ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದಲ್ಲಿ 15ಕೋಟಿಗೂ ಅಧಿಕ ಇ–ವೇ ಬಿಲ್‌

ಜಿಎಸ್‌ಟಿ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ಮುರಳೀಕೃಷ್ಣ ಹೇಳಿಕೆ
Last Updated 21 ಮೇ 2019, 20:02 IST
ಅಕ್ಷರ ಗಾತ್ರ

ಮಂಗಳೂರು: ಜಿಎಸ್‌ಟಿ ಯೋಜನೆಯಡಿ ಜಾರಿಗೆ ತರಲಾದ ಇ–ವೇಲ್‌ ಬಿಲ್‌ ವ್ಯವಸ್ಥೆಯಡಿ ಒಂದು ವರ್ಷದಲ್ಲಿ 15 ಕೋಟಿಗೂ ಅಧಿಕ ಇ–ವೇ ಬಿಲ್‌ ಪ್ರಸ್ತುತಪಡಿಸಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಡಾ.ಬಿ.ವಿ. ಮುರಳೀಕೃಷ್ಣ ಹೇಳಿದರು.

ಮಂಗಳವಾರ ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ನಗರದ ವ್ಯಾಪಾರಿಗಳು, ಉದ್ಯಮಿಗಳಿಗಾಗಿ ಆಯೋಜಿಸಿದ್ದ ಜಿಎಸ್‌ಟಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತೆರಿಗೆ ಸೇರಿದಂತೆ ವಿನಾಯಿತಿ ಸರಕುಗಳ ಮೌಲ್ಯಗಳನ್ನು ಹೊರತುಪಡಿಸಿ, ಯಾವುದೇ ರೀತಿಯ ಸರಕುಗಳ ರಫ್ತ–ಆಮದಿಗೆ ಸಂಬಂಧಿಸಿದ ಮೌಲ್ಯವು ₹50 ಸಾವಿರಕ್ಕೂ ಅಧಿಕವಾದಾಗ, ಇ–ವೇ ಬಿಲ್‌ ರಚನೆ ಅಗತ್ಯವಾಗಿದೆ. ಜಿಎಸ್‌ಟಿಯಲ್ಲಿ ರಿಟರ್ನ್ಸ್‌ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಈ ರೀತಿಯ ಬದಲಾವಣೆಯ ತೆರಿಗೆ ಪದ್ಧತಿಯಲ್ಲಿ ಮೇಲ್ನೋಟಕ್ಕೆ ಗೊಂದಲ ಮತ್ತು ಕಷ್ಟಕರವಾಗಿದ್ದರೂ, ವ್ಯಾಪಾರ ವಹಿವಾಟಿನಲ್ಲಿ ಸಾಕಷ್ಟು ಬದಲಾವಣೆಗಳು ಸಾಧ್ಯವಾಗಿವೆ. ವ್ಯಾಪಾರಸ್ಥರು ಸ್ವಇಚ್ಛೆಯಿಂದ ಇ–ವೇ ಬಿಲ್‌ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಈ ಆರ್ಥಿಕ ವರ್ಷದಲ್ಲಿ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದ ಇ–ವೇ ಬಿಲ್‌ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಜಿಎಸ್‌ಟಿ ರಿಟರ್ನ್‌ ಸಲ್ಲಿಕೆಯಾಗಿದ್ದು, ಶೇ 100 ರಷ್ಟು ಗುರಿ ಸಾಧಿಸುವ ವಿಶ್ವಾಸವಿದೆ ಎಂದರು.

ಜಿಎಸ್‌ಟಿ ರಿಟರ್ನ್‌ ಸಲ್ಲಿಕೆಯನ್ನು ಸರಳೀಕರಣಗೊಳಿಸಲು ಹಾಗೂ ಇನ್ನಷ್ಟು ಪಾರದರ್ಶಕವಾಗಿಸಲು ಹೆಚ್ಚುವರಿ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಜಿಎಸ್‌ಟಿ ರಿಟರ್ನ್‌ ಸಲ್ಲಿಕೆ ಮತ್ತಷ್ಟು ಪರಿಣಾಮಕಾರಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಡಿಸೆಂಬರ್‌ನಲ್ಲಿ ಹೊರಡಿಸಿದ ಆದೇಶದ ಪ್ರಕಾರ, 2017–18ರ ಜಿಎಸ್‌ಟಿ ವಾರ್ಷಿಕ ರಿಟರ್ನ್‌ ಸಲ್ಲಿಕೆಗೆ ಜೂನ್‌ 30 ಕೊನೆಯ ದಿನವಾಗಿದೆ. ವಿಳಂಬವಾಗಿ ಸಲ್ಲಿಸುವ ರಿಟರ್ನ್‌ಗಳಿಗೆ ದಿನಕ್ಕೆ ₹100 ರಂತೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ನೋಂದಾಯಿತ ತೆರಿಗೆ ಪಾವತಿದಾರರು ಜಿಎಸ್‌ಟಿಆರ್ 9, ಜಿಎಸ್‌ಟಿ ಯೋಜನೆಯಡಿ ನೋಂದಾಯಿತ ತೆರಿಗೆದಾರರು ಜಿಎಸ್‌ಟಿಆರ್‌ 9 ಎ, ಇ–ಕಾಮರ್ಸ್‌ ತೆರಿಗೆದಾರರು ಜಿಎಸ್‌ಟಿಆರ್‌ 9 ಬಿ ಸಲ್ಲಿಸಬೇಕು. ಮಾಸಿಕ ತೆರಿಗೆ ಪಾವತಿದಾರರು ಜಿಎಸ್‌ಟಿಆರ್‌ 3 ಬಿ ಮೂಲಕ ಲೆಡ್ಜರ್‌ ವಿವರಗಳನ್ನು ದಾಖಲಿಸಬೇಕು ಎಂದು ಹೇಳಿದರು.

ಜಿಎಸ್‌ಟಿಯ ಸ್ವರೂಪಗಳು, ರಿಟರ್ನ್ಸ್‌ ಸಲ್ಲಿಕೆ ಮಾಡುವ ರೀತಿ, ಯಾರು ರಿಟರ್ನ್ಸ್‌ ಸಲ್ಲಿಕೆ ಮಾಡುವ ಅಗತ್ಯವಿದೆ, ಮಾಡದೇ ಇದ್ದಲ್ಲಿ ದಂಡ ಸೇರಿದಂತೆ ಕೈಗೊಳ್ಳುವ ಕ್ರಮಗಳ ಕುರಿತು ವಿವರವಾದ ಮಾಹಿತಿಯನ್ನು ಡಾ. ಮುರಳೀಕೃಷ್ಣ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಪಿ.ಬಿ. ಅಬ್ದುಲ್‌ಹಮೀದ್‌ ಸ್ವಾಗತಿಸಿದರು. ಉಪಾಧ್ಯಕ್ಷ ಐಸಾಕ್‌ ವಾಸ್‌ ಪರಿಚಯಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಉದ್ಯಮಿಗಳು, ವ್ಯಾಪಾರಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT