ಬುಧವಾರ, ಫೆಬ್ರವರಿ 19, 2020
29 °C
ಡಿ.19ರ ಗೋಲಿಬಾರ್‌ ಸಂತ್ರಸ್ತರ ಜಸ್ಟೀಸ್‌ ಫೋರಂ ಎಚ್ಚರಿಕೆ

ಸಂತ್ರಸ್ತರಿಗೆ ನ್ಯಾಯ ದೊರಕಿಸದಿದ್ದರೆ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಡಿಸೆಂಬರ್‌ 19ರ ಗೋಲಿಬಾರ್‌ಗೆ ಕಾರಣವಾದ ಪೊಲೀಸರನ್ನು ಅಮಾನತುಗೊಳಿಸಿ, ಕೊಲೆ ಮೊಕದ್ದಮೆ ದಾಖಲಿಸಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸದಿದ್ದರೆ ಪ್ರಬಲವಾದ ಹೋರಾಟ ಆರಂಭಿಸಲಾಗುವುದು ಎಂದು ಗೋಲಿಬಾರ್‌ ಸಂತ್ರಸ್ತರ ಜಸ್ಟೀಸ್‌ ಫೋರಂ ಎಚ್ಚರಿಕೆ ನೀಡಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೋರಂ ಸಂಚಾಲಕ ಅಬ್ದುಲ್‌ ಜಲೀಲ್‌ ಕೆ., ‘ಅಮಾಯಕರ ಮೇಲೆ ಗುಂಡು ಹಾರಿಸಿ, ಹತ್ಯೆ ಮಾಡಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಹುದ್ದೆಯಲ್ಲಿ ಮುಂದುವರಿದ್ದು, ತನಿಖೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಗೋಲಿಬಾರ್‌ಗೆ ಕಾರಣರಾದ ಡಿಸಿಪಿ ಅರುಣಾಂಗ್ಷು ಗಿರಿ, ಇನ್‌ಸ್ಪೆಕ್ಟರ್‌ಗಳಾದ ಶಾಂತಾರಾಂ, ಮೊಹಮ್ಮದ್ ಷರೀಫ್‌ ಮತ್ತು ‌ಇತರ ಪೊಲೀಸರನ್ನು ಅಮಾನತು ಮಾಡಬೇಕು. ಅವರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ಗೋಲಿಬಾರ್‌ನಲ್ಲಿ ಮೃತಪಟ್ಟ ಅಬ್ದುಲ್‌ ಜಲೀಲ್‌ ಮತ್ತು ನೌಶೀನ್‌ ಕುದ್ರೋಳಿ ವಿರುದ್ಧದ ಪ್ರಕರಣ ಕೈಬಿಡಬೇಕು. ಮೃತರ ಕುಟುಂಬಗಳಿಗೆ ತಲಾ ₹25 ಲಕ್ಷ ಮತ್ತು ಗಂಭೀರವಾಗಿ ಗಾಯಗೊಂಡಿರುವವರಿಗೆ ತಲಾ ₹15 ಲಕ್ಷ ಪರಿಹಾರ ವಿತರಿಸಬೇಕು. ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು. ಘಟನೆಯ ಕುರಿತ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಮೊಬೈಲ್‌ ಟವರ್‌ ಮಾಹಿತಿ ಆಧಾರದಲ್ಲಿ ಕೇರಳದ ಜನರಿಗೆ ತೊಂದರೆ ಕೊಡಲಾಗುತ್ತಿದೆ. ತಕ್ಷಣವೇ ಇದನ್ನು ನಿಲ್ಲಿಸಬೇಕು. ಪ್ರಕರಣದ ಕುರಿತು ತನಿಖೆ ಮತ್ತು ವಿಚಾರಣೆಗಳು ಗಂಭೀರವಾಗಿ ನಡೆಯಬೇಕು. ಎಲ್ಲ ಹಂತದಲ್ಲೂ ನ್ಯಾಯಕ್ಕಾಗಿ ಹೋರಾಟ ನಡೆಸಲಾಗುವುದು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ಧರಣಿ, ಪ್ರತಿಭಟನೆ, ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪದೇ ಪದೇ ಪ್ರಕರಣ: ಸಮಿತಿಯ ಸದಸ್ಯ ರಫೀವುದ್ದೀನ್‌ ಕುದ್ರೋಳಿ ಮಾತನಾಡಿ, ‘ಗಲಭೆ ನಡೆಸಿದ ಆರೋಪದ ಮೇಲೆ ಕೆಲವು ವ್ಯಕ್ತಿಗಳ ವಿರುದ್ಧ ಹಲವು ಪ್ರಕರಣ ದಾಖಲಿಸಲಾಗುತ್ತಿದೆ. ಬಂಧಿತರಾಗಿದ್ದ 22 ಮಂದಿಗೆ ಜಾಮೀನು ದೊರೆಯುವ ಹಂತದಲ್ಲಿದ್ದಾಗ ಬೇರೆ ‍ಪ್ರಕರಣಗಳಲ್ಲಿ ವಶಕ್ಕೆ ಪಡೆಯಲಾಗಿದೆ. ಪೊಲೀಸರು ದುರುದ್ದೇಶಪೂರಿತ ಕ್ರಮಗಳನ್ನು ಕೈಗೊಳ್ಳುವುದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಫೋರಂ ಸದಸ್ಯರಾದ ಮುಸ್ತಫಾ ಕೆಂಪಿ, ಎಂ.ಜಿ.ಮುಹಮ್ಮದ್, ಅಥಾವುಲ್ಲಾ ಜೋಕಟ್ಟೆ, ಅಡ್ವೊಕೇಟ್‌ ಹನೀಫ್‌, ಸಿದ್ದೀಕ್‌ ತಲಪಾಡಿ, ರಿಝ್ವಾನ್‌ ಎಚ್‌.ಐ.ಎಫ್‌., ಮೃತ ಜಲೀಲ್‌ ಸಹೋದರ ಯಾಹ್ಯಾ ಕಂದಕ್‌ ಮತ್ತು ನೌಶೀನ್‌ ಸಹೋದರ ನೌಫಲ್‌ ಕುದ್ರೋಳಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು