ಮಂಗಳೂರು: ಸಂತ ಮದರ್ ತೆರೇಸಾ ವಿಚಾರ ವೇದಿಕೆ ಹಾಗೂ ‘ಸಾಮರಸ್ಯ ಮಂಗಳೂರು’ ಸಂಸ್ಥೆಗಳ ಆಶ್ರಯದಲ್ಲಿ ‘ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ’ ಕುರಿತ ವಿಚಾರ ಸಂಕಿರಣವನ್ನು ಇಲ್ಲಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೆ. 3ರಂದು ಬೆಳಿಗ್ಗೆ 10ರಿಂದ ಏರ್ಪಡಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ‘ವಿಚಾರ ಸಂಕಿರಣವನ್ನು ತಮಿಳುನಾಡಿನ ತಿರುವಳ್ಳೂವರ್ ಕ್ಷೇತ್ರದ ಸಂಸದ ಸಸಿಕಾಂತ್ ಸೆಂಥಿಲ್ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಿಚಾರ ಮಂಡಿಸಲಿದ್ದು, ಸಾಮಾಜಿಕ ಕಾರ್ಯಕರ್ತೆ ಆಯೇಷಾ ಫರ್ಝಾನಾ ಯು.ಟಿ. ಪ್ರತಿಕ್ರಿಯೆ ನೀಡಲಿದ್ದಾರೆ. ಏಕತಾರಿ ಹಾಡುಗಾರ ನಾದ ಮಣಿನಾಲ್ಕೂರು ಹಾಗೂ ಲಿಯೊ ರಾಣಿಪುರ ‘ಪ್ರೀತಿಯ ಸಿಂಚನ’ ಸೌಹಾರ್ದ ಗಾಯನವನ್ನು ಬೆಳಿಗ್ಗೆ 8.30ರಿಂದ ನಡೆಸಿಕೊಡಲಿದ್ದಾರೆ’ ಎಂದರು.
‘ಸಾಮರಸ್ಯ ಮಂಗಳೂರು’ ಸಂಸ್ಥೆಯ ಅಧ್ಯಕ್ಷೆ ಮಂಜುಳಾ ನಾಯಕ್, ‘ನಮ್ಮ ಸಂಸ್ಥೆಯ ಹುಟ್ಟಿಗೆ ಸಸಿಕಾಂತ್ ಸೆಂಥಿಲ್ ಪ್ರೇರಣೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗ ಕೋಮುವಾದಿ ರಾಜಕಾರಣದಿಂದ ಬೇಸತ್ತು ಆ ಹುದ್ದೆಗೆ ರಾಜೀನಾಮೆ ನೀಡಿ ಸಂವಿಧಾನದ ಆಶಯ ಉಳಿಸುವ ಪಣ ತೊಟ್ಟಿದ್ದರು. ಅವರನ್ನು ಸಂಘಟನೆಗಳ ವತಿಯಿಂದ ಅಭಿನಂದಿಸಲಾಗುತ್ತದೆ’ ಎಂದರು.
‘ಸಾಮರಸ್ಯ ಮಂಗಳೂರು’ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಜತ್ತಬೈಲ್, ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್ ಬಜಾಲ್, ಉಪಾಧ್ಯಕ್ಷ ಇಲಿಯಾಸ್ ಫರ್ನಾಂಡಿಸ್, ಖಜಾಂಚಿ ಡೋಲ್ಫಿ ಡಿಸೋಜ, ಮಾಧ್ಯಮ ಸಮಿತಿಯ ಸಂಚಾಲಕ ಸ್ಟಾನಿ ಡಿಕುನ್ಹ ಸುದ್ದಿಗೋಷ್ಠಿಯಲ್ಲಿದ್ದರು.