ಗುರುವಾರ , ನವೆಂಬರ್ 21, 2019
22 °C
ಉಚ್ಚಿಲ ಬೋವಿ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ

20ರಂದು ರಾಜ್ಯಮಟ್ಟದ ‘ಹಾಫ್ ಮ್ಯಾರಥಾನ್’

Published:
Updated:

ಉಳ್ಳಾಲ: ‘ಸೋಮೇಶ್ವರ ಉಚ್ಚಿಲದ ಬೋವಿ ಶಿಕ್ಷಣ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಪುರುಷರು ಹಾಗೂ ಮಹಿಳೆಯರಿಗಾಗಿ ರಾಜ್ಯಮಟ್ಟದ ಮುಕ್ತ ‘ಹಾಫ್ ಮ್ಯಾರಥಾನ್’ ಸ್ಪರ್ಧೆ ಸಾಮರಸ್ಯದೆಡೆಗೆ ಓಟ, ಪ್ರೌಢಶಾಲಾ ಬಾಲಕ-ಬಾಲಕಿಯರಿಗಾಗಿ ಜಿಲ್ಲಾಮಟ್ಟದ ಗುಡ್ಡಗಾಡು ಓಟ ಇದೇ  20ರಂದು ಬೆಳಿಗ್ಗೆ 7 ಗಂಟೆಗೆ ನಡೆಯಲಿದೆ’ ಎಂದು ಕ್ರೀಡಾಕೂಟದ ಗೌರವ ಸಲಹೆಗಾರ ತ್ಯಾಗಂ ಹರೇಕಳ ಹೇಳಿದರು.

 ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘1918ರಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ  ನವೆಂಬರ್ ತಿಂಗಳ 15ರಿಂದ17ವರೆಗೆ ಶತಮಾನೋತ್ಸವ ಆಚರಿಸಲಿದೆ. ಹಾಫ್ ಮ್ಯಾರಥಾನ್ ಸ್ಪರ್ಧೆ 20ರಂದು ಬೆಳಿಗ್ಗೆ 5ಗಂಟೆಯಿಂದ ಸ್ಪರ್ಧಾಳುಗಳ ನೋಂದಣಿ , 7ರಿಂದ ಬೋವಿ ಶಾಲಾ ಕ್ರೀಡಾಂಗಣದಿಂದ ಮ್ಯಾರಥಾನ್ ಓಟ ಆರಂಭವಾಗಲಿದೆ.  19ರಂದು ರಾತ್ರಿ ತಂಗುವ ದೂರದ ಊರಿನ ಸ್ಪರ್ಧಾಳುಗಳಿಗೆ ಉಚ್ಚಿಲ ಬೋವಿ ವಿದ್ಯಾಸಂಸ್ಥೆಯಲ್ಲಿ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಪುರುಷರ ಮ್ಯಾರಥಾನ್ 14ಕಿ.ಮೀ, ಮಹಿಳೆಯರಿಗೆ 8ಕಿ. ಮೀ. ಗೆ ನಿಗದಿಗೊಳಿಸಲಾಗಿದೆ. ಪ್ರೌಢಶಾಲಾ ಬಾಲಕ ಬಾಲಕಿಯರಿಗೆ ಜಿಲ್ಲಾಮಟ್ಟದ 5ಕಿ. ಮೀ. ಅಂತರದ ಗುಡ್ಡಗಾಡು ಓಟ, ಸಾರ್ವಜನಿಕರಿಗೆ ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಗೆ ಪುರುಷರಿಗೆ ಕಬಡ್ಡಿ, ವಾಲಿಬಾಲ್ ಹಾಗೂ ಹಗ್ಗಜಗ್ಗಾಟ, ಮಹಿಳೆಯರಿಗೆ ವಾಲಿಬಾಲ್, ತ್ರೋಬಾಲ್, ಹ್ಯಾಂಡ್ ಬಾಲ್ ಹಾಗೂ ಹಗ್ಗಜಗ್ಗಾಟ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಬಲೆಬೀಸುವ ಸ್ಪರ್ಧೆ ಹಾಗೂ ಸಮುದ್ರದಲ್ಲಿ ಈಜುವ ಸ್ಪರ್ಧೆ ನಡೆಯಲಿದೆ ಎಂದರು.

‘ಹಾಫ್ ಮ್ಯಾರಥಾನ್ ಪುರುಷರ ವಿಭಾಗದಲ್ಲಿ ಪ್ರಥಮ ₹10ಸಾವಿರ ನಗದು, ದ್ವಿತೀಯ ₹7ಸಾವಿರ, ತೃತೀಯ ₹4ಸಾವಿರ ಹಾಗೂ ತಲಾ ₹1 ಸಾವಿರ ‌‌‌ದಂತೆ 10ನೇ ಸ್ಥಾನದವರೆಗೆ ನೀಡಲಾಗುವುದು.  ಮಹಿಳೆಯರ ವಿಭಾಗದಲ್ಲಿ ಪ್ರಥಮ ₹7ಸಾವಿರ, ದ್ವಿತೀಯ ₹5ಸಾವಿರ ಹಾಗೂ ತೃತೀಯ ₹3ಸಾವಿರ ಹಾಗೂ ಹತ್ತನೆಯ ಸ್ಥಾನದವರೆಗೆ ವಿಜೇತರಿಗೆ ₹1 ಸಾವಿರ ಗೌರವ ಧನ ಹಾಗೂ ಸ್ಮರಣಿಕೆ ನೀಡಿ ಪುರಸ್ಕರಿಸಲಾಗುವುದು. ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು’ ಎಂದರು.

ಸುದ್ದಿಗೋಷ್ಠಿಯಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎಂ. ಜಿ. ಮೋಹನ್, ಗೌರವಾಧ್ಯಕ್ಷೆ ರೇವತಿ ದಾಮೋದರ್, ಶಾಲಾ ಸಂಚಾಲಕ ದೇವದಾಸ್ ಟಿ. ಉಚ್ಚಿಲ್, ಕ್ರೀಡಾ ಸಂಚಾಲಕ ಚಂದ್ರಶೇಖರ್ ಉಚ್ಚಿಲ್, ಉಚ್ಚಿಲ ಬೋವಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕ ಮೋಹನ್ ದಾಸ್ ಹಾಗೂ ಕಾರ್ಯಾಧ್ಯಕ್ಷ ರೋಹಿತಾಶ್ವ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)