ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಣಕಲ್‌: ಕುಡಿವ ನೀರಿಗೆ ಪರದಾಟ

ಕುಡಿವ ನೀರು ಪೂರೈಸುವ ಹೆಸರಿನಲ್ಲಿ ಹಣ ಲೂಟಿ: ಆರೋಪ
Last Updated 13 ಏಪ್ರಿಲ್ 2018, 13:10 IST
ಅಕ್ಷರ ಗಾತ್ರ

ಲಿಂಗಸುಗೂರು: ಅತಿವೃಷ್ಟಿ ಹಾಗೂ ನಾರಾಯಣಪುರ ಬಲದಂಡೆ ನಾಲೆ ಬಸಿ ನೀರಿನಿಂದ ಬಸವಳಿದಿದ್ದ ತಾಲ್ಲೂಕಿನ ಸುಣಕಲ್‌ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಸೌಲಭ್ಯಗಳು ಗಗನಕುಸುಮವಾಗಿವೆ ಎಂಬುದು ಗ್ರಾಮಸ್ಥರ ಆರೋಪ.

‘ಒಂದು ವಾರದಿಂದ ವಿದ್ಯುತ್‌ ಪರಿವರ್ತಕ ಹಾಳಾಗಿದ್ದು, ಕತ್ತಲೆಯಲ್ಲಿ ಹಾವು, ಚೇಳು ಭಯದಲ್ಲಿ ಬದುಕು ಕಟ್ಟಿಕೊಂಡಿದ್ದೇವೆ. ತಾಲ್ಲೂಕು ಆಡಳಿತದ ಗಮನ ಸೆಳೆದರೂ ಯಾವೊಬ್ಬ ಅಧಿಕಾರಿ ಭೇಟಿ ನೀಡಿ ಪರ್ಯಾಯ ವ್ಯವಸ್ಥೆಗೆ ಮುಂದಾಗುತ್ತಿಲ್ಲ’ ಎಂದು ಮೋದಿನಸಾಬ್ ಆರೋಪಿಸುತ್ತಾರೆ.

ಸುಣಕಲ್‌ದಲ್ಲಿ 17.39 ಎಕರೆ ಪ್ರದೇಶದಲ್ಲಿ 200 ಮನೆಗಳ ನಿರ್ಮಾಣಕ್ಕೆ ಜಮೀನು ಖರೀದಿಸಲಾಗಿದೆ. 200 ಮನೆಗಳ ನಿರ್ವಹಣೆ ಬಳ್ಳಾರಿ ಮೂಲದ ಮೆ. ಬಿನ್ಯಾಸ್‌ ಕನ್‌ಸ್ಟ್ರಕ್ಷನ್‌ ಸಂಸ್ಥೆಗೆ ವಹಿಸಿಕೊಡಲಾಗಿತ್ತು. 2010ರಲ್ಲಿ ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆದು 2013ಕ್ಕೆ ಹಸ್ತಾಂತರ ಮಾಡಲಾಗಿದೆ.

‘ಸ್ಥಳಾಂತರಗೊಂಡ ಸಂತ್ರಸ್ತರು ಕಿಟಕಿ ಬಾಗಿಲು ಮುರಿದ, ಮಳೆಯಲ್ಲಿ ಸೋರುತ್ತಿರುವ ಮನೆಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್‌ ಸೌಲಭ್ಯದ ಹೆಸರಿನಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿದ್ದರೂ ಸೌಲಭ್ಯಗಳು ಮರೀಚಿಕೆಯಾಗಿವೆ’ ಎಂದು ಯಲ್ಲಮ್ಮ, ಹನುಮವ್ವ ದೂರುತ್ತಾರೆ.

‘ಸುಣಕಲ್‌ ಮತ್ತು ಚಿಕ್ಕ ಉಪ್ಪೇರಿ ಬಡಾವಣೆಗಳಿಗೆ ನೀರು ಪೂರೈಸಲು ನೀರು ಸಂಗ್ರಹಣಾ ತೊಟ್ಟಿಗಳು, ಪೈಪ್‌ಲೈನ್‌, ನಲ್ಲಿ ಜೋಡಣೆ ಕೆಲಸ ಮುಗಿದು 5 ವರ್ಷಗಳಾದರೂ ನೀರು ಸಂಗ್ರಹವಾಗಿಲ್ಲ’ ಎಂದು ಹುಲ್ಲಪ್ಪ ಭಜಂತ್ರಿ ಹೇಳುತ್ತಾರೆ.

‘5 ವರ್ಷಗಳಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಕುಡಿವ ನೀರು ಮತ್ತು ಅಗತ್ಯ ಸೌಲಭ್ಯಕ್ಕೆ ಕೋಟ್ಯಾಂತರ ಹಣ ಖರ್ಚು ಮಾಡಿದ್ದಾರೆ. ವಿದ್ಯುತ್‌ ಕಣ್ಣುಮುಚ್ಚಾಲೆಯಿಂದ ಸಮೀಪದ ತೋಟಗಳಿಗೆ ತೆರಳಿ ನೀರು ತಂದುಕೊಳ್ಳುತ್ತಿದ್ದೇವೆ’ ಎಂದು ಮಹಿಳೆಯರು ಹೇಳಿದರು.

‘ಬಡಾವಣೆಯಲ್ಲಿ ಎರಡು ಕಿರು ನೀರು ಸರಬರಾಜು, ಮೂರು ಕೈ ಪಂಪ್‌ ವ್ಯವಸ್ಥೆ ಇದ್ದರೂ ಪ್ರಯೋಜನವಿಲ್ಲ. ಒಂದು ಕಿರು ನೀರು ಸರಬರಾಜು ಯೋಜನೆಯಡಿ ಮಾತ್ರ ಕುಡಿಯಲು ಯೋಗ್ಯವಲ್ಲದ ನೀರು ಬರುತಿದ್ದು, ವಿದ್ಯುತ್‌ ಪರಿವರ್ತಕ ದುರಸ್ತಿಯಿಂದ ಪರದಾಡುವಂತಾಗಿದೆ’ ಎಂದು ಮೌನೇಶ ಉಪ್ಪಾರ ದೂರಿದರು.

**

ಸ್ಥಳಾಂತರಗೊಂಡು 5 ವರ್ಷಗಳಾದರೂ ತಾಲ್ಲೂಕು ಆಡಳಿತ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ಸಮರ್ಪಕ ಶುದ್ಧ ಕುಡಿವ ನೀರು ಪೂರೈಸಲು ಮುಂದಾಗಿಲ್ಲ – 
ಮಹಾಂತೇಶ ಹಿರೇಮಠ, ಸುಣಕಲ್‌.

**


ಬಿ.ಎ. ನಂದಿಕೋಲಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT