ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಪುತ್ತೂರು: ಬೆಂದ್ರ್‌ತೀರ್ಥ, ಪಳ್ಳಿತಡ್ಕ ಮಸೀದಿ ಆವರಣ ಜಲಾವೃತ

2ನೇ ಬಾರಿ ಮುಳಗಿದ ಚೆಲ್ಯಡ್ಕ ಸೇತುವೆ
Last Updated 5 ಜುಲೈ 2022, 11:26 IST
ಅಕ್ಷರ ಗಾತ್ರ

‌ಪುತ್ತೂರು: ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪುತ್ತೂರು -ಪರ್ಲಡ್ಕ -ಕುಂಜೂರು ಪಂಜ- ಪಾಣಾಜೆ ರಸ್ತೆಯ ಚೆಲ್ಯಡ್ಕದ ಸೇತುವೆ ಈ ಮಳೆಗಾಲದಲ್ಲಿ ಎರಡನೇ ಬಾರಿಗೆ ಮಂಗಳವಾರ ಮುಳುಗಡೆಯಾಗಿದೆ. ತಾಲ್ಲೂಕಿನ ಇರ್ದೆ, ಬೆಂದ್ರ್‌ತೀರ್ಥ, ನಿಡ್ಪಳ್ಳಿ ಗ್ರಾಮದ ಕೂಟೇಲು ಪ್ರದೇಶದಲ್ಲಿ ನೆರೆ ಬಂದಿದೆ.

ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯ ಸೋಮವಾರ ರಾತ್ರಿಯಿಂದ ಮತ್ತಷ್ಟು ಹೆಚ್ಚಾಗಿದೆ. ಜಡಿಮಳೆ ಮಂಗಳವಾರವೂ ಮುಂದುವರಿದಿದೆ. ಜೂ.30ರಂದು ಮೊದಲ ಬಾರಿಗೆ ಚೆಲ್ಯಡ್ಕ ಸೇತುವೆ ಮುಳುಗಡೆಯಾಗಿತ್ತು.

ಈ ರಸ್ತೆಯ ವಾಹನ ಸಂಚಾರ ಸ್ಥಗಿತಗೊಂಡಿದೆ. ವಾಹನಗಳು ಪರ್ಯಾಯವಾಗಿ ಪುತ್ತೂರಿನಿಂದ ಮಾಣಿ-ಮೈಸೂರು ಹೆದ್ದಾರಿಯ ಸಂಟ್ಯಾರು ಮೂಲಕ ಪಾಣಾಜೆ ಕಡೆಗೆ ಸಂಚರಿಸುತ್ತಿವೆ. ಗುಮ್ಮಟಗದ್ದೆ, ಅಜ್ಜಿಕಲ್ಲು, ಬೈರೋಡಿ, ವಳತ್ತಡ್ಕ ಜನತೆ ಸಮಸ್ಯೆಗೊಳಗಾಗಿದ್ದಾರೆ.

ಬೆಂದ್ರ್‌ತೀರ್ಥ ಜಲಾವೃತ:

ಇದ್ರೆ ಗ್ರಾಮದಲ್ಲಿ ಸೀರೆ ಹೊಳೆ ಉಕ್ಕಿ ಹರಿಯುತ್ತಿದ್ದು, ಇರ್ದೆ ಪಳ್ಳಿತ್ತಡ್ಕ ಪ್ರದೇಶಕ್ಕೆ ನೀರು ನುಗ್ಗಿದೆ. ಬಿಸಿನೀರಿನ ಬುಗ್ಗೆಯ ಬೆಂದ್ರ್‌ತೀರ್ಥ ಹಾಗೂ ಇರ್ದೆ ಪಳ್ಳಿತ್ತಡ್ಕ ಮಸೀದಿ ಆವರಣ ಜಲಾವೃತಗೊಂಡಿವೆ.

ನಿಡ್ಪಳ್ಳಿ ಗ್ರಾಮದ ಕೂಟೇಲು ಪರಿಸರ ಎರಡನೇ ಬಾರಿಗೆ ಮುಳುಗಡೆಯಾಗಿದ್ದು, 6 ಕೃಷಿಕರ ತೋಟಗಳಿಗೆ ನೀರು ನುಗ್ಗಿದೆ. ತೋಟದಲ್ಲಿರುವ ಅಡಿಕೆ, ತೆಂಗು, ಕಾಳುಮೆಣಸು, ಬಾಳೆ ಕೃಷಿ ನಾಶದ ಭೀತಿ ಕಾಡಿದೆ.

ಬೆಟ್ಟಂಪಾಡಿ ರೆಂಜ-ಮುಡ್ಪಿನಡ್ಕ ರಸ್ತೆಯ ಕೂಟೇಲು ಬಳಿ ಸೇತುವೆ ನಿರ್ಮಾಣದ ಸಂದರ್ಭ ಅಗೆದು ಹಾಕಿದ್ದ ಮಣ್ಣು ತೆರವುಗೊಳಿಸದ ‍‍ಪರಿಣಾಮ, ಮಳೆ ನೀರು ತೋಟಗಳಿಗೆ ನುಗ್ಗಲು ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಗುಡ್ಡ ಕುಸಿತ:ಆರ್ಯಾಪು ಗ್ರಾಮದ ಕೊಲ್ಯ ಎಂಬಲ್ಲಿ ರಸ್ತೆ ಬದಿಯ ಗುಡ್ಡದ ಮಣ್ಣು ಕುಸಿದು ಬಿದ್ದು, ಸಂಪರ್ಕ ಕಡಿತಗೊಂಡಿದೆ. ಇನ್ನಷ್ಟು ಗುಡ್ಡ ಕುಸಿಯುವ ಅಪಾಯ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT