ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಪ್ರಸಾದ್‌ ಹೇಳಿಕೆಯಿಂದ ಅವರಿಗೇ ಹಾನಿ: ದಿನೇಶ್‌ ಗುಂಡೂರಾವ್‌

Published 11 ಸೆಪ್ಟೆಂಬರ್ 2023, 7:45 IST
Last Updated 11 ಸೆಪ್ಟೆಂಬರ್ 2023, 7:45 IST
ಅಕ್ಷರ ಗಾತ್ರ

ಮಂಗಳೂರು: ‘ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರೊಬ್ಬ ಹಿರಿಯ ರಾಜಕಾರಣಿ. ಅವರು ಸಾರ್ವಜನಿಕ ಸಮಾರಂಭದಲ್ಲಿ ಆ ರೀತಿ ಮಾತನಾಡಬಾರದಿತ್ತು. ಅವರ ಹೇಳಿಕೆಯಿಂದ ಬೇರೆ ಯಾರಿಗೂ ಹಾನಿ ಉಂಟಾಗುವುದಿಲ್ಲ. ಇದರಿಂದ ಅವರಿಗೇ ಹಾನಿ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಬಿ.ಕೆ.ಹರಿಪ್ರಸಾದ್‌ ಅವರು ಬೆಂಗಳೂರಿನಲ್ಲಿ ಶನಿವಾರ ನಡೆದ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಉಲ್ಲೇಖಿಸದೆಯೇ ಅವರ ಕುರಿತಾಗಿ, ‘ಹ್ಯೂಬ್ಲೊ ವಾಚು ಕಟ್ಟಿಕೊಂಡು, ಪಂಚೆ ಉಟ್ಟುಕೊಂಡು, ಅದರೊಳಗೆ ಖಾಕಿ ಚಡ್ಡಿ ಧರಿಸುವುದು ಸಮಾಜವಾದವಲ್ಲ’ ಎಂದು ಹೇಳಿದ್ದಕ್ಕೆ ದಿನೇಶ್‌ ಗುಂಡೂರಾವ್‌ ಇಲ್ಲಿ ಪ್ರತಿಕ್ರಿಯಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ದಿನೇಶ್‌ ಗುಂಡೂರಾವ್‌, ‘ಅವರು ಯಾವ ಉದ್ದೇಶದಿಂದ ಆ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ. ಅವರು ಪಕ್ಷಕ್ಕೆ ಮುಜುಗರ ತರುವ ರೀತಿ ನಡೆದುಕೊಳ್ಳಬಾರದಿತ್ತು’ ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ ಪಕ್ಷವು ಎಲ್ಲ ನಾಯಕರಿಗೂ ಅವಕಾಶ ನೀಡಿದೆ. ಯಾರಿಗೂ ಭೇದ ಭಾವ ಮಾಡಿಲ್ಲ’ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದ ವಿವಾದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ವಿಶ್ವವಿದ್ಯಾಲಯದಲ್ಲಿ 40 ವರ್ಷಗಳಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಮುಂದೆಯೂ ಆಚರಿಸುತ್ತಾರೆ. ಈ ವಿಚಾರವಾಗಿ ಏಕೆ ವಿವಾದ ಸೃಷ್ಟಿಸಲಾಗುತ್ತಿದೆಯೋ ಅರ್ಥವಾಗುತ್ತಿಲ್ಲ’ ಎಂದರು.

‘ಮಂಗಳಾ ಸಭಾಂಗಣದಲ್ಲೇ ಗಣೇಶೋತ್ಸವ ಆಚರಿಸಿಯೇ ಸಿದ್ಧ’ ಎಂಬ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಇದು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವಿಚಾರ. ವಿಶ್ವವಿದ್ಯಾಲಯ ಸ್ವಾಯತ್ತ ಸಂಸ್ಥೆ. ಗಣೇಶೋತ್ಸವ ಆಚರಣೆ ಬಗ್ಗೆ ಕುಲಾಧಿಪತಿಯಾಗಿರುವ ರಾಜ್ಯಪಾಲರು ಹಾಗೂ ಕುಲಪತಿಯವರು ತೀರ್ಮಾನ ಕೈಗೊಳ್ಳುತ್ತಾರೆ. ಈ ಕುರಿತು ನಿರ್ಧರಿಸಲು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಇದೆ. ಇದರಲ್ಲಿ ಹೊರಗಿನವರ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ. ಕಲ್ಲಡ್ಕ ಪ್ರಭಾಕರ ಭಟ್‌ ಏನು ಹೇಳುತ್ತಾರೆ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ’ ಎಂದರು.

‘ವಿಶ್ವವಿದ್ಯಾಲಯವು ನ್ಯಾಕ್‌ ಮೌಲ್ಯಮಾಪನದಲ್ಲಿ ‘ಎ’ ದರ್ಜೆಯಿಂದ ‘ಬಿ’ ದರ್ಜೆಗೆ ಇಳಿದಿತ್ತು. ಚರ್ಚೆ ಆಗಬೇಕಿರುವುದು ವಿಶ್ವವಿದ್ಯಾಲಯದ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆಯೇ ಹೊರತು ಗಣೇಶೋತ್ಸವದ ಬಗ್ಗೆ ಅಲ್ಲ. ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಬೇಕಿದೆ’ ಎಂದರು.

‘ಸಿಬ್ಬಂದಿಗೆ ಪಿಂಚಣಿ ನೀಡಲೂ ಸಾಧ್ಯವಾಗದ ಸ್ಥಿತಿಯನ್ನು ವಿಶ್ವವಿದ್ಯಾಲಯ ತಲುಪಿದೆ. ಅದನ್ನು ಸರಿಪಡಿಸುವುದಕ್ಕೆ ಆದ್ಯತೆ ನೀಡಬೇಕಿದೆ. ಹಬ್ಬ ಹರಿದಿನಗಳ ಆಚರಣೆಯ ಕುರಿತು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸಬಾರದು. ಚುನಾವಣೆ ಸಮೀಪಿಸಿತು ಎಂಬ ಕಾರಣಕ್ಕೆ ಶಾಂತಿ–ಸೌಹಾರ್ದ ಕೆಡಿಸುವ ಪ್ರಯತ್ನ ಮಾಡಬಾರದು. ದಕ್ಷಿಣ ಕನ್ನಡ ಜಿಲ್ಲೆಯ ಜನರು ಈ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT