ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ₹2 ಕೋಟಿ ವೆಚ್ಚದಲ್ಲಿ ಕೊಠಡಿ, ಆಟದ ಮೈದಾನ: ಪುಷ್ಪರಾಜ್

Last Updated 2 ಡಿಸೆಂಬರ್ 2022, 12:46 IST
ಅಕ್ಷರ ಗಾತ್ರ

ಸುರತ್ಕಲ್: ‘ಸುರತ್ಕಲ್ ಸಮೀಪದ ಮಧ್ಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಆಟದ ಮೈದಾನ ನಿರ್ಮಿಸಲು 2 ಎಕರೆ ಜಾಗ ಸರ್ಕಾರದಿಂದ ಮಂಜೂರಾತಿಗೊಂಡಿದೆ. ಆ ಜಾಗದಲ್ಲಿ ಮಧ್ಯ ಶಾಲಾ ಟ್ರಸ್ಟ್ ಗೌರವಾಧ್ಯಕ್ಷ ಕರುಣಾಕರ ಎಂ. ಶೆಟ್ಟಿ ನೇತೃತ್ವದಲ್ಲಿ ಸುಮಾರು ₹ 2 ಕೋಟಿ ವೆಚ್ಚದಲ್ಲಿ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಹಾಗೂ ಸುಸಜ್ಜಿತವಾದ ಆಟದ ಮೈದಾನವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ’ ಎಂದು ವಿದ್ಯಾನಿಧಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘2015-16ರ ಸಾಲಿನಲ್ಲಿ 75 ಮಕ್ಕಳನ್ನು ಹೊಂದಿದ್ದ ಶಾಲೆಯನ್ನು ಟ್ರಸ್ಟ್‌ನ ಗೌರವಾಧ್ಯಕ್ಷ ಕರುಣಾಕರ ಎಂ.ಶೆಟ್ಟಿ ಮಧ್ಯಗುತ್ತು ಮತ್ತು ಮೋಹನ್ ಚೌಟ ಮಧ್ಯ ಅವರ ನೇತೃತ್ವದಲ್ಲಿ ದಾನಿಗಳಿಂದ, ಸಂಘ ಸಂಸ್ಥೆಗಳಿಂದ, ಊರಿನ ಹಿರಿಯರಿಂದ, ಹಳೆ ವಿದ್ಯಾರ್ಥಿಗಳಿಂದ, ಸರ್ಕಾರದಿಂದ ಮತ್ತು ಜನಪ್ರತಿನಿಧಿಗಳಿಂದ ಸಹಕಾರ ಪಡೆದು ಶಾಲೆಯ ಚಿತ್ರಣವೇ ಬದಲಿಸಲಾಗಿದೆ. ಈಗ ಶಾಲೆಯು ಜಿಲ್ಲೆ ಹಾಗೂ ರಾಜ್ಯಕ್ಕೆ ಮಾದರಿ ಎನಿಸಿದೆ’ ಎಂದರು.

‘ಮಕ್ಕಳ ಕಲಿಕೆಗೆ ಪೂರಕವಾದ ತರಗತಿಗಳ ವಿನ್ಯಾಸ, ಪ್ರತಿ ಕೊಠಡಿಗಳ ನೆಲಕ್ಕೆ ಟೈಲ್ಸ್ ಅಳವಡಿಕೆ, ಸ್ಮಾರ್ಟ್ ಕ್ಲಾಸ್ ರಚನೆ, ಶಾಲಾ ಮಕ್ಕಳಿಗಾಗಿ 3 ವಾಹನದ ವ್ಯವಸ್ಥೆ, ಕುಡಿಯುವ ಶುದ್ಧ ನೀರಿನ ವ್ಯವಸ್ಥೆ, ಗಂಡು ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ತರಗತಿಯ ಕೊಠಡಿಗಳು, ಗ್ರಂಥಾಲಯ ವ್ಯವಸ್ಥೆ, ಬಾಲವನದ ವ್ಯವಸ್ಥೆ, ಉಚಿತ ಬರೆಯುವ ಪುಸ್ತಕದ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ, ಕಂಪ್ಯೂಟರ್ ತರಗತಿಗಳು ಹೀಗೆ ಹತ್ತು ಹಲವಾರು ರೀತಿಯ ವ್ಯವಸ್ಥೆಯನ್ನು ಮಾಡಿರುತ್ತೇವೆ’ ಎಂದರು.

ಪ್ರಸ್ತುತ ಸಾಲಿನಲ್ಲಿ ಯೋಗ, ಕರಾಟೆ, ಭರತನಾಟ್ಯ, ಕಂಪ್ಯೂಟರ್, ಯಕ್ಷಗಾನ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಒಂಬತ್ತನೇ ಹಾಗೂ ಹತ್ತನೇ ತರಗತಿ ಪ್ರಾರಂಭಿಸಲು ಶಾಸಕರ ಮುಖಾಂತರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅನುಮತಿ ದೊರೆತ ತಕ್ಷಣ ತರಗತಿ ಪ್ರಾರಂಭಿಸಲಾಗುವುದು ಎಂದರು.

ಟ್ರಸ್ಟ್‌ನ ಗೌರವಾಧ್ಯಕ್ಷ ಕರುಣಾಕರ ಶೆಟ್ಟಿ ಮಧ್ಯಗುತ್ತು ಮಾಹಿತಿ ನೀಡಿ, ‘ಶಾಲೆಯಲ್ಲಿ ಎಲ್.ಕೆ.ಜಿ ಯುಕೆಜಿಯಿಂದ ಎಂಟನೇ ತರಗತಿಯವರೆಗೆ 700 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದು, ಮಕ್ಕಳಿಗೆ ಶಿಕ್ಷಣ ಪಡೆಯಲು ಕಷ್ಟವಾಗಬಾರದು ಎಂಬ ನಿಟ್ಟಿನಲ್ಲಿ ₹ 50 ಲಕ್ಷ ಮೊತ್ತದ ಶಾಶ್ವತ ಜ್ಞಾನನಿಧಿ ಯೋಜನೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಮಧ್ಯ ಗ್ರಾಮದ ಅಭಿವೃದ್ಧಿಗೂ ವಿವಿಧ ಯೋಜನೆ ರೂಪಿಸಲಾಗಿದೆ. ಮುಂದಿನ ವರ್ಷ ಶಾಲೆಯ ವಿದ್ಯಾರ್ಥಿಗಳ ಕಲಿಕೆಗಾಗಿ ಹೆಚ್ಚುವರಿ ಕಂಪ್ಯೂಟರ್ ಒದಗಿಸಲಾಗುವುದು’ ಎಂದರು.

ಶಾಲಾ ವಾರ್ಷಿಕೋತ್ಸವವು ಡಿ.4 ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕೋಶಾಧಿಕಾರಿ ಪ್ರಕಾಶ್ ಎಂ.ಶೆಟ್ಟಿ, ಸದಸ್ಯ ವಿಠಲ ಶೆಟ್ಟಿ ಎಲ್ಲದಡಿ, ವಜ್ರಾಕ್ಷಿ ಪಿ. ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭಗವಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ದೇವಾಡಿಗ, ವಜ್ರಾಕ್ಷಿ ಪಿ. ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT