ಶುಕ್ರವಾರ, ನವೆಂಬರ್ 22, 2019
22 °C
ನಾವೂರು ಹರೀಶ್‌ ಪೂಜಾರಿ ಕೊಲೆ ಪ್ರಕರಣ

ಪ್ರತ್ಯಕ್ಷ ಸಾಕ್ಷಿಗೆ ರಕ್ಷಣೆ ನೀಡಲು ಆಗ್ರಹ

Published:
Updated:
Prajavani

ಮಂಗಳೂರು: ಬಂಟ್ವಾಳ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2015ರ ನವೆಂಬರ್‌ನಲ್ಲಿ ನಡೆದಿದ್ದ ನಾವೂರು ಹರೀಶ್‌ ಪೂಜಾರಿ ಕೊಲೆ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿರುವ ಶಮಿವುಲ್ಲಾ ಅವರಿಗೆ ಸಾಕ್ಷ್ಯ ಹೇಳದಂತೆ ಬೆದರಿಕೆ ಬರಲಾರಂಭಿಸಿದ್ದು, ಅವರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್‌ ಮುಖಂಡರ ನಿಯೋಗ ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಅವರಿಗೆ ಮನವಿ ಸಲ್ಲಿಸಿದೆ.

ಸೋಮವಾರ ಎಸ್‌ಪಿಯವರನ್ನು ಭೇಟಿ ಮಾಡಿದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದ ನಿಯೋಗ, ಶಮಿವುಲ್ಲಾ ಅವರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು. ಹರೀಶ್‌ ಪೂಜಾರಿ ಕೊಲೆ ಪ್ರಕರಣದಲ್ಲಿ ಮುಕ್ತವಾಗಿ ನ್ಯಾಯಾಲಯಕ್ಕೆ ಬಂದು ಸಾಕ್ಷ್ಯ ನುಡಿಯಲು ಅಗತ್ಯವಿರುವ ವ್ಯವಸ್ಥೆ ಮಾಡುವಂತೆಯೂ ಒತ್ತಾಯಿಸಿತು.

‘2015ರ ನವೆಂಬರ್‌ ತಿಂಗಳಲ್ಲಿ ಟಿಪ್ಪು ಸುಲ್ತಾನ್‌ ಜಯಂತಿಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದ ಹರೀಶ್‌ ಪೂಜಾರಿ ಅವರನ್ನು ಕೊಲೆ ಮಾಡಲಾಯಿತು. ಹರೀಶ್‌ ಮತ್ತು ಶಮಿವುಲ್ಲಾ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ಕೊಲೆ ಮಾಡಲಾಗಿತ್ತು. ಹರೀಶ್‌ ಜೊತೆಗಿದ್ದ ಶಮಿವುಲ್ಲಾ ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಪ್ರಕರಣ ಈಗ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ನ್ಯಾಯಾಲಯಕ್ಕೆ ಬಂದು ಸಾಕ್ಷ್ಯ ಹೇಳದಂತೆ ಕೊಲೆ ಆರೋಪಿಗಳು ಮತ್ತು ಅವರ ಬೆಂಬಲಿಗರು ಶಮಿವುಲ್ಲಾ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಮನವಿಯಲ್ಲಿ ದೂರಲಾಗಿದೆ.

‘ಈಗ ಶಮಿವುಲ್ಲಾ ಜೀವ ಬೆದರಿಕೆಯಲ್ಲಿ ಬದುಕುವಂತಾಗಿದೆ. ಇದರಿಂದ ಕೊಲೆ ಪ್ರಕರಣದ ವಿಚಾರಣೆಗೂ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಂತದಲ್ಲಿ ಅವರಿಗೆ ಯಾವುದೇ ರೀತಿಯ ತೊಂದರೆ ಆದಲ್ಲಿ ಪೊಲೀಸ್‌ ಇಲಾಖೆಯೇ ಹೊಣೆ ಹೊರಬೇಕಾಗುತ್ತದೆ. ಆದ್ದರಿಂದ ಸಾಕ್ಷಿದಾರನಿಗೆ ಸರಿಯಾದ ರಕ್ಷಣೆ ಕೊಟ್ಟು, ಮುಕ್ತವಾಗಿ ನ್ಯಾಯಾಲಯಕ್ಕೆ ಬಂದು ಸಾಕ್ಷ್ಯ ಹೇಳುವ ವಾತಾವರಣ ಕಲ್ಪಿಸಬೇಕು’ ಎಂದು ನಿಯೋಗ ಆಗ್ರಹಿಸಿದೆ.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್ ಮಹಮ್ಮದ್, ಪದ್ಮಶೇಖರ್ ಜೈನ್, ಮಂಜುಳಾ ಮಾವೆ, ಅನಿತಾ ಹೇಮನಾಥ್ ಶೆಟ್ಟಿ, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಬಂಟ್ವಾಳ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಕುಲಾಲ್, ಪುರಸಭೆ ಸದಸ್ಯರಾದ ಗಂಗಾಧರ ಪೂಜಾರಿ, ಕಾಂಗ್ರೆಸ್‌ ಮುಖಂಡರಾದ ಮಾಯಿಲಪ್ಪ ಸಾಲಿಯಾನ್, ಸದಾಶಿವ ಬಂಗೇರ, ಜಗದೀಶ್ ಕೊಯಿಲ, ಲೋಕೇಶ್ ಸುವರ್ಣ, ನವಾಝ್ ಬಡಕಬೈಲು, ಚಂದ್ರಶೇಖರ್ ಪೂಜಾರಿ ಬಾಳ್ತಿಲ, ಎ.ಕೆ ಶಾರೂಕ್ ಅಹಮ್ಮದ್, ವಿಕ್ಟರ್ ಪಾಯಸ್, ಸದಾನಂದ ಶೆಟ್ಟಿ ಕಾವಳಕಟ್ಟೆ ನಿಯೋಗದಲ್ಲಿದ್ದರು.

ಪ್ರತಿಕ್ರಿಯಿಸಿ (+)