ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯ ನಿಭಾಯಿಸಿದ ನಿಜಾರ್ಥದ ‘ಸ್ನೇಹಿತ’

Last Updated 1 ಆಗಸ್ಟ್ 2021, 2:21 IST
ಅಕ್ಷರ ಗಾತ್ರ

ಮಂಗಳೂರು: ‘ಆಗಷ್ಟೇ ರಂಜಾನ್ ಉಪವಾಸ ಮುಗಿದಿತ್ತು. ನನಗೆ ಮತ್ತು ಪತ್ನಿಗೆ ತೀವ್ರ ತಲೆಸಿಡಿತ, ಕೆಮ್ಮು, ಜ್ವರ. ಆಸ್ಪತ್ರೆಗೆ ಹೋಗಲು ಸುತಾರಾಂ ಮನಸ್ಸಿಲ್ಲ. ಪ್ರಾಣ ಹೋದರೂ ಚಿಂತೆಯಿಲ್ಲ, ಮನೆಯಲ್ಲೇ ಚಿಕಿತ್ಸೆ ಪಡೆಯವುದೆಂದು ನಿರ್ಧರಿಸಿ, ಐಸೊಲೇಟ್ ಆದೆವು. ಪತ್ನಿಯ ಆರೋಗ್ಯ ಸ್ಥಿತಿ ಬಿಗಡಾಯಿಸಿತು. ಸ್ನೇಹಿತನಿಗೆ ಕರೆ ಮಾಡಿ, ಆತ ದೇವರಂತೆ ಬಂದು ನಮ್ಮನ್ನು ಕಾಪಾಡಿದ’ ಎನ್ನುತ್ತ ಮಾತಿಗಿಳಿದರು ಹಿರಿಯರಾದ ಮೊಹಮ್ಮದ್ ಬಡ್ಡೂರು.

‘ಕೋವಿಡ್ ಬಾಧಿತರನ್ನು ಕುಟುಂಬಸ್ಥರೇ ದೂರ ಮಾಡುವ ಕಾಲ. ಆ ವೇಳೆ ನನ್ನ ಒಂದು ಮೊಬೈಲ್ ಫೋನ್ ಕರೆಗೆ ಸ್ನೇಹಿತ ಯು.ಎಚ್. ಉಮರ್ ಮನೆ ಬಾಗಿಲಿಗೆ ಬಂದರು. ಬರುವಾಗಲೇ ವೈದ್ಯರ ಸಲಹೆ ಮೇರೆಗೆ ಔಷಧ, ಪಲ್ಸ್ ಆಕ್ಸಿಮೀಟರ್ ಹಿಡಿದು ಬಂದಿದ್ದರು. ನನ್ನ ದೇಹದಲ್ಲಿ ಆಮ್ಲಜನಕ ಮಟ್ಟ ಸಮಸ್ಥಿತಿಯಲ್ಲಿತ್ತು. ಆದರೆ, ಪತ್ನಿಯ ಆಮ್ಲಜನಕ ಮಟ್ಟ ಶೇ 89ಕ್ಕೆ ಇಳಿದಿತ್ತು. ಆಕೆ ವಿಚಲಿತಳಾಗದಂತೆ ನಿಭಾಯಿಸಿದ ಅವರು, ಅವಳಿಗೆ ಪ್ರೋನಿಂಗ್ (ಬೋರಲಾಗಿ ಮಲಗುವ ಕ್ರಮ), ಕಪ್ಲಿಂಗ್ ಎಲ್ಲ ಕಲಿಸಿದರು. ಆಕೆಯಲ್ಲಿ ಆತ್ಮವಿಶ್ವಾಸ ತುಂಬಿದರು’ ಎನ್ನುವಾಗ ಅವರಿಗೆ ಸ್ನೇಹಿತನ ಬಗ್ಗೆ ಹೆಮ್ಮೆಯ ಭಾವ.

ಕೋವಿಡ್ ಕಾಲದಲ್ಲಿ ಅನೇಕ ಸ್ನೇಹಿತರು ಹಣಕಾಸಿನ ನೆರವು ನೀಡಿದರು. ಅವರನ್ನೂ ಮರೆಯಲಾರೆ. ಆದರೆ, ಉಮರ್, ತನ್ನ ಜೀವಕ್ಕೆ ಅಪಾಯ ಆಗಬಹುದಾದ ಸಾಧ್ಯತೆಯನ್ನು ಲೆಕ್ಕಿಸದೆ, ನನ್ನ ಕುಟುಂಬಕ್ಕೆ ನೆರವಾದರು. ಎರಡು ದಿನಗಳಲ್ಲಿ ಪತ್ನಿಯ ಆಮ್ಲಜನಕ ಮಟ್ಟ ಸಹಜ ಸ್ಥಿತಿಗೆ ಬಂತು. ನಮಗೆ ಸಂಪೂರ್ಣ ಗುಣಮುಖವಾಗುವವರೆಗೆ ದಿನಕ್ಕೆರಡು ಬಾರಿ ಕರೆ ಮಾಡುತ್ತಿದ್ದರು. ದುರಿತ ಕಾಲದಲ್ಲಿ ಅವರು ಮಾಡಿದ ಉಪಕಾರ ಮರೆಯಲಾಗದು. ಗೆಳೆಯನ ಕರ್ತವ್ಯವನ್ನು ಪರಿಪೂರ್ಣವಾಗಿ ನಿಭಾಯಿಸಿದ್ದಾರೆ ಎಂದು ಮೊಹಮ್ಮದ್ ಬಡ್ಡೂರು ಗೆಳೆಯನ ಸಹಕಾರ ಸ್ಮರಿಸಿದರು.

‘ನನಗಷ್ಟೇ ಅಲ್ಲ, ನನ್ನಂತಹ ಹತ್ತಾರು ಕೋವಿಡ್ ಬಾಧಿತರಿಗೆ ಉಮರ್ ಆಪತ್ಬಾಂಧವರು. ಮಾನಸಿಕ ಸ್ಥೈರ್ಯವೇ ಕೋವಿಡ್ ರೋಗಿಗಳಿಗೆ ದೊಡ್ಡ ಮದ್ದು. ಔಷಧದ ಜತೆಗೆ ಇದು ಮುಖ್ಯವಾಗಿ ಬೇಕು. ಆದರೆ, ಸಮಾಜದಲ್ಲಿ ಕೋವಿಡ್ ಬಾಧಿತರನ್ನು ಅಸ್ಪ್ರಶ್ಯರಂತೆ ಕಾಣುತ್ತಾರೆ. ಇಂತಹ ಸಂದರ್ಭದಲ್ಲಿ ಸೇವೆ ಮಾಡಿದ ಉಮರ್ ಅನೇಕರು ರೋಗಿಗಳಿಗೆ ಬಂಧುಗಳು’ ಎಂದು ಅಭಿಪ್ರಾಯ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT