ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಫಲ್ಗುಣಿ ಮಾಲಿನ್ಯ ಪರಿಶೀಲನೆಗೆ ಸಮಿತಿ ರಚನೆ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ವಿಚಾರಣೆ ಆ.1ಕ್ಕೆ ಮುಂದೂಡಿಕೆ
Last Updated 3 ಮೇ 2022, 16:28 IST
ಅಕ್ಷರ ಗಾತ್ರ

ಮಂಗಳೂರು: ಫಲ್ಗುಣಿ ನದಿಯ ಮಾಲಿನ್ಯವನ್ನು ತಗ್ಗಿಸಲು ಅನುವಾಗುವಂತೆ ಕ್ರಮಗಳನ್ನು ಶಿಫಾರಸು ಮಾಡಲು ನವದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠವು ಐವರು ಸದಸ್ಯರ ಸಮಿತಿಯನ್ನು ರಚಿಸಿದೆ.

ನ್ಯಾಯಮಂಡಳಿಯ ಅಧ್ಯಕ್ಷ ಆದರ್ಶ್ ಕುಮಾರ್ ಗೋಯೆಲ್, ನ್ಯಾಯಾಂಗ ಸದಸ್ಯ ಸುಧೀರ್ ಅಗರ್ವಾಲ್ ಮತ್ತು ತಜ್ಞ ಸದಸ್ಯ ಎ. ಸೆಂಥಿಲ್ ವೇಲ್ ಅವರನ್ನು ಒಳಗೊಂಡ ನ್ಯಾಯಮಂಡಳಿಯ ಪೂರ್ಣ ಪೀಠವು ಮಾಧ್ಯಮ ವರದಿಗಳನ್ನು ಆಧರಿಸಿ, ಕೈಗಾರಿಕೆಗಳು ಸಂಸ್ಕರಿಸದ ತ್ಯಾಜ್ಯಗಳು ಮತ್ತು ಕೊಳಚೆಯನ್ನು ನದಿಗೆ ಬಿಡುತ್ತಿವೆ. ಇದು 1974ರ ನೀರು ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬುದನ್ನು ಗಮನಿಸಿತು.

ನದಿಯನ್ನು ಕಲುಷಿತಗೊಳಿಸುತ್ತಿರುವ ಕೈಗಾರಿಕೆ ಮತ್ತು ಉಳಿದ ತ್ಯಾಜ್ಯಗಳಿಂದಾಗಿ ಮಮರವೂರು ಕಿಂಡಿ ಅಣೆಕಟ್ಟೆಯ ಬಳಿ ನೂರಾರು ಮೀನುಗಳು ಸತ್ತಿವೆ. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳು ಹೊರಸೂಸುವ ತ್ಯಾಜ್ಯದಿಂದ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಇಡೀ ನದಿಯು ಅಸಹನೀಯ ದುರ್ವಾಸನೆಯಿಂದ ಕೂಡಿದೆ ಎಂಬ ಅಂಶಗಳನ್ನು ನ್ಯಾಯಮಂಡಳಿ ಗಮನಿಸಿದೆ.

ವಸ್ತುಸ್ಥಿತಿ ದೃಢಪಡಿಸಿಕೊಳ್ಳಲು ಹಾಗೂ ಕಾನೂನು ಜಾರಿಗೊಳಿಸಲು ಆ ಮೂಲಕ ಪರಿಸರ ಮತ್ತು ಜೈವಿಕ ವೈವಿಧ್ಯ ರಕ್ಷಣೆಗೆ ಪರಿಹಾರ ಕ್ರಮ ಸೂಚಿಸಬೇಕೆಂದು ನಿರ್ಧರಿಸಿದ ನ್ಯಾಯ ಮಂಡಳಿಯು, ಈ ಸಂಬಂಧ ಕ್ಷೇತ್ರ ಸಮೀಕ್ಷೆ ನಡೆಸಲು ಐವರು ಸದಸ್ಯರ ಸಮಿತಿ ರಚಿಸಿದೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಾದೇಶಿಕ ಅಧಿಕಾರಿ, ಬೆಂಗಳೂರಿನಲ್ಲಿರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಕರ್ನಾಟಕ ಮೀನುಗಾರಿಕಾ ನಿರ್ದೇಶಕರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಯು ಎರಡು ವಾರಗಳಲ್ಲಿ ಸಭೆ ನಡೆಸಿ, ಸ್ಥಳಕ್ಕೆ ಭೇಟಿ ನೀಡಬೇಕು, ಸ್ಥಳೀಯರೊಂದಿಗೆ ಚರ್ಚಿಸಿ, ಮಾಲಿನ್ಯದ ಕಾರಣಗಳನ್ನು ಪತ್ತೆ ಹಚ್ಚಿ, ಪರಿಹಾರ ಕ್ರಮಕ್ಕೆ ಸೂಚಿಸಬೇಕು. ಸ್ಥಳ ಪರಿಶೀಲನೆಯ ವೇಳೆ ನಿರ್ದಿಷ್ಟ ಕೈಗಾರಿಕೆಯಿಂದ ನದಿ ನೀರು ಮಲಿನಗೊಳ್ಳುತ್ತಿರುವುದು ಕಂಡ ಬಂದಲ್ಲಿ ನೋಟಿಸ್ ಜಾರಿಗೊಳಿಸಬೇಕು ಮತ್ತು ನ್ಯಾಯಮಂಡಳಿಗೆ ವಿಷಯ ತಿಳಿಸಬೇಕು. ಸಮಿತಿ ಕೈಗೊಂಡಿರುವ ವರದಿ ಬಗ್ಗೆ ಎರಡು ತಿಂಗಳುಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿರುವ ಹಸಿರು ನ್ಯಾಯಮಂಡಳಿಯ ಪೀಠವು, ಮುಂದಿನ ವಿಚಾರಣೆಯನ್ನು ಆಗಸ್ಟ್ 1ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT