ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್‌ ಸಂಗ್ರಹ ರದ್ದು: ಸಂಭ್ರಮಾಚರಣೆ

ಹೆಜಮಾಡಿ ಟೋಲ್ ಬಳಿ ಸಾಂಕೇತಿಕ ಧರಣಿ ಇಂದು
Last Updated 2 ಡಿಸೆಂಬರ್ 2022, 6:44 IST
ಅಕ್ಷರ ಗಾತ್ರ

ಸುರತ್ಕಲ್: ಇಲ್ಲಿನ ಎನ್ಐಟಿಕೆ ಟೋಲ್ ಗೇಟ್‌ನಲ್ಲಿ ಬುಧವಾರ (ನ.30) ಮಧ್ಯರಾತ್ರಿಯಿಂದ ಟೋಲ್ ಶುಲ್ಕ ಸಂಗ್ರಹ ನಿಲ್ಲಿಸಿದ್ದು, ಇದು ಹೋರಾಟಕ್ಕೆ ಸಿಕ್ಕಿದ ಜಯವಾಗಿದೆ ಎಂದು ಹೋರಾಟ ಸಮಿತಿಯ ಮುಖಂಡರು ತಿಳಿಸಿದ್ದಾರೆ.

ಟೋಲ್‌ಗೇಟ್‌ನಲ್ಲಿ ಟೋಲ್ ಸಂಗ್ರಹ ನಿಲ್ಲಿಸಿದ ಕ್ಷಣದಲ್ಲಿ 35 ದಿನಗಳಿಂದ ಹೋರಾಟ ನಡೆಸುತ್ತಿದ್ದವರು ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಹೋರಾಟ ಸಮಿತಿ ಪರ ಜಯಘೋಷಗಳನ್ನು ಕೂಗಿದರು. ಚೆಂಡೆಯ ವಾದನ, ಹಾಡುಗಳಿಗೆ ಕುಣಿದು ಕುಪ್ಪಳಿಸಿದರು, ಜತೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ಶಾಸಕರಿಗೆ ಧಿಕ್ಕಾರ ಕೂಗಿದರು.

ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಇದು ತುಳುನಾಡಿನ ಒಗ್ಗಟ್ಟಿಗೆ ಸಂದ ಜಯವಾಗಿದ್ದು, ಧರಣಿಯಲ್ಲಿ ಭಾಗವಹಿಸಿದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಗುರುವಾರ ಸಂಜೆ ನಡೆದ ಧರಣಿಯ ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಬಿ.ಎ ಮೊಹಿಯುದ್ದೀನ್ ಬಾವ, ಇನಾಯತ್ ಅಲಿ ಭಾಗವಹಿಸಿದ್ದರು.

ಇಂದು ಸಾಂಕೇತಿಕ ಪ್ರತಿಭಟನೆ: ಸುರತ್ಕಲ್ ಟೋಲ್‌ಗೇಟ್‌ ಅನ್ನು ಹೆಜಮಾಡಿ ಟೋಲ್‌ನಲ್ಲಿ ವಿಲೀನಗೊಳಿಸಿ, ಅಲ್ಲಿ ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ, ಟೋಲ್‌ಗೇಟ್ ವಿರೋಧ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕರು ಡಿ.2ರಂದು ಹೆಜಮಾಡಿ ಟೋಲ್ ಬಳಿ ಸಾಂಕೇತಿಕ ಧರಣಿ ನಡೆಸಲಿದ್ದಾರೆ. ಶುಲ್ಕ ಹೆಚ್ಚಳ ಪ್ರಸ್ತಾವ ಕೈಬಿಡಬೇಕು. ಇಲ್ಲವಾದಲ್ಲಿ ಮತ್ತೆ ನಿರಂತರ ಧರಣಿ ನಡೆಸಲಾಗುತ್ತದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಕೆಲಸ ಕಳೆದುಕೊಂಡ ಸಿಬ್ಬಂದಿ: ಸುರತ್ಕಲ್ ಟೋಲ್‌ನಲ್ಲಿ ಪಾಳಿಯ ಮೇಲೆ ಕೆಲಸ ಮಾಡುತ್ತಿದ್ದ 50ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಗುರುವಾರ ಬೆಳಿಗ್ಗೆ ಟೋಲ್‌ಗೇಟ್‌ ಬಳಿ ಬಂದು, ಕೆಲವರು ಮೊಬೈಲ್ ನೋಡುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT