ಬುಧವಾರ, ನವೆಂಬರ್ 20, 2019
27 °C

ವಕೀಲ ಸಮುದಾಯದ ಕ್ಷಮೆಯಾಚಿಸಿದ ಗಿರ್‌ಗಿಟ್‌ ಸಿನಿಮಾ ನಿರ್ದೇಶಕ ರೂಪೇಶ್‌ ಶೆಟ್ಟಿ

Published:
Updated:

ಮಂಗಳೂರು: ‘ಗಿರಿಗಿಟ್‌ ಚಿತ್ರದಲ್ಲಿ ವಕೀಲರ ಭಾವನೆಗೆ ನೋವನ್ನು ಉಂಟು ಮಾಡುವ ಯಾವುದೇ ಉದ್ದೇಶ ಚಿತ್ರತಂಡಕ್ಕಿಲ್ಲ. ಇಲ್ಲಿ ಬರುವ ಎಲ್ಲ ಸನ್ನಿವೇಶಗಳು ಕಾಲ್ಪನಿಕವಾಗಿದ್ದು, ವಕೀಲರಿಗೆ ಇದರಿಂದ ನೋವಾಗಿದ್ದರೆ ಚಿತ್ರ ತಂಡ ಹಾಗೂ ನಾನು ಕೂಡಾ ವಕೀಲ ಸಮುದಾಯದ ಕ್ಷಮೆಯಾಚಿಸುತ್ತೇನೆ’ ಎಂದು ಚಿತ್ರದ ನಿರ್ದೇಶಕ ಹಾಗೂ ನಟ ರೂಪೇಶ್‌ ಶೆಟ್ಟಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಕೀಲ ಸಮುದಾಯವನ್ನು ಚಿತ್ರದಲ್ಲಿ ಅವಹೇಳನ ಮಾಡಲಾಗಿದೆ. ಅಲ್ಲದೇ ನ್ಯಾಯಾಂಗ ವ್ಯವಸ್ಥೆ, ವಕೀಲರ ಬಗ್ಗೆ ಕೀಳು ಅಭಿರುಚಿಯಲ್ಲಿ ಅಪಹಾಸ್ಯ ಮಾಡಲಾಗಿದೆ ಎಂದು ವಕೀಲರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರಿಂದ ಮಂಗಳೂರು ಕಿರಿಯ ಪ್ರಧಾನ ನ್ಯಾಯಾಲಯವು  ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಆದೇಶ ಗೌರವಿಸುತ್ತೆವೆ. ಚಿತ್ರದ ದೃಶ್ಯಗಳಿಂದ  ವಕೀಲ ಸಮುದಾಯಕ್ಕೆ ನೋವಾಗಿದ್ದರೆ ಸಮುದಾಯದ ಕ್ಷಮೆ ಕೇಳುತ್ತೇವೆ. ಇದು ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಪ್ರೇಕ್ಷಕರಿಗೆ ಹಾಸ್ಯ ನೀಡುವ ಬರದಲ್ಲಿ ಇಂತಹ ಪ್ರಮಾದ ಆಗಿರಬಹುದು’ ಎಂದರು.

‘ಸಾಮಾಜಿಕ ಜಾಲ ತಾಣಗಳಲ್ಲಿ ವಕೀಲ ಸಮುದಾಯದ ವಿರುದ್ಧ ಯಾರು ಕೂಡಾ ಅವಹೇಳನ ಮಾಡಬಾರದು. ಇಂತಹ ಅವಹೇಳನ ಮಾಡಿದ್ದೇ ಆದಲ್ಲಿ ಚಿತ್ರ ತಂಡವು ಅದನ್ನು ಖಂಡಿಸುತ್ತದೆ. ಎಲ್ಲರ ಭಾವನೆಗಳಿಗೂ ನಾವು ಬೆಲೆ ಕೊಡಬೇಕು. ಇಂತಹ ಯಾವುದೇ ಹೇಳಿಕೆಗಳಿಗೆ ಚಿತ್ರ ತಂಡವು ಬೆಂಬಲ ನೀಡಲ್ಲ. ಈ ಪ್ರಕರಣ ಸುಖಾಂತ್ಯ ಕಾಣಬೇಕು. ಕಾನೂನು ತಜ್ಞರು ಹಾಗೂ ವಕೀಲರ ಜತೆಗೆ ಚರ್ಚೆ ನಡೆಸುತ್ತವೆ. ತುಳು ನಾಡು ಸೇರಿದಂತೆ ದೇಶದ, ವಿದೇಶಗಳಲ್ಲಿ ಗಿರಿಗಿಟ್‌ ಚಿತ್ರಕ್ಕೆ ಉತ್ತಮ ರೀತಿಯ ಸ್ಪಂದನೆ ಸಿಗುತ್ತಿದೆ’ ಎಂದು ರೂಪೇಶ್ ಶೆಟ್ಟಿ ಹೇಳಿದರು.

ಪ್ರತಿಕ್ರಿಯಿಸಿ (+)