ಮಂಗಳೂರು: ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ಅಪಮಾನ ಮಾಡಿದ್ದಾರೆ. ಇದು ದೇಶದ್ರೋಹ ಮಾಡಿದಂತೆ. ಅವರ ವಿರುದ್ಧ ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಆಗ್ರಹಿಸಿದರು,
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ' ಒಂದೆಡೆ ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಿಂದ ಬರುವ ಗಣ್ಯರಿಗೆ ಚರಕವನ್ನು ತೋರಿಸಿ ಅದರ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡುತ್ತಾರೆ. ಇನ್ನೊಂದೆಡೆ ಅವರ ಶಿಷ್ಯಂದಿರು ಗಾಂಧೀಜಿಗೆ ಅಪಮಾನ ಮಾಡುತ್ತಿದ್ದಾರೆ. ಗಾಂಧೀಜಿಯವರ ಅಹಿಂಸಾ ಮಾರ್ಗದ ಹೋರಾಟದಿಂದ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದಲ್ಲ. ಚರಕದಿಂದ ಸ್ವಾತಂತ್ರ್ಯ ಬಂದದ್ದಲ್ಲ ಎಂದು ಹರೀಶ್ ಪೂಂಜ ಹೇಳಿದ್ದಾರೆ' ಎಂದರು.
'ದಕ್ಷಿಣ ಕನ್ನಡ .ಮತೀಯ ಸೂಕ್ಷ್ಮ ಜಿಲ್ಲೆ. ಜಿಲ್ಲೆಯಲ್ಲಿ ಮತೀಯ ಸಾಮರಸ್ಯ ಕದಡದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕಿದೆ. ಕೆಲವೊಮ್ಮೆ ಇಲ್ಲಿ ಕೆಲವರು ತಮ್ಮ ಲಾಭಕ್ಕಾಗಿ ಹೊಂದಾಣಿಕೆ ರಾಜಕೀಯದಲ್ಲಿ ತೊಡಗಿದ್ದಾರೆ.. ಇದು ಸರಿಯಲ್ಲ' ಎಂದರು. ಯಾವ ರೀತಿಯ ಹೊಂದಾಣಿಕೆ ರಾಜಕೀಯ ಎಂಬುದನ್ನು ಅವರು ಸ್ಪಷ್ಟ ಪಡಿಸಲಿಲ್ಲ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, 'ಹರೀಶ್ ಪೂಂಜ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿವೆ. ತನ್ನ ವಿರುದ್ಧ ಯಾವ ಮೊಕದ್ದಮೆ ದಾಖಲಾದರೂ ಜಾಮೀನು ಪಡೆಯುವುದಿಲ್ಲ ಎಂದಿದ್ದ ಪೂಂಜ, ಮಂಡಿಯೂರಿ ಪೊಲೀಸ್ ಠಾಣೆಗೆ ಬರುವಂತೆ ಮಾಡಿದ್ದೇವೆ. ಬೆಂಗಳೂರಿನ ನ್ಯಾಯಲಯಕ್ಕೆ ಎಲ್ಲಾ ಪ್ರಕರಣಗಳನ್ನು ವರ್ಗಾಯಿಸಲಾಗಿದೆ. ವಾರದಲ್ಲಿ ಮೂರು ಸಲ ಬೆಂಗಳೂರಿಗೆ ಓಡಬೇಕಾದ ಸ್ಥಿತಿ ಅವರಿಗೆ ಎದುರಾಗಿದೆ. ರೌಡಿ ಗಳ ಪಟ್ಟಿಯಲ್ಲಿ ಹೆಸರು ಸೇರಿಸಲು ಕಾನೂನು ರೀತಿ ರೀತಿಯಲ್ಲಿ ಕ್ರಮಕೈಗೊಳ್ಳಲಿದ್ದೇವೆ. ಈ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಗುವವರೆಗೆ ಕಾನೂನು ಹೋರಾಟವನ್ನು ಒಬ್ಬ ವಕೀಲನಾಗಿ ನಾನು ಮಾಡುತ್ತೇನೆ' ಎಂದು ಹೇಳಿದರು.
'ಬೆಳ್ತಂಗಡಿಯ ಪ್ರವಾಸಿ ಬಂಗಲೆ ಕಾಮಗಾರಿಯಲ್ಲಿ ₹ 3ಕೋಟಿ ಭ್ರಷ್ಟಾಚಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ₹ 5 ಕೋಟಿ ಭ್ರಷ್ಟಾಚಾರ ನಡೆದಿರುವ ಕುರಿತು ನಾನು ಆರ್‌ಟಿಐ ದಾಖಲೆಗಳನ್ನು ಇಟ್ಟುಕೊಂಡೇ ಅಧಿಕಾರಿಗಳು ಸೇರಿದಂತೆ ಹರೀಶ್ ಪೂಂಜ ಮೇಲೆ ಆರೋಪ ಮಾಡಿದ್ದೇನೆ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿದ್ದೇನೆ. ನ್ಯಾಯಾಲಯದ ಮೊರೆ ಹೋಗಿದ್ದೇನೆ. ಸಂವಿಧಾನದ ಪೃಕಾರ ಏನೆಲ್ಲ ಸಾಧ್ಯವೋ ಅದನ್ನು ಮಾಡಿದ್ದೇನೆ. ಆದರೆ ನನ್ನ ಕುಟುಂಬ ಸರ್ವನಾಶ ಆಗುವಂತೆ ಹರೀಶ್ ಪೂಂಜ ಆಣೆ ಪ್ರಮಾಣ ಮಾಡಿದ್ದಾರೆ. ದೇವರನ್ನು ಎಲ್ಲದ್ದಕ್ಕೂ ಮುಂದೆ ನಿಲ್ಲಿಸುವ ಕೆಲಸವನ್ನು ನಾನು ಮಾಡುವುದಿಲ್ಲ. ನಮಗೂ ದೇವರ ಮೇಲೆ ನಂಬಿಕೆಯಿದೆ. ಯಾವ ವಿಚಾರಕ್ಕೆ ದೇವರ ಮೊರೆ ಹೋಗಬೇಕೆನ್ನುವ ಸ್ಪಷ್ಟತೆ ನಮಗಿದೆ. ಆದರೆ ಆ ಸ್ಪಷ್ಟತೆ ಅವರಿಗಿಲ್ಲ. ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.