ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಪುನರ್ವಸತಿಗೆ ಒತ್ತಾಯಿಸಿ ನಿರ್ವಸಿತರಿಂದ ಪ್ರತಿಭಟನೆ

ಎಂ.ಆರ್‌.ಪಿ.ಎಲ್ ನಾಲ್ಕನೇ ಹಂತದ ವಿಸ್ತರಣೆ
Last Updated 21 ಮಾರ್ಚ್ 2023, 5:33 IST
ಅಕ್ಷರ ಗಾತ್ರ

ಮಂಗಳೂರು: ಎಂಆರ್‌ಪಿಎಲ್ ನಾಲ್ಕನೇ ಹಂತದ ವಿಸ್ತರಣೆ ಯೋಜನೆಗಾಗಿ ಜಾಗ ಬಿಟ್ಟುಕೊಟ್ಟ ಮಂಗಳೂರು ತಾಲ್ಲೂಕಿನ ಕುತ್ತೆತ್ತೂರು, ಪೆರ್ಮುದೆ, ತೆಂಕಎಕ್ಕಾರು, ಮೂಳೂರು ಮತ್ತು ಕಂದಾವರ ಗ್ರಾಮಗಳ ನಿರ್ವಸಿತ ಕುಟುಂಬಗಳಿಗೆ ಸೂಕ್ತ ಸವಲತ್ತು ನೀಡಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಭೂಸ್ವಾಧೀನದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಯೋಜನೆಗೆ ಅನುಗುಣವಾಗಿ ಸವಲತ್ತು ನೀಡಬೇಕು ಎಂದು ಒತ್ತಾಯಿಸಿ ಈ ಯೋಜನೆಯ ಸಂತ್ರಸ್ತ ಕುಟುಂಬಗಳು ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಎಂಆರ್‌ಪಿಎಲ್‌ ನಾಲ್ಕನೇ ಹಂತದ ಭೂನಿರ್ವಸಿತರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.

ಎಂಆರ್‌ಪಿಎಲ್ ನಾಲ್ಕನೇ ಹಂತದ ವಿಸ್ತರಣೆ ಯೊಜನೆಗಾಗಿ ಭೂ ಸ್ವಾಧೀನಪಡಿಸಿಕೊಂಡು ಆರೂ ವರ್ಷಗಳೇ ಕಳೆದಿವೆ. ಇನ್ನೂ ಭೂ ಸಂತ್ರಸ್ತರಿಗೆ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಯೋಜನೆಗೆ ಅನುಗುಣವಾಗಿ ಸಿಗಬೇಕಾದ ಸವಲತ್ತುಗಳು ಸಿಕ್ಕಿಲ್ಲ. ಕಂಪನಿಯಲ್ಲಿ ಭೂ ಸಂತ್ರಸ್ತರಿಗೆ ಉದ್ಯೋಗ ನೀಡಿಲ್ಲ. ಪುನರ್ವವಸತಿ ಕಾಲೊನಿಗೆ ಮೂಲಸೌಕರ್ಯ ಒದಗಿಸಿಲ್ಲ. ಮನೆ ನಿರ್ಮಾಣ ವೆಚ್ಚ, ಸಾಗಣೆ ವೆಚ್ಚ ನಿರ್ವಹಣಾ ವೆಚ್ಚವನ್ನು ಭರಿಸಬೇಕು. ಪುನರ್ವಸತಿ ಕಾಲೋನಿಯಲ್ಲಿ ಮನೆ ನಿರ್ಮಾಣವಾಗುವರೆಗೂ ಸಂತ್ರಸ್ತ ಕುಟುಂಬಗಳಿಗೆ ಮನೆ ಬಾಡಿಗೆ ವೆಚ್ಚವ ಪಾವತಿಸಬೇಕು. ಆದರೆ, ಸಂತ್ರಸ್ತ ಕುಟುಂಬಗಳು ಈ ಸವಲತ್ತುಗಳಿಂದ ವಂಚಿತವಾಗಿವೆ‘ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಬಗ್ಗೆ ವಿಧಾನಪರಿಷತ್ತಿನ ಭರವಸೆಗಳ ಸಮಿತಿ ಅಧ್ಯಕ್ಷ ಬಿ.ಎಂ. ಫಾರೂಕ್ ಹಾಗೂ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

‘ಈ ಸವಲತ್ತುಗಳನ್ನು ನೀಡಲು ಆರ್ ಆ್ಯಂಡ್‌ ಆರ್‌ ನೀತಿಯ ಬಗ್ಗೆ ಆದೇಶ ಹೊರಡಿಸುವ ಅಗತ್ಯ ಇದೆ. ಈ ಕಾರ್ಯ ಇದುವರೆಗೂ ಆಗಿಲ್ಲ. ಈ ಆದೇಶ ಹೊರಡಿಸಿದರೆ ಭೂ ಸ್ವಾಧೀನಪಡಿಸಿಕೊಡುವಂತೆ ಕೋರಿಕೆ ಸಲ್ಲಿಸಿದ್ದ ಎಂಆರ್‌ಪಿಎಲ್‌ನವರು ಪ್ರಸ್ತಾವನ ಸಲ್ಲಿಸಿ ಅನುಮೋದನೆ ಪಡೆಯಲು ಅವಕಾಶವಾಗುತ್ತದೆ’ ಎಂದು ಸಮಿತಿಯ ಮುಖಂಡರು ಒತ್ತಾಯಿಸಿದರು.

‘ಉದ್ಯೋಗ ಬೇಡ– ₹ 60 ಲಕ್ಷ ನೀಡಿ’

‘ಕೈಗಾರಿಕೆಗಾಗಿ ಮನೆ ಮತ್ತು 14.27ಎಕ್ರೆ ಫಲವತ್ತಾದ ಕೃಷಿ ಜಮೀನುಗಳನ್ನು ಕಳೆದುಕೊಂಡು 16 ವರ್ಷಗಳು ಕಳೆದರೂ ನನಗೆ ಈ ತನಕವೂ ಉದ್ಯೋಗವಾಗಲೀ, ಪರಿಹಾರವಾಗಲೀ ಸಿಕ್ಕಿಲ್ಲ. ನನಗೆ ಉದ್ಯೋಗ ಬೇಡ. ಅದರ ಬದಲು ₹ 60 ಲಕ್ಷ ಪರಿಹಾರ ನೀಡಬೇಕು’ ಎಂದು ನಿರ್ವಸಿತರಾದ ತಾಯಿ ಕುತ್ತೆತ್ತೂರು ಗ್ರಾಮದ ಮೇರಿ ಪತ್ರಾವೊ (ಗ್ರೆಗರಿ ಪತ್ರಾವೊ ಅವರ ತಾಯಿ) ಒತ್ತಾಯಿಸಿದ್ದಾರೆ.

ಈ ಕುರಿತು ಅವರು ವಿಧಾನಪರಿಷತ್ತಿನ ಭರವಸೆಗಳ ಸಮಿತಿಗೆ ಗ್ರೆಗರಿ ಪತ್ರಾವೊ ಮನವಿ ಸಲ್ಲಿಸಿದರು.

‘ಕಳವಾರು ಗ್ರಾಮದದಲ್ಲಿ ನನ್ನ ಕುಟುಂಬದ 14.27 ಎಕರೆ ಕೃಷಿಭೂಮಿಯನ್ನು 2006ರ ಮಾರ್ಚ್‌ 3ರಂದು ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡು ಎಂಆರ್‌ಪಿಎಲ್‌ಗೆ ಹಸ್ತಾಂತರಿಸಲಾಗಿದೆ. ಪುನರ್ವಸತಿ ಮತ್ತು ಪುನರ್ನಿರ್ಮಾಣ ಯೋಜನೆಯಂತೆ ಮನೆಗೊಂದು ಉದ್ಯೋಗ ನೀಡಬೇಕಿದೆ. ಆದರೆ ನನಗೆ ಉದ್ಯೋಗಬೇಡ. ಅದರ ಬದಲು ಹಣ ನೀಡಬೇಕು‘ ಎಂದು ಮನವಿಯಲ್ಲಿ ಮೇರಿ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT