ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿಯೇ ಗುಡ್‌ಫ್ರೈಡೆ ಆಚರಣೆ

ಪಾದ ತೊಳೆಯುವ ಸಂಪ್ರದಾಯಕ್ಕೂ ಲಾಕ್‌ಡೌನ್‌ ಅಡ್ಡಿ
Last Updated 11 ಏಪ್ರಿಲ್ 2020, 12:11 IST
ಅಕ್ಷರ ಗಾತ್ರ

ಮಂಗಳೂರು: ದೇಶದಾದ್ಯಂತ ಲಾಕ್‌ಡೌನ್‌ ಮಾಡಲಾಗಿದ್ದು, ಕ್ರೈಸ್ತರ ಪವಿತ್ರ ದಿನಗಳಲ್ಲಿ ಒಂದಾದ ಗುಡ್‌ ಫ್ರೈಡೆ ಅಂಗವಾಗಿ ಪ್ರತಿ ವರ್ಷ ಚರ್ಚ್‌ಗಳಲ್ಲಿ ನಡೆಸುವ ಸಾಮೂಹಿಕ ಪ್ರಾರ್ಥನೆಗೂ ಅಡ್ಡಿಯಾಯಿತು.

ಪ್ರತಿ ವರ್ಷ ಗುರುವಾರದಿಂದ ಹಿಡಿದು ಭಾನುವಾರದವರೆಗೆ ಚರ್ಚ್‌ನಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆದರೆ ಈ ಬಾರಿ ಲಾಕ್‌ಡೌನ್‌ ಜಾರಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆಯಿಂದಾಗಿ ಚರ್ಚ್‌ಗಳಲ್ಲಿ ಸಾಮೂಹಿಕವಾಗಿ ಬಲಿಪೂಜೆ ನಡೆಯಲಿಲ್ಲ.

ಗುರುವಾರ ಸಂಜೆ 5 ಗಂಟೆಗೆ ಮಂಗಳೂರು ಬಿಷಪ್‌ ರೆ.ಡಾ. ಪೀಟರ್‌ ಪಾವ್ಲ್‌ ಸಲ್ಡಾನ ಅವರು ರೊಸಾರಿಯೋ ಕೆಥಡ್ರಲ್‌ನಲ್ಲಿ ಬಲಿಪೂಜೆಯನ್ನು ನಡೆಸಿದರು. ಅದನ್ನು ಯೂಟ್ಯೂಬ್‌ ಮೂಲಕ ಹಾಗೂ ಖಾಸಗಿ ಸುದ್ದಿ ವಾಹಿನಿಗಳ ಮೂಲಕ ನೇರ ಪ್ರಸಾರ ಮಾಡಲಾಗಿದ್ದು, ಕ್ರೈಸ್ತರು ಮನೆಯಲ್ಲಿಯೇ ವೀಕ್ಷಿಸಿ ಪ್ರಾರ್ಥನೆ ಸಲ್ಲಿಸಿದರು. ಕೆಥಡ್ರಲ್‌ನ ರೆಕ್ಟರ್ ಫಾ.ಜೆ.ಬಿ. ಕ್ರಾಸ್ತಾ ಮತ್ತು ಸಹಾಯಕ ಗುರು ಫಾ. ಫ್ಲೇವಿಯನ್ ಲೋಬೊ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.

ಯೇಸು ಕ್ರಿಸ್ತರು ಶಿಲುಬೆ ಏರುವ ಮುಂಚಿನ ದಿನ ರಾತ್ರಿ ತನ್ನ ಶಿಷ್ಯರ ಜತೆ ಕೊನೆಯ ಭೋಜನವನ್ನು ಸೇವಿಸಿದ್ದು, ಈ ದಿನವನ್ನು ಕ್ರೈಸ್ತ ಸಭೆ ಪವಿತ್ರ ಗುರುವಾರವನ್ನಾಗಿ ಆಚರಿಸುತ್ತದೆ. ಕೊನೆಯ ಭೋಜನದ ಸಂದರ್ಭ ಯೇಸು ಕ್ರಿಸ್ತರು ಯಾಜಕರ (ಧರ್ಮಗುರುಗಳ) ಸಂಸ್ಕಾರ ಮತ್ತು ಪರಮ ಪ್ರಸಾದದ ಸಂಸ್ಕಾರವನ್ನು ಸ್ಥಾಪಿಸಿದರು. ತನ್ನ 12 ಮಂದಿ ಶಿಷ್ಯಂದಿರ ಪಾದಗಳನ್ನು ತೊಳೆಯುವ ಮೂಲಕ ಸೇವೆಯ ಉಪದೇಶವನ್ನು ನೀಡಿದ್ದರು. ಈ ಮೂರೂ ಸಂಭ್ರಮಗಳನ್ನು ಕ್ರೈಸ್ತ ಸಭೆ ಸಂಯುಕ್ತವಾಗಿ ಆಚರಿಸಿಕೊಂಡು ಬರುತ್ತಿದೆ.

ಯೇಸುಕ್ರಿಸ್ತರು ತಮ್ಮ ಶಿಷ್ಯರ ಪಾದಗಳನ್ನು ತೊಳೆದುದರ ಸ್ಮರಣಾರ್ಥ ಬಿಷಪ್ ಅಥವಾ ಧರ್ಮಗುರುಗಳು 12 ಮಂದಿ ಕ್ರೈಸ್ತ ವಿಶ್ವಾಸಿಗಳ ಪಾದಗಳನ್ನು ತೊಳೆಯುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಿದ್ದು, ಪಾದಗಳನ್ನು ತೊಳೆಯುವ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು.

ಬಲಿ ಪೂಜೆಯ ವೇಳೆ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ಕೊರೊನಾ ಕಾಯಿಲೆಯಿಂದ ಬಳಲುತ್ತಿರುವವರು ಶೀಘ್ರ ಗುಣಮುಖರಾಗಲಿ. ಈ ರೋಗ ಆದಷ್ಟು ಬೇಗನೆ ನಿರ್ಮೂಲನವಾಗಲಿ. ರೋಗಿಗಳಿಗೆ ಸೇವೆ ಒದಗಿಸುತ್ತಿರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ದೇವರು ಉತ್ತಮ ಆರೋಗ್ಯವನ್ನು ಹಾಗೂ ಇನ್ನಷ್ಟು ಶಕ್ತಿಯನ್ನು ದಯಪಾಲಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಯಿತು. ಕೋವಿಡ್‌–19 ಸೋಂಕಿನಿಂದ ಮೃತಪಟ್ಟವರಿಗೆ ಚಿರಶಾಂತಿಯನ್ನು ಕೋರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT