ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಕ್‍ ನ್ಯೂಸ್ ಬಗ್ಗೆ ಎಚ್ಚರವಿರಲಿ

Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿಗಳು ಬೇಗನೆ ಹರಡುತ್ತವೆ. ಯಾವುದು ನಿಜ, ಯಾವುದು ಸುಳ್ಳು ಎಂಬುದನ್ನು ಪರಾಂಬರಿಸದೆ ಜನರು ಆ ಸುದ್ದಿಗಳನ್ನು ನಂಬಿ ಬಿಡುತ್ತಾರೆ. ಈ ರೀತಿ ಹರಡುವ ಸುದ್ದಿಗಳಲ್ಲಿ ಫೇಕ್ ನ್ಯೂಸ್ ಅಥವಾ ಸುಳ್ಳು ಸುದ್ದಿ ಯಾವುದು ಎಂಬುದನ್ನು ಪತ್ತೆ ಹಚ್ಚಲು ಸುಲಭ ಉಪಾಯಗಳು ಇಲ್ಲಿವೆ.

1. ಆಕರ್ಷಕ ಶೀರ್ಷಿಕೆ: ಸುಳ್ಳು ಸುದ್ದಿಗಳು ಹೆಚ್ಚಾಗಿ ಆಕರ್ಷಕ ಶೀರ್ಷಿಕೆಗಳನ್ನು ಹೊಂದಿರುತ್ತವೆ. ಈ ಸುದ್ದಿಗಳ ಶೀರ್ಷಿಕೆಗಳು ನೋಡಿದ ಕೂಡಲೇ ಓದುಗರಲ್ಲಿ ಕುತೂಹಲ ಹುಟ್ಟಿಸುವಂತಿದ್ದು, ಒಳಗಿರುವ ಸುದ್ದಿಯಲ್ಲಿ ಶೀರ್ಷಿಕೆಯಲ್ಲಿ ಹೇಳಿದಂತೆ ಇರುವ ವಿಷಯಗಳು ಇರುವುದಿಲ್ಲ.

2. ಮೂಲ ಹುಡುಕಿ: ಸುದ್ದಿಯಲ್ಲಿ ಉಲ್ಲೇಖಿಸಿರುವ ಹೇಳಿಕೆ ಗಳು ಅಥವಾ ಇತರ ವಿಷಯಗಳ ಮೂಲ ಯಾವುದು ಎಂಬುದನ್ನು ಹುಡುಕಿ. ಆ ಮೂಲ ನಂಬಲರ್ಹವೇ ಎಂಬು ದನ್ನು ಪರಿಶೀಲಿಸಿ. ಅಲ್ಲಿ ಉಲ್ಲೇಖಿಸಿರುವ ಮೂಲಗಳು ಆ ಸುದ್ದಿಯನ್ನು ಪ್ರಕಟಿಸಿವೆಯೇ ಎಂಬುದನ್ನು ಗಮನಿಸಿ. ಒಂದು ವೇಳೆ ಪ್ರತ್ಯೇಕ ವೆಬ್‍ಸೈಟ್‍ವೊಂದು ಅಂಥದ್ದೇ ಸುದ್ದಿಗಳನ್ನು ಪ್ರಕಟಿಸುತ್ತಿದ್ದರೆ ಆ ವೆಬ್‍ಸೈಟ್‍ನ ಬಗ್ಗೆ ಅರಿಯುವುದು ಒಳಿತು.

3. ಯುಆರ್‌ಎಲ್ ನೋಡಿ: ಕೆಲವು ಪ್ರಮುಖ ವೆಬ್‌ಸೈಟ್‌ಗಳ ಸುದ್ದಿಗಳನ್ನು ಹೋಲುವಂಥ ಸುದ್ದಿಗಳು ಕಂಡು ಬಂದರೆ ಆ ಸುದ್ದಿಯ ಯುಆರ್‍ಎಲ್ ಗಮನಿಸಿ. ಪ್ರಮುಖ ವೆಬ್‌ಸೈಟ್‌ಗಳ ಹೆಸರಿನ ಹೋಲಿಕೆ ಇದ್ದರೂ ಅದರ ಸ್ಪೆಲಿಂಗ್‌‍ನಲ್ಲಿ ಚಿಕ್ಕ ಬದಲಾವಣೆ ಮಾಡಿರುತ್ತಾರೆ. ಯುಆರ್‍ಎಲ್ ನೋಡಿದರೆ ಈ ಸ್ಪೆಲಿಂಗ್ ದೋಷ ಪತ್ತೆ ಹಚ್ಚಿ ಸುದ್ದಿಯನ್ನು ಯಾವ ವೆಬ್‍ಸೈಟ್ ಪ್ರಕಟಿಸಿದೆ ಎಂಬುದನ್ನು ತಿಳಿಯಬಹುದು.

4. ಚಿತ್ರಗಳನ್ನು ಗಮನಿಸಿ: ಸುಳ್ಳು ಸುದ್ದಿಯಲ್ಲಿ ಬಳಸಿರುವ ಚಿತ್ರಗಳು ಅಥವಾ ವಿಡಿಯೊಗಳು ಕೂಡ ಸುಳ್ಳಾಗಿರುತ್ತವೆ. ಕೆಲವೊಂದು ಚಿತ್ರಗಳನ್ನು ತಿರುಚಲಾಗಿರುತ್ತದೆ. ಹೀಗಿರುವಾಗ ಗೂಗಲ್ ಇಮೇಜ್ ಸರ್ಚ್ ಮಾಡಿ ಆ ಚಿತ್ರ ನಿಜವೋ ಸುಳ್ಳೋ ಎಂದು ಪರೀಕ್ಷಿಸುವುದು ಮಾತ್ರವಲ್ಲದೆ ಚಿತ್ರದ ಮೂಲ ಯಾವುದು ಎಂಬುದನ್ನೂ ಪತ್ತೆ ಹಚ್ಚಬಹುದು.

5. ತಮಾಷೆ ಸುದ್ದಿಯೂ ಆಗಿರಬಹುದು: ಕೆಲವೊಂದು ವೆಬ್‍ಸೈಟ್‌ಗಳು ತಮಾಷೆಗಾಗಿ ಸುದ್ದಿಗಳನ್ನು ಪ್ರಕಟಿಸುವುದುಂಟು. ಇಂಥ ಸುದ್ದಿಗಳ ಕೆಳಗೆ ಈ ಸುದ್ದಿಗಳು ಕೇವಲ ತಮಾಷೆಗಾಗಿ ಎಂದು ಬರೆದಿರುತ್ತದೆ. ಆದರೆ ಇದನ್ನು ನಿಜ ಎಂದು ನಂಬಿ ಆ ಸುದ್ದಿಗಳೂ ಸಾಮಾಜಿಕ ತಾಣದಲ್ಲಿ ಶೇರ್ ಆಗುತ್ತವೆ. ಹಾಗಾಗಿ ಸುದ್ದಿಗಳನ್ನು ಪೂರ್ತಿಯಾಗಿ ಓದಿ, ಅವು ನಿಜವೇ ಎಂದು ದೃಢಪಡಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT