ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ಭೀಕರ ರಣಕಟ್ಟೆಯಲ್ಲಿ ಬಲಿದಾನದ ಮೆಲುಕು

Last Updated 14 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಷ್‌ ಆಳ್ವಿಕೆ ವಿರುದ್ಧ 1837ರಲ್ಲಿ ದಂಗೆ ಎದ್ದ ಹೋರಾಟಗಾರರನ್ನು ನಗರದಲ್ಲಿ ಬಿಕರ್ನಕಟ್ಟೆಯಲ್ಲಿ ನೇಣಿಗೆ ಹಾಕಿದ ಕಹಿ ನೆನಪನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಮೆಲುಕು ಹಾಕಲಾಯಿತು.

ನಗರದಲ್ಲಿ ಬಿಕರ್ನಕಟ್ಟೆಯಲ್ಲಿ ನ್ಯಾಯಕಟ್ಟೆಯನ್ನು ಕಟ್ಟಿಸಿದ್ದ ಪದವು ಮೇಗಿನಮನೆ ವಂಶಸ್ಥ ಉಮೇಶ್‌ ರೈ ಅವರು ಇಲ್ಲಿನ ನ್ಯಾಯಕಟ್ಟೆಯ ಬಳಿ ರಾಷ್ಟ್ರಧ್ವಜಾರೋಹಣ ಭಾನುವಾರ ನೆರವೇರಿಸಿದರು. ಅಲ್ಲಿಂದ ಪದವು ಶಾಲೆವರೆಗೆ ತಿರಂಗಾ ಮೆರವಣಿಗೆ ನಡೆಯಿತು

‘ಬಿಕರ್ನಕಟ್ಟೆಯ ನ್ಯಾಯಕಟ್ಟೆಯಲ್ಲಿ ಕಲ್ಯಾಣಪ್ಪ ಅವರನ್ನು ನೇಣಿಗೆ ಹಾಕಲಾಗಿತ್ತು. ಸುಳ್ಯ ಹೋರಾಟಕ್ಕೆ ಬೆಂಬಲ ನೀಡಿದ ನಂದಾವರದ ಬಂಗರಸ ಅವರ ಶವವನ್ನು ಇಲ್ಲಿಗೆ ಸ್ವಲ್ಪ ದೂರದಲ್ಲಿದ್ದ ಬಂಗಾರ ಕಟ್ಟೆಯಲ್ಲಿ ನೇತು ಹಾಕಿದ್ದರು. ಪದವು ಪ್ರದೇಶದ ಐದು ಕಟ್ಟೆಗಳಲ್ಲಿ ಐವರನ್ನು ನೇಣಿಗೆ ಹಾಕಲಾಗಿತ್ತು ಎಂಬುದಾಗಿ ನಮ್ಮ ಹಿರಿಯರು ಹೇಳುತ್ತಿದ್ದರು’ ಎಂದು ಉಮೇಶ್ ರೈ ಮೆಲುಕು ಹಾಕಿದರು.

‘ಪದವು, ಕದ್ರಿ, ಕಂಕನಾಡಿ ಹಾಗೂ ಮರೋಳಿ ಗ್ರಾಮಗಳಲ್ಲಿ ಮೂರು ಗ್ರಾಮಗಳಿಗೆ ನಮ್ಮ ವಂಶಜರು ‌ಪಟ್ಲೇರ್‌ ಆಗಿದ್ದರು. ಇಲ್ಲಿ ಹಿಂದೆ ಎತ್ತಿನ ಗಾಡಿ ಸಾಗುವ ದಾರಿ ಇತ್ತು. 1832ರಲ್ಲಿ ನಮ್ಮ ವಂಶಜರು ಕಟ್ಟೆಯನ್ನು ಕಟ್ಟಿಸಿದ್ದರು. ಅದರಲ್ಲಿ ನ್ಯಾಯ ಪಂಚಾಯಿತಿ ನಡೆಯುತ್ತಿತ್ತು. ದಾರಿ ಹೋಕರಿಗೆ ಬೆಲ್ಲ ನೀರು ನೀಡುವುದಕ್ಕೂ ವ್ಯವಸ್ಥೆ ಮಾಡಿದ್ದರು. ಆಗ ಗುರುಪುರ ಹೊಳೆಗೆ ಸೇತುವೆ ಇರಲಿಲ್ಲ. ಹೊಳೆ ದಾಟಿ ಆಚೆ ಹೋಗಬೇಕಾದ ಕೆಲವರು ರಾತ್ರಿ ಈಚೆ ದಡದಲ್ಲೇ ಉಳಿದುಕೊಳ್ಳಬೇಕಾಗುತ್ತಿತ್ತು. ಅದಕ್ಕೂ ನಮ್ಮ ವಂಶಜರು ವ್ಯವಸ್ಥೆ ಮಾಡುತ್ತಿದ್ದರು. ಈ ಕಟ್ಟೆ ಇರುವ 2 ಸೆಂಟ್ಸ್‌ ಜಾಗ ಈಗಲೂ ನಮ್ಮ ಕುಟುಂಬದ ಹೆಸರಿನಲ್ಲೇ ಇದೆ’ ಎಂದರು.

ಅಮರ ಸುಳ್ಯ ದಂಗೆ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಅನಿಂದಿತ್‌ ಗೌಡ (ಸ್ವಾತಂತ್ರ್ಯ ಹೋರಾಟಗಾರ ಕೂಜಿಗೂಡು ಅಪ್ಪಯ್ಯ ಗೌಡರ ಆರನೇ ತಲೆಮಾರಿನವರು), ‘ ಬೀರಣ್ಣ, ಮುತ್ತಣ್ಣ, ಬಂಗರಸು, ಕಲ್ಯಾಣಪ್ಪ ಹಾಗೂ ಉಪ್ಪಿನಂಗಡಿ ಮಂಜ ಅವರನ್ನು ಬಿಕರ್ನಕಟ್ಟೆ ಪ್ರದೇಶದಲ್ಲಿ ನೇತು ಹಾಕಲಾಗಿತ್ತು ಎಂಬುದು ಜಾನಪದ ಮೂಲಗಳು ಹಾಗೂ ಬ್ರಿಟಿಷರ ಕಾಲದ ದಾಖಲೆಗ‌ಳಿಂದ ತಿಳಿದುಬರುತ್ತದೆ. ಈ ಐವರು ಹುತಾತ್ಮರಲ್ಲಿ ಬೀರಣ್ಣ ಮತ್ತು ಮುತ್ತಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿಯೇ ನೇಣಿಗೆ ಹಾಕಲಾಗಿದ್ದು, ಈ ಕುರಿತ ದಾಖಲೆಗಳಿವೆ. ಅಮರ ಸುಳ್ಯ ಹೋರಾಟದ ನೇತಾರ ಕಲ್ಯಾಣಪ್ಪ ಅವರನ್ನು ಹಾಗೂ ಜನರನ್ನು ಹೋರಾಟಕ್ಕೆ ಅಣಿಗೊಳಿಸುತ್ತಿದ್ದ ಉಪ್ಪಿನಂಗಡಿ ಮಂಜನನ್ನು ಯಾವುದೇ ವಿಚಾರಣೆಗೆ ಒಳಪಡಿಸದೆಯೇ ನೇಣಿಗೆ ಹಾಕಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹೋರಾಟಕ್ಕೆ ಬೆಂಬಲ ನೀಡಿದ್ದ ನಂದಾವರದ ಬಂಗರಸ ಅವರನ್ನು ಬ್ರಿಟಿಷರು ಬಂಧಿಸಿದ್ದರು. ಬ್ರಿಟಿಷರಿಂದ ಹತ್ಯೆಗೊಳಗಾಗುವುದು ಅವರಿಗೆ ಇಷ್ಟ ಇರಲಿಲ್ಲ. ಬಂಗರಸರು ತಮ್ಮ ವಜ್ರದುಂಗುರ ನುಂಗಿ ಸಲ್ಲೇಖನ ವ್ರತ ಕೈಗೊಂಡು ಪ್ರಾಣ ತ್ಯಜಿಸಿದ್ದರು. ಅವರ ಮೃತದೇಹವನ್ನು ಬ್ರಿಟಿಷರು ಎಳೆದು ತಂದು ಇಲ್ಲಿನ ಕಟ್ಟೆಯೊಂದರ ಮರಕ್ಕೆ ನೇತು ಹಾಕಿದ್ದರು. ಬ್ರಿಟಿಷರ ವಿರುದ್ಧ ತಿರುಗಿ ಬಿದ್ದರೆ ಇದೇ ಗತಿ ಎಂದು ಜನರಲ್ಲಿ ಭೀತಿ ಹುಟ್ಟಿಸಲಾಗಿತ್ತು’ ಎಂದು ಅವರು ವಿವರಿಸಿದರು.

ಅಮರ ಸುಳ್ಯ ದಂಗೆ ಬಗ್ಗೆ ವಿವರಿಸಿದಶಾಸಕ ವೇದವ್ಯಾಸ ಕಾಮತ್‌, ‘ಭೀಕರ ರಣಕಟ್ಟೆಯಲ್ಲಿ ಐವರು ಹೋರಾಟಗಾರರನ್ನು ನೇಣಿಗೆ ಹಾಕಿದ ವಿಚಾರ ಯಾವ ಪಠ್ಯದಲ್ಲೂ ಸಿಗುವುದಿಲ್ಲ. ಇಂತಹ ವಿಚಾರಗಳನ್ನು ಮತ್ತೆ ಜನ ಸ್ಮರಿಸುವಂತೆ ಮಾಡುವುದು ನಮ್ಮ ಉದ್ದೇಶ’ ಎಂದರು.

ಮೇಯರ್‌ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯೆ ಕಾವ್ಯಾ ನಟರಾಜ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸುದರ್ಶನ್‌, ಪಕ್ಷದ ಪ್ರಮುಖರಾದ ವಿಕಾಸ್‌ ಪುತ್ತೂರು, ಮೋನಪ್ಪ ಭಂಡಾರಿ, ಕಸ್ತೂರಿ ಪಂಜ, ಸುಧಾಕರ ಅಡ್ಯಾರ್‌, ರಮೇಶ್‌ ಕಂಡೆಟ್ಟು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT