ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ: ಗುಡ್ಡ ಕುಸಿದು ಹೊಸ ಮನೆಗೆ ಹಾನಿ

2 ತಿಂಗಳ ಹಿಂದೆ ಗೃಹಪ್ರವೇಶ: ಮನೆಮಂದಿಯ ಸ್ಥಳಾಂತರ
Last Updated 9 ಜುಲೈ 2022, 5:38 IST
ಅಕ್ಷರ ಗಾತ್ರ

ಬೆಳ್ತಂಗಡಿ/ ಉಜಿರೆ: ತಾಲ್ಲೂಕಿನಲ್ಲಿ ಶುಕ್ರವಾರ ಮಳೆಯ ಪ್ರಮಾಣ ತುಸು ಕಡಿಮೆಯಾಗಿದ್ದರೂ ಅಲ್ಲಲ್ಲಿ ಹಾನಿ ಸಂಭವಿಸಿವೆ.

ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಡಿಬಾಗಿಲಿನಲ್ಲಿ ಗುರುವಾರ ರಾತ್ರಿ ಕುರಿಯಾಳಶೇರಿ ಥಾಮಸ್ ಎಂಬುವರ ಮನೆಯ ಮೇಲೆ ಹಿಂಭಾಗದ ಗುಡ್ಡ ಕುಸಿದು, ಹಾನಿ ಸಂಭವಿಸಿದೆ. ಮನೆಯವರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.ಮೇ ತಿಂಗಳಲ್ಲಿ ಈ ಮನೆಯ ಗೃಹಪ್ರವೇಶ ನಡೆದಿತ್ತು.

ಭೂ ಕುಸಿತದ ತೀವ್ರತೆಗೆ ಮನೆಯ ಕಿಟಕಿ ಹಾಗೂ ಗೋಡೆ ಒಡೆದು ಹೋಗಿದ್ದು, ಮನೆಯೊಳಗೆ ಬಂಡೆಕಲ್ಲುಗಳು ಮಣ್ಣು ಹಾಗೂ ನೀರು ನುಗ್ಗಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳಿಗೂ ಹಾನಿಯಾಗಿದೆ. ಮನೆಯ ಸುತ್ತ ಕಲ್ಲು, ಮಣ್ಣು ಹಾಗೂ ಹೂಳು ತುಂಬಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಧರ್ಮಗುರು ಶಾಜಿ ಅವರ ನೇತೃತ್ವದಲ್ಲಿ ತೆರವು ಕಾರ್ಯ ನಡೆಯುತ್ತಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಂಡಾಜೆ ಗ್ರಾಮದ ಪಿಲತ್ತಡ್ಕ ಬಳಿ ಗುಡ್ಡ ಕುಸಿತಗೊಂಡು ಶ್ರೀಧರ ಪೂಜಾರಿ ಅವರ ಮನೆ ಅಪಾಯದ ಸ್ಥಿತಿಯಲ್ಲಿದೆ. ಗುಡ್ಡದ ಮಣ್ಣು ಮನೆಯ ಒಂದು ಭಾಗದಲ್ಲಿ ಕುಸಿದು ಮನೆಯ ಗೋಡೆ ತನಕ ಆವರಿಸಿದೆ. ಗುಡ್ಡ ಇನ್ನಷ್ಟು ಕುಸಿಯುವ ಸಂಭವವಿದ್ದು ಮನೆಯವರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ನೆರಿಯ ಗ್ರಾಮದ ವಸಂತ ಬಿನ್ ಕೊರಗಪ್ಪ ಪೂಜಾರಿ ಅವರ ಮನೆ ಬಳಿಯ ಗುಡ್ಡ ಕುಸಿದಿದೆ.

ಮುಂಡಾಜೆ ಗ್ರಾಮದ ಮಂಜುಶ್ರೀ ನಗರದ ಕುಂಟಾಲಪಲಿಕೆ ಬಳಿ ಆನಂದ ಅವರ ಮನೆಯ ಒಂದು ಪಾರ್ಶ್ವದ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ. ಮನೆಯವರು ಪಕ್ಕದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಹಾನಿ ಪ್ರದೇಶಗಳಿಗೆ ಮುಂಡಾಜೆ ಗ್ರಾಮಲೆಕ್ಕಿಗ ಪ್ರದೀಪ್, ಪಂಚಾಯತಿ ಅಧ್ಯಕ್ಷೆ ರಂಜಿನಿ ರವಿ, ಪಿಡಿಒ ಸುಮಾ ಎ.ಎಸ್, ಗ್ರಾಮ ಪಂಚಾಯಿತಿ ಸದಸ್ಯರು, ರೋಟರಿ ಕ್ಲಬ್ ಸದಸ್ಯ ವೆಂಕಟೇಶ್ವರ ಭಟ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುರುವಾರ ಮಧ್ಯಾಹ್ನದ ಬಳಿಕ ವಿಪರೀತ ಮಳೆಯಾದ ಕಾರಣ ನೇತ್ರಾವತಿ, ಮೃತ್ಯುಂಜಯ ನದಿಗಳು ತುಂಬಿ ಹರಿದು ತಗ್ಗು ಪ್ರದೇಶದ ತೋಟಗಳಿಗೆ ನೀರು ನುಗ್ಗಿ ಹಲವೆಡೆ ಆತಂಕದ ವಾತಾವರಣ ಸೃಷ್ಟಿಯಾಯಿತು. ಕಿಂಡಿ ಅಣೆಕಟ್ಟು, ಕಿರು ಸೇತುವೆಗಳು ಸಂಪರ್ಕ ಕಳೆದುಕೊಂಡಿದ್ದವು.

‘ಚಾರ್ಮಾಡಿ ಘಾಟಿ ಪ್ರದೇಶದ ಒಂದೆರಡು ಕಡೆ ಸಣ್ಣಮಟ್ಟದ ಗುಡ್ಡ ಕುಸಿತಗಳು ಸಂಭವಿಸಿದೆ. ಆದರೆ, ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜೆಸಿಬಿಗಳನ್ನು ದಿನದ 24 ಗಂಟೆ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಘಾಟಿ ಭಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ’ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎ.ಇ.ಇ. ಕೃಷ್ಣಕುಮಾರ್ ತಿಳಿಸಿದ್ದಾರೆ.

ಶಾಸಕರ ಭೇಟಿ: ನೆರಿಯ ಹಾಗೂ ಮುಂಡಾಜೆಯಲ್ಲಿ ಗುಡ್ಡ ಕುಸಿತಗಳು ಉಂಟಾದ ಪ್ರದೇಶದ ಮನೆಗಳಿಗೆ ಶಾಸಕ ಹರೀಶ್ ಪೂಂಜ ಶುಕ್ರವಾರ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT