ಹರೇಕಳ-ಅಡ್ಯಾರ್ ಅಣೆಟ್ಟೆ ನಿರ್ಮಾಣ ಯೋಜನೆ‌: ಸಚಿವರಿಂದ ಪರಿಶೀಲನೆ

7

ಹರೇಕಳ-ಅಡ್ಯಾರ್ ಅಣೆಟ್ಟೆ ನಿರ್ಮಾಣ ಯೋಜನೆ‌: ಸಚಿವರಿಂದ ಪರಿಶೀಲನೆ

Published:
Updated:
Deccan Herald

ಮುಡಿಪು: ‘ಪಶ್ಚಿಮವಾಹಿನಿ ಯೋಜನೆಯ ಕರಾವಳಿಯ 3ಜಿಲ್ಲೆಗಳ ರೈತರಿಗೆ ವ್ಯವಸಾಯಕ್ಕೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಮಂಗಳೂರು ತಾಲ್ಲೂಕಿನ ಹರೇಕಳ ಬಳಿ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟೆ ನಿರ್ಮಾಣ ಕಾಮಗಾರಿಯು ₹174 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು, ಮೂರು ತಿಂಗಳೊಳಗೆ ಕಾಮಗಾರಿ ಆರಂಭಗೊಂಡು, ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು  ಸಣ್ಣ ನೀರಾವರಿ ಇಲಾಖೆ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಹರೇಕಳ-ಅಡ್ಯಾರ್ ಬಳಿ ನಿರ್ಮಾಣಗೊಳ್ಳಲಿರುವ ಉಪ್ಪು ನೀರು ತಡೆ ಅಣೆಕಟ್ಟು ಹಾಗೂ ಸೇತುವೆ ಕಾಮಗಾರಿಯನ್ನು ಶುಕ್ರವಾರ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ಸೇತುವೆ ನಿರ್ಮಾಣದ ಕನಸು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಅನುದಾನ ಮಂಜೂರುಗೊಂಡಿದ್ದು ಈ ಬಾರಿಯ ಬಜೆಟ್‌ನಲ್ಲಿಯೂ ಕೂಡಾ ಅನುಮೋದನೆ ದೊರೆತಿದೆ. ಪಶ್ಚಿಮವಾಹಿನಿ ಯೋಜನೆಯ ಮೂಲಕ ನದಿಯ ಉಪ್ಪು ನೀರನ್ನು ತಡೆಗಟ್ಟಿ ಅಣೆಕಟ್ಟೆ ಮೂಲಕ ಸಂಗ್ರಹಿಸಿ ಕುಡಿಯುವ ನೀರು ಹಾಗೂ ಕೃಷಿ ಉಪಯೋಗಕ್ಕೆ ಬಳಸಲಾಗುವ ಯೋಜನೆ ಇದಾಗಿದೆ. .  ಮುಳುಗಡೆಯಾಗುವ ಪ್ರದೇಶವಿದ್ದರೆ ಜಮೀನು ಕಳೆದುಕೊಂಡವರಿಗೆ  ಸರ್ಕಾರ ಪರಿಹಾರವನ್ನು ಶೀಘ್ರವೇ ಒದಗಿಸಲಿದೆ’ ಎಂದರು.

‘ಪಶ್ಚಿಮವಾಹಿನಿ ಯೋಜನೆಯು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಸರಣಿ ಕಿಂಡಿಅಣೆಕಟ್ಟುಗಳನ್ನು ನಿರ್ಮಿಸುವ ಯೋಜನೆಯಾಗಿದ್ದು, ಸಮಗ್ರ ವರದಿಯಡಿ ಒಟ್ಟು ₹1394 ಕೋಟಿ ಅಂದಾಜು ಮೊತ್ತದಲ್ಲಿ 759 ಕಿಂಡಿ ಅಣೆಕಟ್ಟೆಗಳನ್ನು 3 ಹಂತದಲ್ಲಿ ನಿರ್ಮಿಸಲು ಯೋಜಿಸಲಾಗಿದೆ’ ಎಂದರು.

ಸಚಿವ ಯು.ಟಿ.ಖಾದರ್  ಮಾತನಾಡಿ ‘ಈ ಭಾಗದ ಜನರ ಬಹಳ ಕಾಲದ ನಿರೀಕ್ಷೆಯಾಗಿದ್ದ ಸೇತುವೆ ಮತ್ತು ಅಣೆಕಟ್ಟೆ ಯೋಜನೆ ಕಾಮಗಾರಿಯು ಶೀಘ್ರವೇ ಆರಂಭವಾಗಲಿದೆ. ಇದರಿಂದ ಅಂತರ್ಜಲದ ಸಂರಕ್ಷಣೆಯೊಂದಿಗೆ, ಕುಡಿಯುವ ನೀರು, ಕೃಷಿ ವ್ಯವಸ್ಥೆಗೆ ಬಹಳಷ್ಟು ಅನುಕೂಲವಾಗಲಿದೆ’ ಎಂದರು.

ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ, ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಈಶ್ವರ್ ಉಳ್ಳಾಲ್, ಎನ್.ಎಸ್.ಕರೀಂ, ಜೆಡಿಎಸ್ ಮುಖಂಡರಾದ ಮೋಹನ್ದಾಸ್ ಶೆಟ್ಟಿ, ಹೈದರ್ ಪತರ್ಿಪಾಡಿ, ದಿನಕರ ಉಳ್ಳಾಲ್, ಅಬ್ದುಲ್ ಅಜೀಜ್,  ಮಹಮ್ಮದ್ ಮುಸ್ತಫಾ ಹರೇಕಳ  ಇದ್ದರು.
 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !