ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೇಹಳ್ಳಿ: ಕಸದ ರಾಶಿಗೆ ಬೆಂಕಿ

Last Updated 8 ಫೆಬ್ರುವರಿ 2018, 19:42 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರಣ್ಯಪುರ ವಾರ್ಡ್‌ನ ಕೊಡಿಗೇಹಳ್ಳಿ ರಾಜೀವ್‌ಗಾಂಧಿ ಬಡಾವಣೆಯ ಎಫ್‌.ಎಂ ಸೂಪರ್‌ ಮಾರ್ಕೆಟ್‌ ಎದುರಿನ ಉದ್ಯಾನದಲ್ಲಿ ಕಸದ ರಾಶಿಗೆ ಬೆಂಕಿ ಬಿದ್ದು, ಮೂರು ದಿನಗಳಿಂದ ಹೊತ್ತಿ ಉರಿಯುತ್ತಿದೆ.

‘ಮಂಗಳವಾರ ರಾತ್ರಿಯಿಂದ ಬೆಂಕಿ ಉರಿಯುತ್ತಿದೆ. ಬುಧವಾರ ಸಂಜೆ ಮಳೆ ಸುರಿದಾಗಲೂ ಬೆಂಕಿ ನಂದಿಲ್ಲ. ಈಗಲೂ ಹೊಗೆ ಭುಗಿಲೇಳುತ್ತಿದೆ. ಕಸದ ರಾಶಿಯಿಂದ ಹೊರಡುತ್ತಿರುವ ವಾಸನೆ ಮತ್ತು ಹೊಗೆ ಸುತ್ತಲೂ ಹರಡಿದೆ. ಕೆನರಾ ಬ್ಯಾಂಕ್‌ ಬಡಾವಣೆ, ರಾಜೀವ್‌ಗಾಂಧಿ ನಗರ, ಕೊಡಿಗೇಹಳ್ಳಿ ಸುತ್ತಮುತ್ತಲಿನ ವಸತಿ ಪ್ರದೇಶದ ನಿವಾಸಿಗಳಿಗೆ ಉಸಿರಾಟ ಮತ್ತು ಆರೋಗ್ಯ ಸಮಸ್ಯೆ ಎದುರಾಗಿದೆ’ ಎಂದು ಯುನೈಟೆಡ್‌ ಬೆಂಗಳೂರು ಸಂಚಾಲಕ ಎನ್‌.ಆರ್‌.ಸುರೇಶ್‌ ತಿಳಿಸಿದರು.

‘ಕಸಕ್ಕೆ ಬೆಂಕಿ ಹಚ್ಚುವುದಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿದ್ದರೂ ನಗರದಲ್ಲಿ ಈ ಆದೇಶ ಪಾಲನೆಯಾಗುತ್ತಿಲ್ಲ. ಕಸ ಸುಟ್ಟರೆ ₹5 ಲಕ್ಷ ದಂಡ ವಿಧಿಸುವ, 5 ವರ್ಷ ಜೈಲು ಶಿಕ್ಷೆಗೆ ಒಳಪಡಿಸುವ ಕಾನೂನು ಇದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಅದನ್ನು ಜಾರಿಗೊಳಿಸಲು ಮುಂದಾಗಿಲ್ಲ. ನಗರದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಅಲ್ಲಲ್ಲಿ ಕಸಕ್ಕೆ ಬೆಂಕಿ ಹಚ್ಚಿ ಸುಡುವುದು ಮುಂದುವರಿದಿದೆ. ರಾಜೀವ್‌ಗಾಂಧಿ ಬಡಾವಣೆಯಲ್ಲಿ ಕಸ ಹೊತ್ತಿ ಉರಿಯುತ್ತಿರುವುದನ್ನು ದಾಖಲೆ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಪಾಲಿಕೆ ಗಮನಕ್ಕೆ ತಂದರೂ ಅಧಿಕಾರಿಗಳು ಗಮನ ಹರಿಸಿಲ್ಲ’ ಎಂದು ಅವರು ದೂರಿದರು.

‘ಇಲ್ಲಿ ಕಸಕ್ಕೆ ಬೆಂಕಿ ಹಚ್ಚುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಬೆಂಕಿ ಹಚ್ಚಿ ಕಸ ಸುಟ್ಟಿದ್ದಾರೆ. ಇಲ್ಲಿ ವಾಸಿಸುವುದೇ ದುಸ್ತರವಾಗಿದೆ. ರಾತ್ರಿ ಬೆಂಕಿ ಹೊತ್ತಿ ಉರಿದರೆ, ಬೆಳಿಗ್ಗೆ ಕಾರ್ಮಿಕರ ಮೂಲಕ ಗುತ್ತಿಗೆದಾರರಿಂದ ಬೆಂಕಿ ನಂದಿಸುವ ನಾಟಕ ನಡೆಯುತ್ತದೆ. ಕಣ್ಣೆದುರೇ ಇಂತಹ ಹೀನ ಕೃತ್ಯ ನಡೆದರೂ ಪ್ರಶ್ನಿಸಲಾಗದ ಅಸಹಾಯಕತೆ ಮತ್ತು ಆತಂಕದ ಪರಿಸ್ಥಿತಿಯಲ್ಲಿದ್ದೇವೆ’ ಎನ್ನುತ್ತಾರೆ ಈ ಉದ್ಯಾನಕ್ಕೆ 50 ಮೀಟರ್‌ ಸನಿಹದಲ್ಲಿರುವ ಹರೇಕೃಷ್ಣ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಯೊಬ್ಬರು.

* ಜೈವಿಕ ಗೊಬ್ಬರ ತಯಾರಿಸಲು ಉದ್ಯಾನದಲ್ಲಿ ಕಸ ಸಂಗ್ರಹಿಸಲಾಗಿತ್ತು. ಇದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ

–ಮಂಜುನಾಥ್‌, ವಿದ್ಯಾರಣ್ಯಪುರ ವಾರ್ಡ್‌ ಸದಸ್ಯೆ ಕುಸುಮಾ ಅವರ ಪತಿ

* ಇದೇ ರೀತಿ ಕಸ ಸುಡುತ್ತಿದ್ದರೆ ವಾಯುಮಾಲಿನ್ಯದಲ್ಲಿ ದೆಹಲಿಗಿಂತಲೂ ಸಿಲಿಕಾನ್‌ ಸಿಟಿಯ ಪರಿಸ್ಥಿತಿ ಭೀಕರವಾಗಲಿದೆ

– ಎನ್‌.ಆರ್‌.ಸುರೇಶ್‌, ಯುನೈಟೆಡ್‌ ಬೆಂಗಳೂರು ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT