ಬುಧವಾರ, ನವೆಂಬರ್ 13, 2019
23 °C

ನಿರಂತರ ಮಳೆ: ಭತ್ತದ ಕಟಾವು ವಿಳಂಬ

Published:
Updated:
Prajavani

ಬ್ರಹ್ಮಾವರ: ಉಡುಪಿ ಜಿಲ್ಲೆಯ ಹಲವು ಕಡೆ ಭತ್ತದ ಪೈರು ಕಟಾವಿಗೆ ಸಿದ್ಧವಾಗಿದ್ದು, ಹೊರ ಜಿಲ್ಲೆ, ರಾಜ್ಯಗಳಿಂದ ಯಂತ್ರಗಳನ್ನು ತರಲಾಗಿದ್ದರೂ, ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರು ಚಿಂತೆಗೀಡಾಗಿದ್ದಾರೆ.

ಪ್ರತಿ ವರ್ಷ ಜಿಲ್ಲೆಗೆ ಅಕ್ಟೋಬರ್ ಮೊದಲ ವಾರದಲ್ಲೇ ತಮಿಳುನಾಡು, ಕೇರಳ, ದಾವಣಗೆರೆ, ರಾಯಚೂರು, ಶಿವಮೊಗ್ಗ ಮುಂತಾದ ಕಡೆಗಳಿಂದ ನೂರಾರು ಕಟಾವು ಯಂತ್ರಗಳನ್ನು ತರಿಸಲಾಗುತ್ತಿದೆ. ಈ ಬಾರಿಯೂ ಯಂತ್ರಗಳು ಬಂದಿವೆ.

ಆದರೆ ಈ ವರ್ಷ ಮುಂಗಾರು ಸಾಕಷ್ಟು ವಿಳಂಬವಾಗಿ, ಹೆಚ್ಚಿನ ಕಡೆಗಳಲ್ಲಿ ನಾಟಿ ಕಾರ್ಯ ಒಂದು ತಿಂಗಳು ತಡವಾಗಿದ್ದರಿಂದ ಕಟಾವಿಗೆ ಭತ್ತ ಸರಿಯಾಗಿ ಬೆಳೆದಿಲ್ಲ. ಇನ್ನೊಂದೆಡೆ ಕೆಲವು ದಿನಗಳಿಂದ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಗದ್ದೆಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಮಳೆ ಮುಂದುವರಿದಲ್ಲಿ ಕಟಾವು ಕಾರ್ಯ ಇನ್ನೂ ವಿಳಂಬವಾಗಲಿದೆ.

ದೀಪಾವಳಿ ಬಳಿಕ: ಕಳೆದ ವರ್ಷ ನವರಾತ್ರಿ ಸಮಯದಲ್ಲಿ ಹೆಚ್ಚಿನ ಕಡೆ ಕಟಾವು ಕಾರ್ಯ ಆರಂಭವಾಗಿತ್ತು. ಆದರೆ ಈ ಬಾರಿ ದೀಪಾವಳಿ ಮುಗಿದ ನಂತರ ಕಟಾವು ಆರಂಭವಾಗಿ ಚುರುಕು ಕಾಣುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಈ ಬಾರಿ ನಾಟಿ ತಡವಾದರೂ ನಿರಂತರ ಮಳೆ ಇದ್ದ ಕಾರಣ ಉತ್ತಮ ಇಳುವರಿಯಾಗಿದ್ದು, ಉತ್ತಮ ಫಸಲು ರೈತರಿಗೆ ಸಿಗಲಿದೆ. ಕೋಟ, ಕೊಕ್ಕರ್ಣೆ, ಚೇರ್ಕಾಡಿ ಭಾಗಗಳಲ್ಲಿ ಈಗಾಗಲೇ ಕಟಾವಿಗೆ ರೆಡಿಯಾಗಿದೆ. ಆದರೆ ಕಟಾವು ಕಾರ್ಯಕ್ಕೆ ಮಳೆ ಅಡ್ಡಿಯಾಗಿದೆ.

ಪ್ರತಿಕ್ರಿಯಿಸಿ (+)