ಸೋಮವಾರ, ಮೇ 23, 2022
30 °C
ಸಮರ್ಪಕ ಸೌಲಭ್ಯ ಕಲ್ಪಿಸಲು ಮಲವಂತಿಗೆ, ತೆಂಕಮಿಜಾರು ಗ್ರಾಮಸ್ಥರ ಆಗ್ರಹ

ಗ್ರಾಮಸಭೆ: ಅಧಿಕಾರಿಗಳ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ರಸ್ತೆ ಸಂಪರ್ಕ ಕಡಿತ, ದುರಸ್ತಿಯಾಗದ ಬೀದಿ ದೀಪ, ನೆನೆಗುದಿಗೆ ಬಿದ್ದಿರುವ ತಡೆಗೋಡೆಗಳ ನಿರ್ಮಾಣ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸೋಮವಾರ ದಿಡುಪೆ ಶಾಲೆಯಲ್ಲಿ ನಡೆದ ಮಲವಂತಿಗೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳ ಗಮನ ಸೆಳೆದರು.

ಹೆಚ್ಚಿನ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು. ಇದಕ್ಕೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಲವಂತಿಗೆಯ ಗಾಮ ಲೆಕ್ಕಿಗರಿಗೆ ಮೂರು ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ಇದ್ದು, ನಮ್ಮ ಗ್ರಾಮದ ಸಮಸ್ಯೆಗಳಿಗೆ ತುರ್ತು ಪರಿಹಾರ ಸಿಗುತ್ತಿಲ್ಲ.  ಮಲವಂತಿಗೆ ಪತ್ಯೇಕ ಗ್ರಾಮ ಲೆಕ್ಕಿಗರನ್ನು ನೇಮಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಹೋಂ ಸ್ಟೇಗಳಿಗೆ ಅನುಮತಿ ಕೋರಿಕೆ: ಕಾನೂನಿನ ಚೌಕಟ್ಟಿನೊಳಗೆ ಹೋಂ ಸ್ಟೇ ಆರಂಭಿಸಲು ಅನುಮತಿ ನೀಡಬೇಕೆಂದು ಜನರು ಕೋರಿದರು. ಕಂದಾಯ ಇಲಾಖೆ, ಅರಣ್ಯ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ  ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿ ಭರವಸೆ ನೀಡಿದರು.

ದಿಡುಪೆ -ಎಳನೀರು ಸಂಪರ್ಕ ರಸ್ತೆ ನಿರ್ಮಾಣಕ್ಕೆ ಸರ್ವೆ ಕಾರ್ಯ ಆರಂಭವಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಎಳನೀರು ಪ್ರದೇಶದಲ್ಲಿ 650 ಜನರು ವಾಸಿಸುತ್ತಿದ್ದು, 150 ಮನೆಗಳಿವೆ. ತಾಲ್ಲೂಕು ಕೇಂದ್ರವಾದ ಬೆಳ್ತಂಗಡಿಗೆ ಬರಲು ಅವರು 130 ಕಿ.ಮೀ. ದೂರ ಪ್ರಯಾಣಿಸಬೇಕಾಗುತ್ತದೆ’ ಎಂದು ಗ್ರಾಮಸ್ಥರು ಸಭೆಯ ಗಮನ ಸೆಳೆದರು.

ಭ್ರಷ್ಟಾಚಾರ ಆರೋಪ

ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು’ ಎಂದು ಸೋಮವಾರ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮರಿಯಡ್ಕ ರಮೇಶ್ ಶೆಟ್ಟಿ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೋಡೆಲ್ ಅಧಿಕಾರಿಗೆ ಲಿಖಿತ ದೂರು ನೀಡಿದರು. ಗ್ರಾಮಸ್ಥರು ಇದನ್ನು ಬೆಂಬಲಿಸಿದರು.

ತೆಂಕಮಿಜಾರು ಪಂಚಾಯಿತಿ ಕಚೇರಿ ಇರುವ ನೀರ್ಕೆರೆಯಲ್ಲೇ ಗ್ರಾಮ ಕರಣಿಕರ ಕಚೇರಿ ತೆರೆಯಬೇಕು ಎಂದು ಮನೋಜ್ ಕುಮಾರ್ ಆಗ್ರಹಿಸಿದರು. ಈಗ ತೋಡಾರ್‌ನಲ್ಲಿ ಗ್ರಾಮಕರಣಿಕರ ಕಚೇರಿಯಿದೆ. ಅದನ್ನೇ ಮುಂದುವರಿಸಬೇಕು, ನೀರ್ಕೆರೆಗೆ ಸ್ಥಳಾಂತರಿಸಿದರೆ ತೋಡಾರು ಗ್ರಾಮಸ್ಥರು ಸುತ್ತು ಬಳಸಿ ನೀರ್ಕೆರೆಗೆ ಬರಬೇಕಾಗುತ್ತದೆ ಎಂದು ಹಸನಬ್ಬ ಆಕ್ಷೇಪ ವ್ಯಕ್ತಪಡಿಸಿದರು.

ತೆಂಕಮಿಜಾರು ಹಾಗೂ ಬಡಗ ಮಿಜಾರು ಗ್ರಾಮಗಳಿಗೆ ಪ್ರತ್ಯೇಕ ಗ್ರಾಮ ಕರಣಿಕರನ್ನು ಒದಗಿಸುವ ವಿಚಾರವಾಗಿ ತಹಸೀಲ್ದಾರ್‌ ಗಮನಕ್ಕೆ ತರಲಾಗುವುದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ ಹೇಳಿದರು.

ತೆಂಕಮಿಜಾರು-ಅಶ್ವತ್ಥಪುರ ಪರಿಸರಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು, ಇಲ್ಲಿಗೆ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ಒದಗಿಸಬೇಕು ಎಂದು ಸದಾಶಿವ ಶೆಟ್ಟಿಗಾರ್, ಬಾಲಕೃಷ್ಣ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು