‘ಗಾದ್ಯಾಂತ್ಲೆ ಗಮ್ಮತ್‌’ ನಲ್ಲಿ ದಿನಪೂರ್ತಿ ಕೆಸರು ಮೆತ್ತಿಸಿಕೊಂಡರು

7

‘ಗಾದ್ಯಾಂತ್ಲೆ ಗಮ್ಮತ್‌’ ನಲ್ಲಿ ದಿನಪೂರ್ತಿ ಕೆಸರು ಮೆತ್ತಿಸಿಕೊಂಡರು

Published:
Updated:
Deccan Herald

ಮಣ್ಣಿನ ವಾಸನೆಯ ಅರಿವಿಲ್ಲದ ಎಲ್‌ಕೆಜಿಯ ಮಕ್ಕಳಿಂದ ಹಿಡಿದು ಇನ್ನು ತಮ್ಮ ಕಾಲ ಮುಗಿಯುತ್ತಾ ಬಂತು ಅಂತ ಗೊಣಗುತ್ತಿರುವ ಅಜ್ಜ–ಅಜ್ಜಿಯಂದಿರು ಗದ್ದೆಯಲ್ಲಿ ಇಳಿದು ಮಕ್ಕಳಂತೆ ಕೆಸರು ಮೆತ್ತಿಸಿಕೊಂಡಿದ್ದರು. ಕಾಲೇಜು–ಆಫೀಸಿನಲ್ಲಿ ದಿನವಿಡೀ ಮೊಬೈಲ್‌ನಲ್ಲಿ ದಿನವಿಡೀ ಮುಳುಗಿರೋ ಯುವತಿಯರು ಕೆಸರಿನ ಮಧ್ಯೆ ಚೆಂಡಿಗಾಗಿ ಮುಗಿಬೀಳುತ್ತಿದ್ದರೆ, ಅತ್ತ ಕಡೆ ಗದ್ದೆಯಲ್ಲಿ ಕಬ್ಬಡ್ಡಿ ಕಬ್ಬಡ್ಡಿ ಎನ್ನುತ್ತಾ ಎದುರಾಳಿಯನ್ನು ಮುಟ್ಟುವ ತವಕದಲ್ಲಿದ್ದರು. ಇದೆಲ್ಲಾ ಕಂಡು ಬಂದಿದ್ದು ವಿಟ್ಲ ಸಮೀಪದ ಕುಕ್ಕಾಜೆಯ ಕಾಳಿಕಾಂಬ ಆಂಜನೇಯ ದೇವಸ್ಥಾನದ ಬಳಿಯ ಗದ್ದೆಯಲ್ಲಿ.

ಮುಚ್ಚಿರಪದವಿನ ಫಾತಿಮಾ ಮಾತೆಯ ದೇವಾಲಯ ಹಾಗೂ ದೇವಾಲಯದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ‘ಗಾದ್ಯಾಂತ್ಲೆ ಗಮ್ಮತ್‌’ (ಗದ್ದೆಯಲ್ಲಿ ಗಮ್ಮತ್ತು) ಕಾರ್ಯಕ್ರಮದಲ್ಲಿ.

ಯುನೈಟೆಡ್‌ ಪೆರುವಾಯಿ ಧಮಾಕಾ–2018ರ ಹೆಸರಿನಲ್ಲಿ ಈ ವರ್ಷ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅದರ ಮೊದಲ ಭಾಗವಾಗಿ ಆದಿತ್ಯವಾರ ಬಲಿಪೂಜೆಯ ನಂತರದಲ್ಲಿ ಅಲ್ಲಿನ ಭಕ್ತಾದಿಗಳು ಕೆಸರಿನಲ್ಲಿ ಮೀಂದೆದ್ದರು. ಫಾತಿಮಾ ಮಾತೆಯ ದೇವಾಲಯದ 120 ಕುಟುಂಬದವರನ್ನು ಆರು ತಂಡಗಳಾಗಿ ವಿಂಗಡಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಆರು ತಂಡಗಳು ಮೊದಲು ಪಥಸಂಚಲನ ನಡೆಸಿದವು. ಈ ವೇಳೆ ಹಳ್ಳಿಯ ಸೊಗಡಿನ ಕೋಣ ಹಾಗೂ ಎತ್ತಿನ ಮಾದರಿಗಳು, ಕುಡುಗೋಲು, ನೇಜಿ ಹೀಗೆ ಹತ್ತು ಹಲವು ಪರಿಕರದೊಂದಿಗೆ ಭಿನ್ನ ವಿಭಿನ್ನ ವೇಷಭೂಷಣಗಳಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು.

ಎಲ್‌ಕೆಜಿ ಮಕ್ಕಳಿಗೆ ಗದ್ದೆಯಲ್ಲಿ ನಿಧಿ ಶೋಧ, ಕಣ್ಣಿಗೆ ಬಟ್ಟೆ ಕಟ್ಟಿ ಓಟ, ಅದೇ ರೀತಿ ಯುವಕ ಯುವತಿಯರಿಗೆ ಕಬ್ಬಡ್ಡಿ, ಹ್ಯಾಂಡ್‌ ಬಾಲ್‌ ಸ್ಪರ್ಧೆ, ರಿಲೇ, ಹಗ್ಗಜಗ್ಗಾಟ, ಹೊಂಬದಿ ಓಟ, ಲಾಂಗ್‌್ ಜಂಪ್‌ ಆಟೋಟ ಸ್ಪರ್ಧೆ, ಮಹಿಳೆಯರಿಗೆ ಕೊಡದಲ್ಲಿ ನೀರು ಹೊತ್ತೊಯ್ಯುವುದು ಹೀಗೆ ಹತ್ತು ಹಲವು ಆಟೋಟಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂದರೆ ದಂಪತಿಗಳ ಆಟ. ಮೊದಲಿಗೆ ಪತ್ನಿಯನ್ನು ಪತಿ ಹೊತ್ತೊಯ್ಯುವ ಓಟ ಹಾಗೂ ಹಾಳೆಯಲ್ಲಿ ಎಳೆದುಕೊಂಡು ಹೋಗುವ ಓಟ ಎಲ್ಲರ ಗಮನ ಸೆಳೆಯಿತು. ಅದೇ ರೀತಿ ಹಿರಿಯರಿಗೆ ಗದ್ದೆಯ ಮೇರೆ ಕಟ್ಟುವುದು, ಒಂದು ನಿಮಿಷದ ಓಟದಲ್ಲಿ ಹತ್ತಾರು ಹಿರಿಯರು ಭಾಗವಹಿಸಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದರು. ಸೆಲ್ಫಿ ಬಗ್ಗೆ ಅರಿವೆಯೇ ಇಲ್ಲದ ಅಜ್ಜ ಅಜ್ಜಂದಿರು ‘ಸೆಲ್ಫಿ ಫೋಸ್‌’ ಸ್ಪರ್ಧೆಗೆ ಭಿನ್ನ ವಿಭಿನ್ನವಾಗಿ ಪೋಸ್‌ ನೀಡುವ ಮೂಲಕ ನಾವ್ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಮಾಡಿದರು.

ಮಣ್ಣಿನಲ್ಲಿ ಆಟವಾಡುವಾಗ ಬೆತ್ತದ ರುಚಿ ತೋರಿಸುವ ಅಪ್ಪ ಅಮ್ಮ ಇದ್ದರೂ ಯಾವುದೇ ಹೆದರಿಕೆಯಿಲ್ಲದೆ ಒಬ್ಬರನ್ನೊಬ್ಬರು ಕೆಸರಿನಲ್ಲಿ ಮುಳುಗಿಸಿ, ಒಬ್ಬರಮೈಗೊಬ್ಬರು ಕೆಸರನ್ನು ಎಸೆಯುತ್ತಾ ದಿನವಿಡೀ ಕಾಲ ಕಳೆದ ಮಕ್ಕಳು. ವರ್ಷಪೂರ್ತಿ ಶಾಲಾ–ಕಾಲೇಜು, ಆಫೀಸು, ಮನೆಗೆಲಸ ಹೀಗೆ ಹತ್ತು ಹಲವು ವೃತ್ತಿಯಲ್ಲಿ ತೊಡಗಿಕೊಂಡಿರುವವರು ‘ಗಾದ್ಯಾಂತ್ಲೆ ಗಮ್ಮತ್‌’ ಹೆಸರಲ್ಲಿ ಇಡೀ ಚರ್ಚ್‌ನ ಕುಟುಂಬವು ಒಂದಾಗಿ ಗದ್ದೆಯಲ್ಲಿ ಒಂದು ದಿನ ಕಳೆಯುವ ಮೂಲಕ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !