ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನಲ್ಲಿ ಅಭಿವೃದ್ಧಿ ಪರ್ವ

ಒಳಾಂಗಣ ಕ್ರೀಡಾಂಗಣ, ವಾಹನ ನಿಲುಗಡೆ ಸಂಕೀರ್ಣಕ್ಕೆ ಶಿಲಾನ್ಯಾಸ: ಸಂಸದ ನಳಿನ್‌ಕುಮಾರ್‌
Last Updated 2 ನವೆಂಬರ್ 2021, 14:53 IST
ಅಕ್ಷರ ಗಾತ್ರ

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದ್ದು, ಮುಂಬರುವ ವರ್ಷದಲ್ಲಿ ಪಂಪ್‌ವೆಲ್‌ನಲ್ಲಿ ಬಹುದೊಡ್ಡ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

ನಗರದ ಉರ್ವ ಮಾರುಕಟ್ಟೆ ಬಳಿ ₹20.54 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕೋರ್ಟ್‌ಗಳನ್ನು ಒಳಗೊಂಡ ಒಳಾಂಗಣ ಕ್ರೀಡಾಂಗಣ ಹಾಗೂ ₹70 ಕೋಟಿ ವೆಚ್ಚದಲ್ಲಿ ಹಂಪನಕಟ್ಟೆ ಹಳೆ ಬಸ್ ನಿಲ್ದಾಣದ ಬಳಿ ಪಿಪಿಪಿ ಮಾದರಿಯಡಿ ನಿರ್ಮಾಣ ಮಾಡುತ್ತಿರುವ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಕಾಮಗಾರಿಗಳಿಗೆ ಮಂಗಳವಾರ ನಗರದ ರಂಗರಾವ್ ಪುರಭವನದಲ್ಲಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಮಂಗಳೂರು ಸ್ಮಾರ್ಟ್‌ ಸಿಟಿ ಕಾಮಗಾರಿಗಳನ್ನು ಎರಡನೇ ಹಂತದಲ್ಲಿ ಕೈಗೊಳ್ಳಲಾಯಿತು. ಆದರೂ ಕಾಮಗಾರಿಗಳಲ್ಲಿ ಮಂಗಳೂರು ನಂಬರ್ ಒನ್ ಆಗಿ ಹೊರಹೊಮ್ಮಿದೆ. ಅದಕ್ಕೆ ಪ್ರಮುಖ ಕಾರಣ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಶಾಸಕರ ಉತ್ಸಾಹ ಹಾಗೂ ಪ್ರೋತ್ಸಾಹ. ಮೇಯರ್ ಕೂಡ ಸ್ಮಾರ್ಟ್‌ ಸಿಟಿಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕಾಮಗಾರಿಗಳಿಗೆ ಕೇಂದ್ರದಿಂದ ₹500 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಮಂಗಳೂರನ್ನು ಅಭಿವೃದ್ಧಿಶೀಲ ಹಾಗೂ ಮಾದರಿ ನಗರವನ್ನಾಗಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಕಾಂಕ್ರೀಟ್‌ ರಸ್ತೆಗಳ ನಿರ್ಮಾಣ, ಕಾರ್ಕ್ ಟವರ್ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನೂ ಹಲವಾರು ಪ್ರಗತಿಯಲ್ಲಿವೆ. ಮಂಗಳೂರನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಮನವಿ ಮಾಡಿದರು.

ಸ್ಮಾರ್ಟ್‌ ಸಿಟಿಯ ಕಾಮಗಾರಿಗಳನ್ನು ಕೈಗೊಳ್ಳಲು ಯಡಿಯೂರಪ್ಪ ನೇತೃತ್ವದ ಸರ್ಕಾರದ ಮೊದಲ ಹಂತದಲ್ಲಿ ₹300 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಅದರಲ್ಲಿ ಗುಣಮಟ್ಟದ ಕಾಂಕ್ರೀಟ್‌ ರಸ್ತೆಗಳು ಸೇರಿದಂತೆ, ಇತರೆ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು, ಹಿಂದಿಗಿಂತಲೂ ಇದೀಗ ನಗರದಲ್ಲಿ ಸುಂದರ ರಸ್ತೆಗಳು ನಿರ್ಮಾಣವಾಗಿವೆ, ಸ್ಮಾರ್ಟ್ ಸಿಟಿಯೊಂದಿಗೆ ಅಮೃತ್ ಯೋಜನೆಯಡಿ ₹180 ಕೋಟಿ ಬಿಡುಗಡೆ ಮಾಡಲಾಗಿದೆ. ಆ ಯೋಜನೆಯಡಿ ಮೂಲ ಸೌಕರ್ಯ ಹಾಗೂ ಯುಜಿಡಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ರಾಜ್ಯದಲ್ಲಿ ಅಮೃತ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯನ್ನು ಮಂಗಳೂರು ಪಡೆದಿದೆ. ಜನರಿಗೆ ನಿರಂತರ ಕುಡಿಯುವ ನೀರಿನ ಸೌಲಭ್ಯಕ್ಕೆ ಸರ್ಕಾರದಿಂದ ಈಗಾಗಲೇ
₹789 ಕೋಟಿ ಅನುದಾನ ದೊರಕಿದೆ. ಗ್ಯಾಸ್ ಪೈಪ್‌ಲೈನ್ ಮೂಲಕ ಮನೆ ಮನೆಗೆ ಅಡುಗೆ ಅನಿಲ ತಲುಪಿಸುವ ಕೆಲಸವನ್ನು ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಮಾಡಲಾಗುತ್ತಿದೆ ಎಂದರು.

ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿದರು. ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ ಉಪಸ್ಥಿತರಿದ್ದರು.

‘ರಾಜಕಾಲುವೆಗೆ ತಡೆಗೋಡೆ’

ಪ್ರತಿ ವರ್ಷ ಮಳೆಗಾಲದಲ್ಲಿ ನಗರದ ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ನುಗ್ಗುವ ಕಾರಣ ಜನರಿಗೆ ತೊಂದರೆ ಉಂಟಾಗುತ್ತಿದೆ. ರಾಜಕಾಲುವೆ ಹತ್ತಿರವಿರುವ ವಾರ್ಡ್‌ಗಳು ಮುಳುಗಡೆ ಆಗುತ್ತಿವೆ. ಹಾನಿ ಪ್ರದೇಶವನ್ನು ಸರಿಪಡಿಸುವ ಉದ್ದೇಶದಿಂದ ₹65 ಕೋಟಿ ವೆಚ್ಚದಲ್ಲಿ ತಡೆಗೋಡೆಯನ್ನು ನಿರ್ಮಿಸಿ, ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದರು.

ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ, ನಗರವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಹಂಪನಕಟ್ಟೆ ಬಳಿಯ 500ಕ್ಕೂ ಹೆಚ್ಚಿನ ಕಾರ್ ಪಾರ್ಕಿಂಗ್ ನಿರ್ಮಾಣ ಹಾಗೂ ಉರ್ವ ಮಾರುಕಟ್ಟೆ ಬಳಿಯ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕೋರ್ಟ್‌ಗಳ ಒಳಾಂಗಣ ಕ್ರೀಡಾಂಗಣದ ಕಾಮಗಾರಿಗಳು ಶೀಘ್ರವೇ ನಿರ್ಮಾಣಗೊಂಡು, ಹೆಚ್ಚಿನ ಕ್ರೀಡಾಪಟುಗಳು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT