ಬುಧವಾರ, ಜೂನ್ 16, 2021
23 °C
ಕೋವಿಡ್: ಮುಂಜಾಗ್ರತೆಯೊಂದಿಗೆ ದೈಹಿಕ ಕಸರತ್ತು

ಮಂಗಳೂರು: ನಾಳೆಯಿಂದ ಜಿಮ್‌, ಯೋಗ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮೂರನೇ ಹಂತದ ಅನ್‌ಲಾಕ್‌ನಲ್ಲಿ ಜಿಮ್ ಹಾಗೂ ಯೋಗ ತರಗತಿಗೆ ಬುಧವಾರ (ಇದೇ 5)ದಿಂದ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಆದರೆ, ರಾಮ ಮಂದಿರ ಭೂಮಿಪೂಜೆಯ ಹಿನ್ನೆಲೆಯಲ್ಲಿ 144 ನೇ ಕಲಂ ಜಾರಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ಗುರುವಾರ (ಇದೇ 6)ದಿಂದ ಜಿಮ್‌ ಆರಂಭಿಸಲಾಗುತ್ತಿದೆ.

ಕೇಂದ್ರ ಗೃಹ ಸಚಿವಾಲಯದ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ಕೋವಿಡ್– 19 ಸೋಂಕು ಅತೀ ಹೆಚ್ಚಿರುವ ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಜಿಮ್‌ ಹಾಗೂ ಯೋಗ ತರಗತಿ ತೆರೆಯಲು ಅವಕಾಶ ಇಲ್ಲ. 65 ವರ್ಷಕ್ಕಿಂತ ಮೇಲಿನ ಹಿರಿಯರು, ಗರ್ಭಿಣಿಯರು ಹಾಗೂ 10 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಜಿಮ್‌ ಅಥವಾ ಯೋಗ ತರಗತಿಯಲ್ಲಿ ಪಾಲ್ಗೊಳ್ಳಬಾರದು.

ಫಿಟ್‌ನೆಸ್ ಕೇಂದ್ರಕ್ಕೆ ಬರುವವರು ಮತ್ತು ಹೋಗುವವರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಬ್ಯಾಚ್‌ಗಳನ್ನು ರಚಿಸಬೇಕು. ಪ್ರತಿಯೊಂದು ಬ್ಯಾಚ್‌ಗೆ 15ರಿಂದ 30 ನಿಮಿಷಗಳ ಅಂತರ ನೀಡುವ ಮೂಲಕ ಆ ಸಮಯದಲ್ಲಿ ಸ್ವಚ್ಛಗೊಳಿಸುವುದು ಹಾಗೂ ಸ್ಯಾನಿಟೈಸ್ ಮಾಡಲು ಬಳಸಿಕೊಳ್ಳಬೇಕು.

‘ಕೇಂದ್ರ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯ ಪ್ರಕಾರ ಜಿಮ್‌ಗಳನ್ನು ತೆರೆಯಲು ಸಜ್ಜಾಗಿದ್ದೇವೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಜನರು ಜಿಮ್‌ಗೆ ಬರಲಿದ್ದಾರೆಯೇ ಎನ್ನುವ ಆತಂಕ ಇದೆ. ಇದುವರೆಗೆ ಜಿಮ್‌ಗಳು ಬಂದ್‌ ಆಗಿದ್ದು, ಬುಧವಾರದಿಂದ ಆರಂಭವಾಗಲಿವೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಜಿಮ್‌ಗಳನ್ನು ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ನಗರದಲ್ಲಿ ಜಿಮ್ನಾಶಿಯಂ ನಡೆಸುತ್ತಿರುವ ಧನುಷ್‌ ಕುದ್ರೋಳಿ ತಿಳಿಸಿದ್ದಾರೆ.

‘ಮೊದಲಿನಿಂದಲೂ ಬ್ಯಾಚ್‌ ಪ್ರಕಾರವೇ ಜನರು ಬರುತ್ತಿದ್ದಾರೆ. ಇದೀಗ ಅದೇನು ಅಷ್ಟು ಪರಿಣಾಮ ಬೀರುವುದಿಲ್ಲ. ಸ್ಯಾನಿಟೈಸ್ ಮಾಡಬೇಕಾಗಿದೆ. ಅದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. ತಾಪಮಾನ ಪರೀಕ್ಷೆ, ಸ್ಯಾನಿಟೈಸರ್‌ ವ್ಯವಸ್ಥೆ ಸೇರಿದಂತೆ ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಗುರುವಾರದ ನಂತರವೇ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದು ಜಿಮ್‌ನ ಮಾಲೀಕ ಸುಹಾಸ್‌ ರೈ ಹೇಳಿದ್ದಾರೆ.

‘ಬಹುತೇಕ ಜನರು ಮೂರು ತಿಂಗಳಿಂದ ಜಿಮ್‌ಗಳಿಗೆ ಹೋಗಿಲ್ಲ. ಹಾಗಾಗಿ ದೈಹಿಕ ಕಸರತ್ತು ನಡೆಸಲು ಕೆಲವು ಮನೆಗಳಲ್ಲಿಯೇ ಉಪಕರಣಗಳನ್ನು ತರಿಸಿಕೊಂಡಿದ್ದಾರೆ. ಮನೆಗಳಲ್ಲಿಯೇ ಕಸರತ್ತು ಮಾಡುತ್ತಿದ್ದಾರೆ. ಇದೀಗ ಕೆಲವರಿಗೆ ಮನೆಯೇ ಜಿಮ್‌ ಆಗಿದೆ’ ಎನ್ನುವುದು ನಗರದ ನಿವಾಸಿ ರಾಹುಲ್ ಪೂಜಾರಿ ಹೇಳುವ ಮಾತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು