ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಪೀಡಿತರಿಗಾಗಿ ‘ಕೇಶದಾನ’

ಮಾನವೀಯ ಕಾರ್ಯಕ್ರಮಕ್ಕೆ ವೇದಿಕೆಯಾದ ಸಿಡಿಪಿಒ ಸಂಸ್ಥೆ
Last Updated 4 ಫೆಬ್ರುವರಿ 2021, 11:49 IST
ಅಕ್ಷರ ಗಾತ್ರ

ಮಂಗಳೂರು: ‘ವಿಶ್ವ ಕ್ಯಾನ್ಸರ್‌ ದಿನ’ವನ್ನು ವಿಭಿನ್ನವಾಗಿ ಆಚರಿಸಿದ ನಗರದ ಸಿಡಿಪಿಒ ಸಂಸ್ಥೆಯು, ‘ಕೇಶದಾನ’ದ ಮೂಲಕ ಕ್ಯಾನ್ಸರ್‌ ಪೀಡಿತರ ಮೊಗದಲ್ಲಿ ಮಂದಹಾಸ ಮೂಡಿಸುವ ಪಣ ತೊಟ್ಟಿತು.

ಕಾರಿತಾಸ್ ಇಂಡಿಯಾ, ಸ್ಪರ್ಶ ಯೋಜನೆ, ಜೆಸಿಐ ಮಂಗಳೂರು, ದಿಶಾ ಹಾಗೂ ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಸಿಒಡಿಪಿ ಸಂಸ್ಥೆಯು ತನ್ನ ಆವರಣದಲ್ಲಿ ಗುರುವಾರ ಹಮ್ಮಿಕೊಂಡ ‘ವಿಶ್ವ ಕ್ಯಾನ್ಸರ್ ದಿನ’ದಲ್ಲಿ 40 ದಾನಿಗಳು ತಮ್ಮ ಕೇಶವನ್ನು ನೀಡಿದರು.

39 ಮಹಿಳೆಯರು ಮತ್ತು ಒಬ್ಬ ಪುರುಷರು ತಮ್ಮ ಕೇಶವನ್ನು ಬಡ ಕ್ಯಾನ್ಸರ್ ರೋಗಿಗಳಿಗೆ ವಿಗ್‌ ತಯಾರಿಸುವ ಕೇರಳದ ತ್ರಿಶ್ಶೂರ್‌ನ ಹೇರ್ ಬ್ಯಾಂಕ್ ಸಂಸ್ಥೆಗೆ ದಾನ ನೀಡಿದರು. ನಗರದ ಮರ್ಸಿ ಬ್ಯೂಟಿ ಸೆಲೂನ್, ಸುಮಾ ಬ್ಯೂಟಿ ಪಾರ್ಲರ್, ಮೊನಲಿಸಾ ಬ್ಯೂಟಿ ಪಾರ್ಲರ್, ಪ್ರತಿಭಾ ಬ್ಯೂಟಿ ಸೆಲೂನ್ ಮತ್ತು ಪ್ರಿಟ್ಸ್ ಬ್ಯೂಟಿ ಸೆಲೂನ್‌ನ ಸಿಬ್ಬಂದಿ ದಾನಿಗಳ ಕೇಶವನ್ನು ಕತ್ತರಿಸಿ, ಪ್ರಕ್ರಿಯೆ ನಡೆಸಿಕೊಟ್ಟರು.

‘ಕ್ಯಾನ್ಸರ್‌ ನೋವಿನ ಜೊತೆ ಕೂದಲು ಕಳೆದುಕೊಂಡು ಸಮಾಜದಲ್ಲಿ ಮುಖ ತೋರಿಸಲು ಅಂಜಿಕೆ ಪಡುವ ವಿಚಿತ್ರ ಮುಜುಗರವನ್ನು ಪೀಡಿತರು ಪಡುವುದನ್ನು ನೋಡಿದ್ದೇವೆ. ಅವರೂ ನಮ್ಮ–ನಿಮ್ಮಂತೆಯೇ ಖುಷಿ ಖಷಿಯಾಗಿರಬೇಕು ಎಂಬುದು ನಮ್ಮ ಆಶಯ’ ಎಂದು ಕೇಶದಾನಿಗಳು ಪ್ರತಿಕ್ರಿಯಿಸಿದರು.

ಕೇಶ ದಾನಿಗಳಿಗೆ ಗೌರವ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸಹಕರಿಸಿದ ಕೇಶ ವಿನ್ಯಾಸಕಾರರನ್ನೂ ಅಭಿನಂದಿಸಲಾಯಿತು.

ಸಿಒಡಿಪಿ ಸಂಸ್ಥೆಯ ನಿರ್ದೇಶಕ ಸ್ವಾಮಿ ಓಸ್ವಲ್ಡ್ ಮೊಂತೆರೊ ಮಾತನಾಡಿ, ಕ್ಯಾನ್ಸರ್‌ ಬಾರದಂತೆ ವಹಿಸಬೇಕಾದ ಎಚ್ಚರಿಕೆ ಹಾಗೂ ಕ್ಯಾನ್ಸರ್‌ ಬಂದ ಬಳಿಕ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಅಲ್ಲದೇ, ಕ್ಯಾನ್ಸರ್‌ ಪೀಡಿತರ ಜೊತೆ ಹೇಗೆ ನಡೆದುಕೊಳ್ಳಬೇಕು, ಸ್ಪಂದಿಸಬೇಕು ಎಂಬದುನ್ನು ಮನವರಿಕೆ ಮಾಡಿದರು.

ಕೆಎಂಸಿ ಆಸ್ಪತ್ರೆಯ ಕ್ಯಾನ್ಸರ್‌ ತಜ್ಞ ಡಾ. ಹರೀಶ್ ರೋಗದ ಗುಣಲಕ್ಷಣಗಳು, ಗುರುತಿಸುವಿಕೆ ಹಾಗೂ ಅದನ್ನು ಹೇಗೆ ತಡೆಗಟ್ಟಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು.

ಸಿಒಡಿಪಿ ಸಂಸ್ಥೆಯ ಸ್ವಾಮಿ ವಿನ್ಸೆಂಟ್ ಡಿ ಸೋಜ, ಸಿಬ್ಬಂದಿ ಲೆನೆಟ್, ಮಮತಾ ಮತ್ತು ಶಿಲ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT