ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ತಡೆಗೋಡೆ ಕುಸಿದು ಮೂವರಿಗೆ ಗಾಯ

Last Updated 5 ಜುಲೈ 2022, 6:03 IST
ಅಕ್ಷರ ಗಾತ್ರ

ಮಂಗಳೂರು: ಸೋಮವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಅನಾಹುತಗಳು ಸಂಭವಿಸಿವೆ.

ಇಲ್ಲಿನ ಮೋರ್ಗನ್‌ ಗೇಟ್‌ ಬಳಿಯ ಓಣಿಕೆರೆ ಎಂಬಲ್ಲಿ ತಡೆಗೋಡೆ ಕುಸಿದು ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸ್ಥಳಕ್ಕೆ ಮೇಯರ್‌ ಪ್ರೇಮಾನಂದ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.

ಬಿಕರ್ನಕಟ್ಟೆಯಲ್ಲಿ ಕಾಂಪೌಂಡ್ ಕುಸಿದು ಜೆರಾಲ್ಡ್ ಲೋಬೊ ಎಂಬುವರ ಮನೆಗೆ ಹಾನಿಯಾಗಿದೆ. ಹಲವೆಡೆ ವಸತಿ ಪ್ರದೇಶಕ್ಕೆ ನೀರು ನುಗ್ಗಿದೆ. ಕುಲಶೇಖರದ ಬಜ್ಜೋಡಿಯಲ್ಲಿ ಕ್ಲಾಡಿ ಲೋಬೊ ಅವರ ವರ್ಕ್ ಶಾಪ್‌ಗೆ ಚರಂಡಿ ನೀರು ನುಗ್ಗಿದ್ದು, ವರ್ಕ್‌ಶಾಪ್ ಒಳಗಿದ್ದ ವಸ್ತುಗಳನ್ನು ರಕ್ಷಿಸಿಕೊಳ್ಳಲು ಸಿಬ್ಬಂದಿ ಪರದಾಡಿದರು.

ಬಂಟ್ವಾಳ ತಾಲ್ಲೂಕಿನ ಸಾರಡ್ಕದಲ್ಲಿ ಭೂ ಕುಸಿತ ಉಂಟಾಗಿದೆ. ಉಳ್ಳಾಲದ ಸಮೀಪದ ತಲಪಾಡಿ ದೇವಿಪುರ, ಕೋಟೆಕಾರು, ವೈದ್ಯನಾಥ ನಗರದಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿವೆ. ಮಾಡೂರು ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ತೊಡಕಾಯಿತು. ಸೋಮೇಶ್ವರ ಒಂಬತ್ತುಕೆರೆಯ ಭಾಗದಲ್ಲೂ ಮನೆಗಳು ಜಲಾವೃತಗೊಂಡಿವೆ.

ಸೋಮವಾರ ರಾತ್ರಿ ಆರಂಭವಾದ ಮಳೆ ಮಂಗಳವಾರ ಬೆಳಿಗ್ಗೆ 10.30ರವರೆಗೂ ನಿರಂತರವಾಗಿ ಸುರಿಯಿತು. 10.30ರ ನಂತರ ಮಳೆ ಕೊಂಚ ಬಿಡುವು ಕೊಟ್ಟಿದ್ದರಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.

ವಾಹನ ಸಂಚಾರ ಸ್ಥಗಿತ
ವಿಟ್ಲ:
ಭಾರಿ ಮಳೆಯಿಂದಾಗಿ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ವಿಟ್ಲ-ಸಾಲೆತ್ತೂರು ರಸ್ತೆಯ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಬದಿಯಲ್ಲಿ ಹರಿಯುತ್ತಿರುವ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಜಲಾವೃತವಾಗಿದೆ. ಇದರಿಂದಾಗಿ, ಈ ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದ್ದು, ವಾಹನಗಳು ಸುತ್ತಿ ಬಳಸಿ ಸಂಚರಿಸುವಂತಾಗಿದೆ.

ಬೆಳಗ್ಗಿನಿಂದಲೇ ನೀರಿನ ಮಟ್ಟ ಏರುತ್ತಿದ್ದು, ಕೆಲಹೊತ್ತು ಇಳಿಮುಖವಾಗಿತ್ತು. ಮುನ್ನೆಚ್ಚರಿಕೆಯಾಗಿ ರಸ್ತೆಯ ಎರಡೂ ಕಡೆಗಳಲ್ಲಿ ಸ್ಥಳೀಯ ನಾಗರಿಕರು ಕಾವಲು ಕಾಯುತ್ತಿದ್ದಾರೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT