ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಚಿಕಿತ್ಸೆಗೆ ಬಸ್ ಕಾರಣ್ಯ ಯಾತ್ರೆ

ತಲಸ್ಸೇಮಿಯಾದಿಂದ ಬಳಲುತ್ತಿರುವ ಬಾಲಕಿಯ ಚಿಕಿತ್ಸೆಗೆ ನೆರವು ನೀಡಲು ಸಮಿತಿ ರಚನೆ
Last Updated 6 ಜುಲೈ 2022, 4:27 IST
ಅಕ್ಷರ ಗಾತ್ರ

ಬದಿಯಡ್ಕ: ಕಾಸರಗೋಡು ಜಿಲ್ಲೆ ಕುಂಬ್ಡಾಜೆ ಸಮೀಪದ ಕಜೆಮೂಲೆಯ ಉದಯ ಕುಮಾರ್ ಹಾಗೂ ಸವಿತಾ ದಂಪತಿಯ ಪುತ್ರಿ ಸಾನ್ವಿ (7) ತಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದು, ‘ಬಿಲಾಲ್‌’ ಖಾಸಗಿ ಬಸ್‌ ಸೋಮವಾರ ‘ಕಾರುಣ್ಯ ಯಾತ್ರೆ’ ನಡೆಸಿ ₹53 ಸಾವಿರ ನೆರವು ನೀಡಿದೆ.

ಇಲ್ಲಿನ ನಾರಂಪಾಡಿಯ ಎಫ್ಎಎಲ್‌ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ಚಿಕಿತ್ಸೆಗೆ ₹40 ಲಕ್ಷ ಬೇಕಾಗಬಹುದು ಎಂದು ವೈದ್ಯರು ಹೇಳಿದ್ದರು. ಚಿಕಿತ್ಸಾ ವೆಚ್ಚ ಭರಿಸಲಾಗದ ಬಡ ಕುಟುಂಬವು ನೆರವು ಕೋರಿತ್ತು.

ಇದಕ್ಕೆ ಸ್ಪಂದಿಸಿದ ಇಲ್ಲಿನ ‘ಬಿಲಾಲ್’ ಬಸ್ ಮಾಲೀಕ ಮಹಮ್ಮದ್ ಶಾಫಿ ನೆರವಿಗೆ ಮುಂದಾದರು. ಕಾಸರಗೋಡು– ಬೆಳಿಂಜ ನಡುವೆ ಈ ಬಸ್‌ ಆರು ಟ್ರಿಪ್‌ ಸಂಚರಿಸಿತು. ಪ್ರಯಾಣಿಕರಿಗೆ ವಿಷಯ ತಿಳಿಸಲಾಯಿತು. ಟಿಕೆಟ್‌ ನೀಡುವ ಬದಲು, ಅವರಿಂದ ಕೈಲಾದ ನೆರವು ಕೋರಲಾಯಿತು. ಹೀಗಾಗಿ ಒಂದೇ ದಿನ ಈ ಬಸ್‌ ಪ್ರಯಾಣಿಕರಿಂದ ಒಟ್ಟು ₹60,650 ಸಂಗ್ರಹವಾಗಿದ್ದು, ₹7,279 ಡೀಸೆಲ್ ವೆಚ್ಚ ಹೊರತು ಪಡಿಸಿ ₹53,371 ಅನ್ನು ಬಾಲಕಿಗೆ ನೀಡಿದ್ದಾರೆ. ಈ ಸೇವೆಗೆ ನಿರ್ವಾಹಕ ಶಾಹೀದ್ ಹಾಗೂ ಚಾಲಕ ಕಿಶನ್ ಜೊತೆಯಾದರು.

ಬಿಲಾಲ್ ಬಸ್‌ ಮಾಲೀಕರ ಧಾರ್ಮಿಕ ಸಾಮರಸ್ಯ, ಸ್ಪಂದನೆಗೆ ಶ್ಲಾಘನೆ ವ್ಯಕ್ತವಾಗಿದೆ.

ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ವಿನೋದ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಜನಮೈತ್ರಿ ಪೊಲೀಸರು ಧನಸಹಾಯ ನೀಡಿದರು.

ನಿಧಿ ಸಂಗ್ರಹ: ಸಾನ್ವಿಯ ಚಿಕಿತ್ಸೆಗಾಗಿ ಕುಂಬ್ಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಉಸ್ತುವಾರಿಯಲ್ಲಿ ಚಿಕಿತ್ಸಾ ನಿಧಿ ಸಂಗ್ರಹ ಸಮಿತಿ ರಚಿಸಲಾಗಿದೆ. ಸಾನ್ವಿಯ ಚಿಕಿತ್ಸೆಯು ಬೆಂಗಳೂರಿನ ನಾರಾಯಣ ಹೆಲ್ತ್‌ ಸೆಂಟರ್‌ನಲ್ಲಿ ನಡೆಯಲಿದೆ.

ಜಯನಗರದ ಕೇರಳ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದು, ದಾನಿಗಳು ಖಾತೆ ಸಂಖ್ಯೆ : 40413101052286 ಐಎಫ್‌ಎಸ್‌ಸಿ ಸಂಖ್ಯೆ: ಕೆಎಲ್‌ಜಿಬಿ 0040413 ಗೆ ನೆರವು ನೀಡಬಹುದು. ಮಾಹಿತಿಗಾಗಿ ಮೊ. 8921968983 ಸಂಪರ್ಕಿಸಬಹುದು ಎಂದು ಚಿಕಿತ್ಸಾ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT