮಿಗೆ ಕೊಂಡೊಯ್ದು ರಾಮ ಭಟ್ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು. ರಾಮಭಟ್ ಅವರ ಕುಟುಂಬದ ಸದಸ್ಯರುಇದ್ದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೋಟ ಶ್ರೀನಿವಾಸ ಪೂಜಾರಿ, ಡಿ.ವಿ.ಸದಾನಂದ ಗೌಡ, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಶಕುಂತಳಾ ಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

‘ರಾಮಭಟ್‌ರದ್ದು ಅಪರೂಪದ ವ್ಯಕ್ತಿತ್ವ’

ಪುತ್ತೂರು: ‘ಉರಿಮಜಲು ರಾಮ ಭಟ್‌ರು ಸೌಜನ್ಯ ಸಹಿತರಾಗಿ, ಜನರ ವಿಶ್ವಾಸದ ಕೇಂದ್ರವಾಗಿ, ಅಸಂಖ್ಯ ಜನರಿಗೆ ನೆರಳಾಗಿ ಬದುಕಿದ ಮಹಾನ್ ವ್ಯಕ್ತಿ. ಪಕ್ಷ ಶ್ರಮ ಹಾಗೂ ತ್ಯಾಗದ ನೆಲೆಯಲ್ಲಿದ್ದಾಗ ಪಕ್ಷವನ್ನು ಬೆಳೆಸಿದವರು. ರಾಜಕೀಯದ ಜತೆ ಪಕ್ಷಾತೀತವಾಗಿ ಹಾಗೂ ಧರ್ಮಾತೀತವಾಗಿ ಬೆಳೆದಂತಹ ಅಪರೂಪದ ವ್ಯಕ್ತಿತ್ವ ಅವರದು’ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಎಚ್. ಮಾಧವ ಭಟ್ಹೇಳಿದರು.

ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅವರು ಮಾತನಾಡಿ, ರಾಮ ಭಟ್ಟರು ವಿಶಾಲವಾಗಿ ಬೆಳೆದ ಆಲದಮರ. ಆ ಮರದಲ್ಲಿ ಎಷ್ಟೋ ಪಕ್ಷಿಗಳು ಸಂಸಾರ ಕಟ್ಟಿಕೊಂಡಿವೆ. ಅಡ್ಡ ಹಾದಿಯಲ್ಲಿ ಮತವೇ ಬೇಡ ಎಂದು ಸಾರ್ವಜನಿಕವಾಗಿ ಸಾರಿದ ಅದ್ಭುತ ರಾಜಕಾರಣಿಎಂದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವಿನಾಯಕ ಭಟ್ಟ ಗಾಳಿಮನೆ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಶಂಕರನಾರಾಯಣ ಭಟ್, ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ ಇದ್ದರು.

ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕಿ ಸುಚಿತ್ರಾ ಪ್ರಭು ನಿರೂಪಿಸಿದರು.

ಉರಿಮಜಲು ಕೆ. ರಾಮ ಭಟ್ಟ ಅವರ ನಿಧನದ ಪ್ರಯುಕ್ತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಮಂಗಳವಾರ ರಜೆ
ಸಾರಲಾಯಿತು.

ನೇತ್ರದಾನದ ಮಹದಾಸೆ

ಅನಾರೋಗ್ಯದಿಂದಾಗಿ ಸೋಮವಾರ ಸಂಜೆ ನಿಧನರಾಗಿದ್ದ ಮಾಜಿ ಶಾಸಕ ರಾಮ ಭಟ್ ಅವರ ನೇತ್ರ ದಾನ ಮಾಡಲಾಗಿದೆ. ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ರಾಮ ಭಟ್ ಅವರ ನಿಧನದ ಸುದ್ದಿ ತಿಳಿದ ಬಳಿಕ ಮಂಗಳೂರಿನ ಕೆ.ಎಸ್. ಹೆಗ್ಡೆ ಚಾರಿಟಬಲ್ ಟ್ರಸ್ಟ್‌ ವೈದ್ಯರು ಬಂದು ರಾಮ ಭಟ್ ಅವರ ಕಣ್ಣುಗಳನ್ನು ಪಡೆದುಕೊಂಡಿದ್ದಾರೆ. ಮರಣದ ನಂತರ ನೇತ್ರಗಳನ್ನು ದಾನ ಮಾಡಬೇಕು ಎಂಬವುದು ಅವರ ಮಹದಾಸೆ ಆಗಿತ್ತು ಎಂದು ರಾಮ ಭಟ್ ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ಶೈಕ್ಷಣಿಕ ಸಂಸ್ಥೆಗಳಲ್ಲಿ ಶ್ರದ್ಧಾಂಜಲಿ

ತನ್ನ ಸಾವಿನ ದಿನ ಯಾವುದೇ ಕಾರಣಕ್ಕೂ ಶಾಲಾ- ಕಾಲೇಜುಗಳಿಗೆ ರಜೆ ನೀಡಬಾರದು, ಬದಲಾಗಿ ಪಾಠ ಪ್ರವಚನಗಳು ಎಂದಿನಂತೆ ನಡೆಯಬೇಕು ಎಂದು ರಾಮ ಭಟ್ ಅವರು ಈ ಹಿಂದೆಯೇ ತಿಳಿಸಿದ್ದರು. ಹಾಗಾಗಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನಡೆಸಲ್ಪಡುತ್ತಿರುವ ಶೈಕ್ಷಣಿಕ ಸಂಸ್ಥೆಗಳಿಗೆ ಮಂಗಳವಾರ ರಜೆ ನೀಡದೆ ಶ್ರದ್ಧಾಂಜಲಿ ಸಭೆ ನಡೆಸಲಾಗಿತ್ತು.
ಪುತ್ತೂರಿನ ವಿವೇಕಾನಂದ ವಿದ್ಯಾಲಯ, ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು, ಅಂಬಿಕಾ ವಿದ್ಯಾಸಂಸ್ಥೆ ಮೊದಲಾದ ವಿದ್ಯಾಸಂಸ್ಥೆಗಳಲ್ಲಿ ರಾಮ ಭಟ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಪ್ರಧಾನಿ ಮೋದಿ ಸಂತಾಪ

ಜನಸಂಘದ ನಾಯಕ, ಪುತ್ತೂರಿನ ಮೊದಲ ಕಾಂಗ್ರೆಸೇತರ ಶಾಸಕ ಉರಿಮಜಲು ರಾಮ್ ಭಟ್ ಅವರ ನಿಧನಕ್ಕೆ ಪ್ರಧಾನಿ ಮೋದಿ ಅವರು ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಜನಸಂಘ ಮತ್ತು ಬಿಜೆಪಿ ಇತಿಹಾಸದಲ್ಲಿ ಉರಿಮಜಲು ಕೆ.ರಾಮ ಭಟ್ ಜಿ ಅವರಂತಹ ದಿಗ್ಗಜರಿಗೆ ವಿಶೇಷ ಸ್ಥಾನವಿದೆ. ಅವರು ಕರ್ನಾಟಕದಲ್ಲಿ ನಮ್ಮ ಪಕ್ಷವನ್ನು ಬಲಪಡಿಸಲು ಶ್ರಮಿಸಿದರು. ಜನರ ನಡುವೆ ದಣಿವರಿಯದೆ ಸೇವೆ ಸಲ್ಲಿಸಿದರು. ಅವರ ನಿಧನದಿಂದ ನನಗೆ ದುಃಖವಾಗಿದೆ. ಅವರ ಕುಟುಂಬಕ್ಕೆ ಸಂತಾಪ. ಓಂ ಶಾಂತಿ ಎಂದು ಮೋದಿ ಅವರು ಟ್ವಿಟ್ ಮಾಡಿದ್ದಾರೆ.

‘ಬೇರೆ ಯಾವ ವ್ಯಕ್ತಿತ್ವವೂ ಸಿಗದು’

‘ಆದರ್ಶ ರಾಜಕಾರಣಿ, ಭ್ರಷ್ಟಾಚಾರದ ವಿರೋಧಿಯಾಗಿ ಮೌಲ್ಯಯುತ ರಾಜಕಾರಣ ಮಾಡಿದ ಬಿಜೆಪಿ ಹಿರಿಯ ನೇತಾರ ಉರಿಮಜಲು ರಾಮಭಟ್ ಅವರಿಗೆ ರಾಮಭಟ್ ಅವರೇ ಸಾಟಿ ಆಗಿದ್ದಾರೆ’ ಎಂದು ಬಿಜೆಪಿ ಮುಖಂಡ ಡಿ.ವಿ. ಸದಾನಂದ ಗೌಡ ಶ್ರದ್ಧಾಂಜಲಿ ಸಭೆಯಲ್ಲಿ ಬಣ್ಣಿಸಿದರು.

ಶರಣರ ಗುಣ ಮರಣದಲ್ಲಿ ಎಂಬ ಮಾತಿನಂತೆ ರಾಮಭಟ್ ಅವರ ವ್ಯಕ್ತಿತ್ವ ಮತ್ತು ಆದರ್ಶ ಗುಣಗಳು ಅವರನ್ನು ಎಲ್ಲರೂ ಮೆಚ್ಚಿಕೊಳ್ಳಲು ಮತ್ತು ಹಚ್ಚಿಕೊಳ್ಳಲು ಕಾರಣ. ಇಂತಹ ಅಪರೂಪದ ನಾಯಕನನ್ನು ಬಿಜೆಪಿ ಕಳೆದುಕೊಂಡಿದೆ. ಸಂಘ ಮತ್ತು ಜನಸಂಘದ ಕಾರ್ಯಕರ್ತರಾಗಿ ತಮ್ಮ ಜೀವನ ಆರಂಭಿಸಿದ ಉರಿಮಜಲು ರಾಮಭಟ್ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ್ದರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

‘ಉರಿಮಜಲು ರಾಮಭಟ್ ಅವರು ರಾಜಕೀಯ ಜೀವನದಲ್ಲಿ ಕೈಕೆಸರು ಮಾಡದವರು. ಹಿಂದುತ್ವದ ಪ್ರತಿಪಾದನೆಯನ್ನು ತಮ್ಮ ಜೀವನದುದ್ದಕ್ಕೂ ಮಾಡಿದವರು’ ಎಂದುಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಶಾಸಕ ಸಂಜೀವ ಮಠಂದೂರು, ವಿಶ್ವಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಪ್ರೊ. ಎಂ.ಬಿ. ಪುರಣಿಕ್, ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್, ಧರ್ಮಗುರು ಎಫ್.ಎಕ್ಸ್.ಗೋಮ್ಸ್, ಕ್ಯಾಂಪ್ಕೊ ನಿಕಟಪೂರ್ವ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಎಂ.ಜಿ. ರಫೀಕ್ ನುಡಿನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT