ಶುಕ್ರವಾರ, ನವೆಂಬರ್ 22, 2019
22 °C
ಟ್ವಿಟರ್‌ನಲ್ಲಿ ಪತ್ರ ಹಂಚಿಕೊಂಡ ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ

ಗಾಂಜಾ ಬಿಟ್ಟ ಯುವಕನಿಂದ ಪೊಲೀಸರಿಗೆ ಧನ್ಯವಾದ!

Published:
Updated:

ಮಂಗಳೂರು: ಆರು ವರ್ಷಗಳಿಂದ ಗಾಂಜಾ ವ್ಯಸನಿಯಾಗಿದ್ದು, ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಿದ್ದ ಯುವಕನೊಬ್ಬ ನಗರ ಪೊಲೀಸರ ಸಕಾಲಿಕ ಬುದ್ಧಿ ಮಾತಿನಿಂದ ಮಾದಕವಸ್ತು ಸೇವನೆಯಿಂದ ಹೊರಬಂದಿದ್ದಾನೆ. ಇದಕ್ಕಾಗಿ ಪೊಲೀಸರಿಗೆ ಧನ್ಯವಾದವನ್ನೂ ಸಲ್ಲಿಸಿದ್ದಾನೆ.

ಸೆಪ್ಟೆಂಬರ್‌ 2ರಂದು ಗಾಂಜಾ ಸೇವಿಸುತ್ತಿದ್ದ ಯುವಕನನ್ನು ಕಾವೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಠಾಣೆಗೆ ಕರೆದೊಯ್ದ ಬಳಿಕ ಇನ್‌ಸ್ಪೆಕ್ಟರ್‌ ರಾಘವ್‌ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸಗೌಡ ಅವರು ಯುವಕನ ಆಪ್ತ ಸಮಾಲೋಚನೆ ನಡೆಸಿ ಬುದ್ಧಿವಾದ ಹೇಳಿದ್ದರು. ಈಗ ಸಂಪೂರ್ಣವಾಗಿ ಗಾಂಜಾ ಸೇವನೆ ತ್ಯಜಿಸಿರುವ ಆತ, ಪೊಲೀಸರಿಗೆ ಧನ್ಯವಾದ ಹೇಳಿ ಪತ್ರ ಬರೆದಿದ್ದಾನೆ. ನಗರ ಪೊಲೀಸ್ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರು ಈ ಪತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಆರು ವರ್ಷಗಳಿಂದ ನಾನು ಗಾಂಜಾ ವ್ಯಸನಿಯಾಗಿದ್ದೆ. ಅದರಿಂದಾಗಿ ಶಿಕ್ಷಣದ ಬಗ್ಗೆ ಆಸಕ್ತಿಯೇ ಇಲ್ಲವಾಗಿತ್ತು. ಭವಿಷ್ಯದ ಕುರಿತೂ ಯೋಚಿಸುತ್ತಿರಲಿಲ್ಲ. ಗಾಂಜಾ ಸೇವನೆ ತ್ಯಜಿಸಲು ಹಲವು ಪ್ರಯತ್ನ ಮಾಡಿದ್ದೆ. ಆದರೆ, ಯಶಸ್ವಿಯಾಗಿರಲಿಲ್ಲ. ಗಾಂಜಾ ಸೇವನೆಗೆ ದಾಸನಾಗಿದ್ದೆ’ ಎಂದು ಯುವಕ ಪತ್ರದಲ್ಲಿ ಹೇಳಿದ್ದಾನೆ.

‘ಸೆ.2ರಂದು ಗಾಂಜಾ ಸೇವಿಸುತ್ತಿದ್ದಾಗ ವಶಕ್ಕೆ ಪಡೆದ ಪೊಲೀಸರು ನನ್ನನ್ನು ಠಾಣೆಗೆ ಕರೆದೊಯ್ದರು. ಅಲ್ಲಿ ಇನ್‌ಸ್ಪೆಕ್ಟರ್‌ ರಾಘವ್‌ ಮತ್ತು ಎಸಿಪಿ ಶ್ರೀನಿವಾಸ್ ಅವರು ಜೀವನ ಹಾಗೂ ಉದ್ಯೋಗದ ಮಹತ್ವ ಕುರಿತು ನನಗೆ ತಿಳಿಹೇಳಿದರು. ಒಳ್ಳೆಯ ಜೀವನವನ್ನು ನಡೆಸುವ ವಿಧಾನ ತಿಳಿಸುವ ಮೂಲಕ ಅವರಿಬ್ಬರೂ ನನ್ನನ್ನು ಒಳ್ಳೆಯ ಮಾರ್ಗದಲ್ಲಿ ಮುನ್ನಡೆಸಿದರು. ಈಗ ನಾನು ಸಂಪೂರ್ಣವಾಗಿ ಗಾಂಜಾ ಸೇವನೆಯಿಂದ ಹೊರಬಂದಿದ್ದೇನೆ’ ಎಂದು ಉಲ್ಲೇಖಿಸಿದ್ದಾನೆ.

‘ಮತ್ತೆ ನಾನು ಹಳೆಯ ದುಶ್ಚಟಕ್ಕೆ ಮರಳುವ ಅಪಾಯಕಾರಿ ಸನ್ನಿವೇಶದಲ್ಲಿ ಎಂತಹ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ನಿಮ್ಮ ಪೊಲೀಸ್‌ ಅಧಿಕಾರಿಗಳು ನನಗೆ ತಿಳಿಸಿದರು. ಇದರಿಂದ ನನಗೆ ಅನುಕೂಲವಾಗಿದೆ. ನಾನು ಮತ್ತು ನನ್ನ ಕುಟುಂಬ ಪೊಲೀಸ್‌ ಇಲಾಖೆಗೆ ಆಭಾರಿಯಾಗಿದ್ದೇವೆ. ಪೊಲೀಸರ ಪಾಠದಿಂದ ನನ್ನ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯಾಗಿದೆ. ಇದಕ್ಕಾಗಿ ಪೊಲೀಸರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಯುವಕ ಪತ್ರದಲ್ಲಿ ತಿಳಿಸಿದ್ದಾನೆ.

ಪ್ರತಿಕ್ರಿಯಿಸಿ (+)