ಶನಿವಾರ, ಅಕ್ಟೋಬರ್ 19, 2019
27 °C
ಅವಮಾನಕಾರಿ ದೃಶ್ಯ ತೆಗೆದು (ಕಟ್‌) ಹಾಕಲು ಚಿತ್ರ ತಂಡ ಸಮ್ಮತಿ

ಗಿರಿಗಿಟ್‌: ಅಯ್ಯೋ ದೇವಾ... ಸುಖಾಂತ್ಯ!

Published:
Updated:
Prajavani

ಮಂಗಳೂರು: ‘ಅಯ್ಯೋ ದೇವಾ...’ ಸಂಭಾಷಣೆ ಖ್ಯಾತಿಯ ‘ಗಿರಿಗಿಟ್’ ತುಳು ಸಿನಿಮಾದ ವಿರುದ್ಧ  ಮಂಗಳೂರು ವಕೀಲರ ಸಂಘವು ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣವು ಸುಖಾಂತ್ಯದ ಹೆಜ್ಜೆ ಇಟ್ಟಿದೆ.

ಸಿನಿಮಾದಲ್ಲಿ ವಕೀಲರ ಘನತೆ ಹಾಗೂ ಭಾವನೆಗಳಿಗೆ ಹಾನಿ ಉಂಟು ಮಾಡುವ ಸಂಭಾಷಣೆಗಳನ್ನು ನಿಶ್ಯಬ್ದ (ಮ್ಯೂಟ್‌)ಗೊಳಿಸುವ ಹಾಗೂ ಅವಮಾನಕಾರಿ ದೃಶ್ಯಗಳನ್ನು ತೆಗೆದು (ಕಟ್‌) ಹಾಕಲು ಚಿತ್ರ ತಂಡವು ಸಮ್ಮತಿಸಿದ್ದು, ತುಳು ಸಿನಿಮಾ ರಂಗಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ‘ಪರಿಷ್ಕೃತ’ ಸಿನಿಮಾ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುವುದಾಗಿ ವಕೀಲರ ಸಂಘವು ತಿಳಿಸಿದೆ.

ಇದನ್ನೂ ಓದಿ: ವಕೀಲ ಸಮುದಾಯದ ಕ್ಷಮೆಯಾಚಿಸಿದ ಗಿರ್‌ಗಿಟ್‌ ಸಿನಿಮಾ ನಿರ್ದೇಶಕ ರೂಪೇಶ್‌ ಶೆಟ್ಟಿ

ಈ ಕುರಿತು ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮಂಗಳೂರು ವಕೀಲರ ಸಂಘ ಹಾಗೂ ಚಿತ್ರತಂಡವು, ‘ನಮ್ಮಲ್ಲಿ ಪರಸ್ಪರ ಯಾವುದೇ ದುರುದ್ದೇಶಗಳಲ್ಲಿ. ಆಕಸ್ಮಿಕವಾಗಿ ನಡೆದ ಘಟನೆಗೆ ಪರಿಹಾರ ಸಿಕ್ಕಿದೆ.  ಈ ಬಗ್ಗೆ ಸೋಮವಾರ (ಸೆ.16) ನ್ಯಾಯಾಲಯಕ್ಕೆ ಪತ್ರವನ್ನೂ ನೀಡಿದ್ದೇವೆ. ವಕೀಲರಲ್ಲಿ ಕಲಾವಿದರು, ಕಲಾವಿದರಲ್ಲಿ ವಕೀಲರು ಇದ್ದಾರೆ. ಪ್ರಕರಣವು ಸುಖಾಂತ್ಯ ಕಾಣಲಿದೆ’ ಎಂದು ಘೋಷಿಸಿದರು.

‘ಸಿನಿಮಾದ ಕೆಲವು ಸಂಭಾಷಣೆ ಮತ್ತು ಸನ್ನಿವೇಶಗಳು ನ್ಯಾಯಾಂಗ ವ್ಯವಸ್ಥೆಗೆ ಅಮಮಾನ ಹಾಗೂ ಹಾನಿ ಮಾಡುವಂತಿತ್ತು. ಇದಕ್ಕೆ ತಕರಾರು ವ್ಯಕ್ತಪಡಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದೆವು. ನ್ಯಾಯಾಲಯವೂ ತಡೆಯಾಜ್ಞೆ ನೀಡಿತ್ತು. ಆದರೆ, ಚಿತ್ರ ತಂಡವು ತಕ್ಷಣವೇ ಸ್ಪಂದಿಸಿದ್ದು, ‘ಕಾನೂನು ಅರಿವಿನ ಕೊರತೆಯಿಂದ ತಪ್ಪುಗಳಾಗಿದೆ’ ಎಂದು ಬೇಷರತ್ ಕ್ಷಮೆ ಯಾಚಿಸಿತ್ತು. ಹೀಗಾಗಿ, ಆಕ್ಷೇಪಾರ್ಹ ಸಂಭಾಷಣೆ ಮತ್ತು ದೃಶ್ಯಗಳ ಸಂಕಲನದ ಬಳಿಕ ಚಿತ್ರ ಪ್ರದರ್ಶನಕ್ಕೆ ನಮ್ಮ ವಿರೋಧವಿಲ್ಲ. ಸಂಭಾಷಣೆಗಳನ್ನು ತಕ್ಷಣವೇ ಮ್ಯೂಟ್ ಹಾಗೂ ದೃಶ್ಯಗಳನ್ನು ಕಟ್‌ ಮಾಡಿ ಸೆನ್ಸಾರ್ ಮಂಡಳಿ(ಸಿಬಿಎಫ್‌ಸಿ)ಗೆ ಸಲ್ಲಿಸುವುದಾಗಿ ಚಿತ್ರ ತಂಡ ತಿಳಿಸಿದೆ. ಮುಂದಿನ ಮೂರು ದಿನಗಳಲ್ಲಿ ಈ ಪ್ರಕ್ರಿಯೆಯು ಮುಗಿಯಲಿದೆ’ ಎಂದು ವಕೀಲರಾದ ರಾಘವೇಂದ್ರ ಎಚ್‌.ವಿ. ವಿವರಿಸಿದರು.

‘ನಾವು ಸಿನಿಮಾದಲ್ಲಿ ಕಾಲ್ಪನಿಕ ಸನ್ನಿವೇಶವನ್ನು ಸೃಷ್ಟಿಸಿದ್ದೆವು. ಈ ಪೈಕಿ ವಕೀಲರ ಸನ್ನಿವೇಶಕ್ಕೆ ಸಂಘವು ಆಕ್ಷೇಪ ವ್ಯಕ್ತಪಡಿಸಿದ್ದು, ತಕ್ಷಣವೇ ಹಿಂದಕ್ಕೆ ಪಡೆದುಕೊಂಡಿದ್ದೇವೆ. ವಕೀಲರೂ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲರಿಗೂ ಮನೋರಂಜನೆ ಮತ್ತು ಚಿಂತನೆಯನ್ನು ನೀಡಬೇಕೇ ಹೊರತು, ಯಾರಿಗೂ ನೋಯಿಸುವ ಉದ್ದೇಶ ನಮ್ಮದಲ್ಲ. ಸಿನಿಮಾದ ಯಶಸ್ಸಿಗೆ ಬೆಂಬಲಿಸುವುದಾಗಿ ವಕೀಲರೂ ತಿಳಿಸಿದ್ದಾರೆ. ಪ್ರಕರಣವು ಸುಖಾಂತ್ಯ ಕಂಡಿದ್ದು, ಎಲ್ಲರ ನೆರವಿನಲ್ಲಿ ಶತದಿನೋತ್ಸವದ ನಿರೀಕ್ಷೆಯಲ್ಲಿದ್ದೇವೆ’ ಎಂದು ಸಿನಿಮಾ ನಿರ್ದೇಶಕ, ನಿರ್ಮಾಪಕ, ನಟ ರೂಪೇಶ್ ಶೆಟ್ಟಿ ಕೃತಜ್ಞತೆ ವ್ಯಕ್ತಪಡಿಸಿದರು.

‘ಗಿರಿಗಿಟ್‌ ಸಿನಿಮಾದ ಆರಂಭದಿಂದಲೂ ನಮ್ಮನ್ನು ಬೆಂಬಲಿಸಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಗಿರಿಗಿಟ್ ಕರಾವಳಿಯ ಚಿತ್ರಮಂದಿರಗಳಲ್ಲಿ ಮಾತ್ರವಲ್ಲ, ಬೆಂಗಳೂರು, ಮೈಸೂರಿನಲ್ಲೂ ಚಿತ್ರಮಂದಿರ ತುಂಬಿ ಓಡುತ್ತಿದೆ. ಶೀಘ್ರದಲ್ಲೇ ಅಮೆರಿಕಾ, ಆಸ್ಟ್ರೇಲಿಯಾ, ಇಸ್ರೇಲ್, ಅರೇಬಿಯಾ ರಾಷ್ಟ್ರಗಳಲ್ಲಿ ಬಿಡುಗಡೆಯಾಗಲಿದೆ’ ಎಂದರು.  

ಸಿನಿಮಾ ತಂಡದ ಮಂಜುನಾಥ ಅತ್ತಾವರ, ವಕೀಲರಾದ ಬಿ.ಜಿನೇಂದ್ರ ಕುಮಾರ್, ಅರುಣ್ ಬಿ.ಪಿ, ಶುಕುರಾಜ್‌ ಕೊಟ್ಟಾರಿ ಇದ್ದರು.  

‘ತುಳುವಿಗೆ ನಿರಂತರ ಸಹಕಾರ’

ಮಂಗಳೂರು ವಕೀಲರ ಸಂಘವು ತುಳು ಕಲೆ, ಸಂಸ್ಕೃತಿ, ಸಿನಿಮಾ ರಂಗಕ್ಕೆ ಸದಾ ಬೆಂಬಲಿಸುತ್ತಲೇ ಬಂದಿದೆ. ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ಸೇರಿಸುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ಇನ್ನು ಮುಂದೆ ಯಾವುದೇ ತುಳು ಸಿನಿಮಾದ ನ್ಯಾಯಾಲಯ ಕುರಿತ ಸನ್ನಿವೇಶದ ಬಗ್ಗೆ ಸಲಹೆ–ಸೂಚನೆಗಳು ಬೇಕಿದ್ದರೆ, ಮುಕ್ತವಾಗಿ ಸಂಪರ್ಕಿಸಿ. ಸಹಕಾರ ನೀಡುತ್ತೇವೆ ಎಂದು ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗ್ಡೆ ಹಾಗೂ ವಕೀಲರಾದ ಎಂ.ಪಿ.ಶೆಣೈ ಹೇಳಿದರು.

ಆದರೆ, ಈ ಪ್ರಕರಣಕ್ಕೆ ಸಂಬಂಧ ಪಡದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ಹಾಕಿದ್ದಾರೆ. ಅವರ ವಿರುದ್ಧದ ಪ್ರಕರಣಗಳು ಮುಂದುವರಿಯಲಿವೆ. ಸಾಮಾಜಿಕ ಜಾಲತಾಣದ ದುರ್ಬಳಕೆ ಬಗ್ಗೆ ಸ್ಪಷ್ಟ ಸಂದೇಶ ಹೋಗಬೇಕಾಗಿದೆ ಎಂದು ವಕೀಲರು ತಿಳಿಸಿದರು.

Post Comments (+)