ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಹಲವೆಡೆ ಹಾಗೆಯೇ ಇದೆ ಕಸದ ರಾಶಿ

ಆರಂಭವಾಗಿಲ್ಲ ಒಳಚರಂಡಿ ನಿರ್ವಹಣೆ
Last Updated 21 ಮಾರ್ಚ್ 2023, 4:17 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರ ಹಾಗೂ ಒಳಚರಂಡಿ ನಿರ್ವಹಣೆ ಕಾರ್ಮಿಕರ ಮುಷ್ಕರ ಸೋಮವಾರವೂ ಮುಂದುವರಿದಿದೆ.

ಪಾಲಿಕೆ ವ್ಯಾಪ್ತಿಯ ಅನೇಕ ಕಡೆ ಕಸದ ರಾಶಿಗಳು ಸೋಮವಾರವೂ ಹಾಗೆಯೇ ಇದ್ದವು. ಇನ್ನೊಂದೆಡೆ ಒಳಚರಂಡಿ ಕೊಳವೆ ಮಾರ್ಗದ ಮ್ಯಾನ್‌ಹೋಲ್‌ಗಳು ಕಟ್ಟಿಕೊಳ್ಳುತ್ತಿದ್ದು, ಸಮಸ್ಯೆ ಉಲ್ಬಣಿಸಿದೆ.

ನಗರದಲ್ಲಿ ಕಾವೂರು ಬಳಿಯ ಮುಳ್ಳಕಾಡು, ಸುರತ್ಕಲ್ ಹಾಗೂ ಪಚ್ಚನಾಡಿಯಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳು (ಎಸ್‌ಟಿಪಿ) ಇವೆ. ತಗ್ಗು ಪ್ರದೇಶ ಒಳಚರಂಡಿಗಳಲ್ಲಿ ಸಂಗ್ರಹಗೊಳ್ಳುವ ದ್ರವತ್ಯಾಜ್ಯವನ್ನು 12 ವೆಟ್‌ವೆಲ್‌ಗಳ ಮೂಲಕ ಎಸ್‌ಟಿಪಿಗಳಿಗೆ ಪಂಪ್‌ ಮಾಡಬೇಕಾಗುತ್ತದೆ. ಈ ಕಾರ್ಯ ಸ್ಥಗಿತಗೊಂಡಿರುವುದರಿಂದ ಒಳಚರಂಡಿ ಮೇಲೆ ಒತ್ತಡ ಹೆಚ್ಚುತ್ತಿದೆ. ಒಳಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುವ ಪರಿಸ್ಥಿತಿ ಒಂದೆಡೆಯಾದರೆ, ಎಸ್‌ಟಿಪಿಗಳು ಕಾರ್ಯ ನಿರ್ವಹಿಸದ ಕಾರಣ ಶೌಚಯುಕ್ತ ದ್ರವ ತ್ಯಾಜ್ಯ ಸಂಸ್ಕರಣೆಗೆ ಒಳಗಾಗುತ್ತಿಲ್ಲ. ಇದು ಗಂಭೀರ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು ಎಂಬ ಆತಂಕ ಎದುರಾಗಿದೆ.

ಒಳಚರಂಡಿ ತ್ಯಾಜ್ಯ ನಿರ್ವಹಣೆಯ ಕಾರ್ಮಿಕರ ಜೊತೆ ಸಂಧಾನ ನಡೆಸಲು ಮೇಯರ್‌ ಜಯಾನಂದ ಅಂಚನ್‌ ಹಾಗೂ ಪಾಲಿಕೆ ಅಧಿಕಾರಿಗಳು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.

‘ಒಳಚರಂಡಿ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವುದು ಕಷ್ಟ. ಮುಷ್ಕರ ನಿರತ ಕಾರ್ಮಿಕರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಪಾಲಿಕೆ ಆಯುಕ್ತ ಚನ್ನಬಸಪ್ಪ ಕೆ. ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ವಾಹನ ಚಾಲಕರು ಮುಷ್ಕರ ನಡೆಸುತ್ತಿರುವುದರಿಂದ ಅವರ ಬದಲು ಬೇರೆ ಚಾಲಕರನ್ನು ನಿಯೋಜಿಸಿಕೊಂಡು ಕಸ ವಿಲೇವಾರಿ ಮಾಡಲಾಗುತ್ತಿದೆ. ಆದರೆ ನಗರದಲ್ಲಿ ಭಾನುವಾರ ಬಹುತೇಕ ಕಡೆ ಕಸ ವಿಲೇವಾರಿಯಾಗಿಲ್ಲ. ಕೆಲವೆಡೆ ವಾರದಿಂದ ಕಸ ಹಾಗೆಯೇ ಉಳಿದಿದೆ. ಹಾಗಾಗಿ ಸೋಮವಾರ ಕಸ ವಿಲೇವಾರಿ ಒತ್ತಡ ಹೆಚ್ಚಾಗಿದೆ. ಕಸ ಸಾಗಣೆ ವಾಹನಗಳು ಹೆಚ್ಚುವರಿ ಟ್ರಿಪ್‌ಗಳನ್ನು ನಡೆಸಿದರೂ ಕಸದ ರಾಶಿಗಳನ್ನು ಪೂರ್ತಿ ತೆರವುಗೊಳಿಸುವುದು ಸಾಧ್ಯವಾಗಿಲ್ಲ.

‘ವಾರದಿಂದ ಕಸ ವಿಲೇವಾರಿ ವ್ಯವಸ್ಥೆ ಒಂದು ವಾರದಿಂದ ಅಸ್ತವ್ಯಸ್ತಗೊಂಡಿದೆ. ಅದು ಮತ್ತೆ ಸಹಜ ಸ್ಥಿತಿಗೆ ಬರಲು ಇನ್ನೂ ಹಲವಾರು ದಿನಗಳು ಬೇಕಾಗಬಹುದು’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT