ಗುರುವಾರ , ಮಾರ್ಚ್ 30, 2023
24 °C
ವಾಸ್ತವ್ಯದ ಗುಡಿಸಲು ಕುಸಿದು ಅತಂತ್ರವಾಗಿದ್ದ ಬಡ ಕುಟುಂಬ

ವಿದ್ಯಾರ್ಥಿನಿಗೆ ಆಸರೆಯಾದ ಗ್ರಾ.ಪಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ಘೋಷಣೆ ಮಾಡಿದ ದಿನವೇ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ವಾಸ್ತವ್ಯದ ಮನೆಯ ಒಂದು ಭಾಗ ಕುಸಿದಿದೆ. ಇದರಿಂದ ಈ ಬಡ ಕುಟುಂಬಕ್ಕೆ ದಿಕ್ಕುತೋಚದಾಗಿತ್ತು. ಇದಕ್ಕೆ ಸ್ಪಂದಿಸಿರುವ  ಜನಪ್ರತಿನಿಧಿಗಳು ಈ‌ ಕುಟುಂಬಕ್ಕೆ ಆಸರೆಯಾದರು.

ನಗರದ ಹೊರವಲಯದ ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬುರ್ಗ ಎಂಬಲ್ಲಿ ವಾಸವಿರುವ ಗೋಪಾಲ ಶೆಟ್ಟಿ ಅವರದ್ದು ತೀರಾ ಬಡ ಕುಟುಂಬ. ಕುಸಿಯುವ ಹಂತದಲ್ಲಿರುವ ಹೆಂಚಿನ ಮಾಡಿಗೆ ಪ್ಲಾಸ್ಟಿಕ್ ಹೊದಿಕೆ ಮಾಡಿದ ಜೋಪಡಿಯಲ್ಲಿ ಈ ಕುಟುಂಬ ನೆಲೆಸಿತ್ತು. ದುಡಿಯ
ಲಾಗದೆ ಅಸಹಾಯಕ ಸ್ಥಿತಿಯಲ್ಲಿರುವ ಯಜಮಾನ, ಪತ್ನಿ ಶಾರದಾ ಬೀಡಿ ಸುತ್ತಿ ಇಬ್ಬರು ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ವಹಣೆ ಮಾಡುತ್ತಿದ್ದರು.

ಮನೆಯಲ್ಲಿ ಓದು ಕಷ್ಟವಾಗುವ ಕಾರಣ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಾಗಿದ್ದ ದೀಕ್ಷಾ ಮಾವನ ಮನೆಯಲ್ಲಿ ಉಳಿದು ಶಿಕ್ಷಣ ಪಡೆಯುತ್ತಿದ್ದಳು. ಆನ್‌ಲೈನ್ ತರಗತಿ ಕಾರಣ ಮನೆಗೆ ಬಂದು ಪರೀಕ್ಷೆ ಸಿದ್ಧತೆಯಲ್ಲಿದ್ದಳು. ಓದಿನ ನಡುವೆ, ಮನೆ ಪೂರ್ಣ ಕುಸಿದರೆ ಎಂಬ ಆತಂಕ ಅವಳನ್ನು ಕಾಡುತ್ತಿತ್ತು. ಅದನ್ನು ಅನೇಕರ ಬಳಿ ಹೇಳಿಕೊಂಡಿದ್ದಳು. ಅವಳ ಧ್ವನಿಗೆ ಸ್ಪಂದನೆ ದೊರೆತಿದೆ.

ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಾ ರಮೇಶ್ ಹಾಗೂ ತಂಡದವರು ಈ ವಿದ್ಯಾರ್ಥಿನಿ ಹಾಗೂ ಕುಟುಂಬದವನ್ನು ಗ್ರಾಮ ಪಂಚಾಯಿತಿ ಸಭಾಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿದ್ದಾರೆ. ಪಂಚಾಯಿತಿ ಮೂಲಕ ಮನೆ ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೆ ಸಮೀಪದಲ್ಲಿರುವ ಬಾಡಿಗೆ ಮನೆಯನ್ನು ಗೊತ್ತುಪಡಿಸಿ, ಪಂಚಾಯಿತಿ ವತಿಯಿಂದ ಬಾಡಿಗೆ ನೀಡಲು ನಿರ್ಧರಿಸಿದ್ದಾರೆ.

‘ನಮ್ಮ ವಾಸ್ತವ್ಯಕ್ಕೆ ವ್ಯವಸ್ಥೆ’

‘ಶಾಸಕ ಸಂಜೀವ ಮಠಂದೂರು ಅವರು ಮಂಗಳವಾರ ಸಂಜೆ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದರು. ‘ನಮ್ಮ ನೋವನ್ನು ಅವರ ಬಳಿ ಹೇಳಿಕೊಂಡಿದ್ದೇವೆ. ಅವರು ನಮಗೆ ಹೊಸ ಮನೆಯನ್ನು ಒದಗಿಸುವ ಭರವಸೆ ನೀಡಿದ್ದಾರೆ. ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಾ ರಮೇಶ್ ಮತ್ತು ಸದಸ್ಯರು ಬಾಡಿಗೆ ಮನೆಯನ್ನು ಗೊತ್ತುಪಡಿಸಿ ನಮ್ಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ’ ಎಂದು ವಿದ್ಯಾರ್ಥಿನಿ ದೀಕ್ಷಾ ಪ್ರತಿಕ್ರಿಯಿಸಿದ್ದಾಳೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.