ಬಜ್ಪೆ: ಇಂದಿನಿಂದ `ಪರ್ಬೊದ ಸಿರಿ'  

7
ಗೋಳಿದಡಿಗುತ್ತಿನಲ್ಲಿ 20ವರೆಗೆ ಗುತ್ತಿನ ಹಬ್ಬದ ಗತ್ತು, ಚಿಂತನ ಮಂಥನ ಗೋಷ್ಠಿ

ಬಜ್ಪೆ: ಇಂದಿನಿಂದ `ಪರ್ಬೊದ ಸಿರಿ'  

Published:
Updated:
Prajavani

ಬಜ್ಪೆ : ತುಳುನಾಡಿನ ಸೊಗಡು ಬಣ್ಣಿಸುವ ವಿಶಿಷ್ಟ `ಗುತ್ತುದ ವರ್ಸೊದ ಪರ್ಬ'. 10 ವರ್ಷಗಳಿಂದ ನಡೆಯುತ್ತಿದ್ದು , ಈ ಬಾರಿ ಇದೇ 19 ಹಾಗೂ 20ರಂದು ನಡೆಯುಲಿದೆ. 19ರಂದು ಗೋಳಿದಡಿಗುತ್ತಿನ ಮನೆಯಲ್ಲಿ ಗುತ್ತುಗಳ ವಿಷಯದಲ್ಲೇ ಚಿಂತನ-ಮಂಥನ `ಗುತ್ತು ನಿಮಗೆಷ್ಟು ಗೊತ್ತು..?' ಎಂಬ  ವಿಚಾರಗೋಷ್ಠಿ ನಡೆಯಲಿದೆ.

 ಗುತ್ತು, ಬೀಡು, ಬಾರಿಕೆ(ಬರ್ಕೆ) ಬಾವ, ಪರಡಿ ಮನೆತನಗಳ ಆಡಳಿತಾತ್ಮಕ ವ್ಯವಸ್ಥೆಯತ್ತ ಬೆಳಕು ಚೆಲ್ಲಲಿದೆ. ಮೊದಲ ದಿನ ವಿಚಾರಗೋಷ್ಠಿ, ನಿರ್ಣಯ ಸ್ವೀಕಾರವಾದರೆ, 20ರಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ದೇಗುಲ:  ಈ ಬಾರಿ `ಪರ್ಬೊದ ಸಿರಿ' ವೇದಿಕೆಗೆ ಶ್ರೀ ಮಹಾಕಾಲೇಶ್ವರ ವೇದಿಕೆ ಹೆಸರನ್ನಿಡಲಾಗಿದೆ. ಇದೇ ಹೆಸರಿನ ದೇವಾಲಯ ಇಲ್ಲಿ ತಲೆ ಎತ್ತಲಿದೆ. ಇದಕ್ಕೆ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರ ಪೂಜ್ಯ ಬ್ರಹ್ಮಶ್ರೀ ಕೆ ಎಸ್ ನಿತ್ಯಾನಂದ ಅವರ ಮಾರ್ಗದರ್ಶನವಿದೆ. ಗೋಳಿದಡಿಗುತ್ತಿಗೆ ಅನತಿ ದೂರದಲ್ಲಿ ಪಾವನ ಫಲ್ಗುಣಿ ನದಿ ಹಾಗೂ ಗುತ್ತಿನ ಮನೆಯ ಮಧ್ಯೆ, ಪ್ರಕೃತಿದತ್ತವಾದ ನದಿ ತಟದಲ್ಲಿ ಶ್ರೀ ಮಹಾಕಾಲೇಶ್ವರ ದೇವಾಲಯ ನಿರ್ಮಾಣಗೊಳ್ಳಲಿದ್ದು ಜಾಗ ಸಮತಟ್ಟು ಕಾರ್ಯ ಮುಗಿದಿದೆ.

ತೀರ್ಥಕೆರೆ : ನದಿ ತಟದಲ್ಲಿ ಶ್ರೀ ಉಜ್ಜೈನಿ ತೀರ್ಥಕೆರೆ ಇದ್ದು, ಇದು ಈ ದೇವಾಲಯ ನಿರ್ಮಾಣಕ್ಕೆ ಆರಂಭದ ನೋಟ. ಪರ್ಬೊದ ಸಿರಿಯಲ್ಲಿ, ಈ ಬಾರಿ ಶ್ರೀ ವೈದ್ಯನಾಥ ವೇದಿಕೆ ನಿರ್ಮಾಣವಾಗಿದ್ದು, ಇದರಲ್ಲಿ `ಗುತ್ತು ನಿಮಗೆಷ್ಟು ಗೊತ್ತು..?' ವಿಚಾರ ಸಂಕಿರಣ ಜರುಗಲಿದೆ.. ಅಲ್ಲೇ ಪಕ್ಕದಲ್ಲಿ ಶ್ರೀ ರುದ್ರ ಹೋಮಕ್ಕೆ ಕುಂಡ ಸಿದ್ಧಗೊಂಡಿದೆ.

ಸ್ವಚ್ಛತೆಗೆ ಮಹತ್ವ : ಗುತ್ತಿನ ಪರ್ಬಕ್ಕೆ ಸ್ವಚ್ಚತಾ ಆಂದೋಲನದ ಮೆರುಗು ನೀಡಲಾಗಿದೆ. ಎಲ್ಲೆಡೆ ಸ್ವಚ್ಚತೆಗೆ ಪ್ರಾಧಾನ್ಯ ನೀಡಬೇಕೆನ್ನುವ ನಾಮಫಲಕಗಳನ್ನು ಅಳವಡಿಸಲಾಗಿದೆ. ಶೌಚಾಲಯಗಳು, ಅಲ್ಲಲ್ಲಿ ತ್ಯಾಜ್ಯ ಎಸೆಯದಂತೆ ಕಸದ ಬುಟ್ಟಿಗಳ ವ್ಯವಸ್ಥೆ ಮಾಡಲಾಗಿದೆ. ಪರ್ಬಕ್ಕೆ ಆಗಮಿಸುವ ಎಲ್ಲರಿಗೂ ಕಲ್ಲಂಗಡಿ ಹಾಗೂ ಮಹಿಳೆಯರಿಗೆ ಬಳೆ ಲಭಿಸಲಿದ್ದು, ಈಗಾಗಲೇ ಲೋಡುಗಟ್ಟಲೆ ಕಲ್ಲಂಗಡಿ ಬಂದು ಸೇರಿದೆ. ಬಳೆಗಳ ಮೂಟೆಯೂ ಕಂಡು ಬಂದಿದೆ. ಇದು ಪರ್ಬದ ಹೆಚ್ಚುಗಾರಿಕೆ ಸಾಲಿನಲ್ಲಿ ನಿಲ್ಲುವ ಎರಡು ವಿಶೇಷತೆ.
ಪರ್ಬದ ಎರಡೂ ದಿನ ಪುರುಷರು ಮತ್ತು ಮಹಿಳೆಯರಿಗೆ ಆಯಾವಿಭಾಗಕ್ಕೆ‌ ತಕ್ಕಂತೆ ಶಕ್ತಿಕಲ್ಲು ಎತ್ತುವ ಸ್ಪರ್ಧೆ ಜರುಗಲಿದ್ದು, ಬಹುಮಾನವೂ ಇದೆ. ಈ ಬಾರಿ ಗುತ್ತಿನ ಮನೆಯ ಪಕ್ಕದಲ್ಲೇ ಸಂತೆಯ ಮಳಿಗೆ ಸಿದ್ಧಪಡಿಸಲಾಗಿದೆ. ಮನೆಯ ಎದುರು ಕಂಬಳದ ಕೋಣ, ಅತ್ತ ಮಕ್ಕಳಿಗೆ ಪ್ರಿಯವಾದ ತೊಟ್ಟಿಲು , ಪಕ್ಕದಲ್ಲಿ ಪ್ರಾಚೀನ ಸಲಕರಣೆಗಖು ಆಕರ್ಷಿಸಲಿವೆ.

‘ಇದು ನನ್ನದೊಂದು ಪ್ರಯತ್ನವಷ್ಟೇ. ಮುಂದಿನದ್ದು ದೈವಕ್ಕೆ ಬಿಟ್ಟ ವಿಷಯ.  ಗುತ್ತು ಎಂದರೆ ಪ್ರಾಚೀನ ಸಾಮಾಜಿಕ ನ್ಯಾಯಾಡಳಿತ ವ್ಯವಸ್ಥೆಯ ಕೇಂದ್ರ. ಅದನ್ನಿಲ್ಲಿಂದಲೇ ಪುನರಪಿ ಎತ್ತರಕ್ಕೆ ಕೊಂಡೊಯ್ಯುವುದು ಈ ಗೋಷ್ಠಿ ಉದ್ದೇಶ. ಟೀಕೆಗಳು ಬರಲಿ, ಅದಕ್ಕೆ ನನ್ನಲ್ಲಿ ಉತ್ತರವಿದೆ. ಟೀಕೆಯಿಂದ ಬೆಳೆಯಲು ಸಾಧ್ಯ. ಆದರೆ ಅದು ಸಕಾರಾತ್ಮಕವಾಗಿರಬೇಕು’ ಎನ್ನುವುದು ಎರಡು ದಿನಗಳ `ಪರ್ಬೊದ ಸಿರಿ'ಯ ರೂವಾರಿ ಗೋಳಿದಡಿಗುತ್ತಿನ ಯಜಮಾನ, ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ಹೇಳಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !