ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಯ ಬಿಜೆಪಿ ಸದಸ್ಯೆಯ ಪತಿ ಹತ್ಯೆ

Last Updated 7 ಫೆಬ್ರವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಛಲವಾದಿಪಾಳ್ಯ ವಾರ್ಡ್‌ನ ಬಿಜೆಪಿ ಸದಸ್ಯೆ ರೇಖಾ ಅವರ ಪತಿ ಎಸ್‌.ಕದಿರೇಶ್‌ (47) ಅವರನ್ನು ನಾಲ್ವರು ದುಷ್ಕರ್ಮಿಗಳು ಮಚ್ಚಿನಿಂದ ಹೊಡೆದು ಬುಧವಾರ ಹಾಡಹಗಲೇ ಹತ್ಯೆ ಮಾಡಿದ್ದಾರೆ.

ಕಾಟನ್‌ಪೇಟೆಯ ಆಂಜನಪ್ಪ ಗಾರ್ಡನ್‌ನಲ್ಲಿ ವಾಸವಿದ್ದ ಕದಿರೇಶ್‌, ಮನೆ ಸಮೀಪದ ಮುನೀಶ್ವರ ದೇವಸ್ಥಾನಕ್ಕೆ ಮಧ್ಯಾಹ್ನ 3.30ರ ಸುಮಾರಿಗೆ ಹೋಗಿದ್ದರು. ದೇವಸ್ಥಾನದ ಆವರಣದಲ್ಲೇ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು, ಕೃತ್ಯ ಎಸಗಿ ಪರಾರಿಯಾಗಿದ್ದಾರೆ.

ಅವರು ಬಿಜೆಪಿ ಎಸ್.ಸಿ.ಮೋರ್ಚಾದ ಚಾಮರಾಜಪೇಟೆ ಘಟಕದ ಉಪಾಧ್ಯಕ್ಷ. ಅವರ ಪತ್ನಿ ರೇಖಾ ಎರಡನೇ ಬಾರಿ ಪಾಲಿಕೆ ಸದಸ್ಯೆಯಾಗಿ ಆಯ್ಕೆ ಆಗಿದ್ದರು. ದಂಪತಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.

ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ದಾಳಿ:

ಆಂಜನಪ್ಪ ಗಾರ್ಡನ್‌ನ 3ನೇ ಅಡ್ಡರಸ್ತೆಯಲ್ಲಿ ದೇವಸ್ಥಾನ ಇದ್ದು, ಅಲ್ಲಿ ಶಿವರಾತ್ರಿ ಆಚರಣೆಗಾಗಿ ಸಿದ್ಧತೆ ನಡೆದಿದೆ. ಅದರ ಹಿಂಭಾಗದ ಜಾಗದಲ್ಲಿ ಜಿಮ್‌ ನಿರ್ಮಾಣಕ್ಕೆ ಪಾಯ ತೊಡಲಾಗುತ್ತಿದೆ. ಇದನ್ನು ವೀಕ್ಷಿಸಲು ಕದಿರೇಶ್‌ ಸ್ಥಳಕ್ಕೆ ತೆರಳಿದ್ದರು.

ದೇವಸ್ಥಾನದ ಮುಂಭಾಗದಲ್ಲಿ ಸೇರಿದ್ದ 10 ಮಂದಿ ಅಗ್ನಿಕುಂಡ ನಿರ್ಮಾಣದಲ್ಲಿ ನಿರತರಾಗಿದ್ದರು. ಅವರೊಂದಿಗೆ ಕದಿರೇಶ್‌ ಮಾತನಾಡುತ್ತಿದ್ದರು. ಇದೇ ವೇಳೆ ಅವರ ಮೊಬೈಲ್‌ಗೆ ಕರೆ ಬಂದಿತ್ತು. ಅವರು, ಮಾತನಾಡುತ್ತಾ ಪಾಯ ತೋಡುತ್ತಿದ್ದ ಜಾಗದತ್ತ ಹೋಗಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಹಿಂದಿನ ಗೇಟಿನಿಂದ ಒಳಗೆ ಬಂದ ದುಷ್ಕರ್ಮಿಗಳು ದಾಳಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದರು.

ದುಷ್ಕರ್ಮಿಯೊಬ್ಬ, ಮೊದಲಿಗೆ ಮಚ್ಚಿನಿಂದ ಹೊಟ್ಟೆಗೆ ಹೊಡೆದು ಅವರನ್ನು ಪಾಯಕ್ಕೆ ತಳ್ಳಿದ್ದ. ಪಾಯದಲ್ಲಿ ಬೀಳುತ್ತಿದ್ದಂತೆ ಕತ್ತಿನ ಮೇಲೆ ಹೊಡೆದಿದ್ದ. ನರಳಾಟ ಕೇಳಿ, ದೇವಸ್ಥಾನದ ಎದುರಿನಲ್ಲಿದ್ದವರು ಸ್ಥಳಕ್ಕೆ ಓಡಿಬಂದರು. ದುಷ್ಕರ್ಮಿಗಳ ಮೇಲೆ ಕಲ್ಲು ತೂರಿದರು. ಅವರಿಗೆಲ್ಲ ಮಚ್ಚು ತೋರಿಸಿ ಬೆದರಿಸಿದ ದುಷ್ಕರ್ಮಿಗಳು, ಸ್ಥಳದಿಂದ ಪರಾರಿಯಾದರು.

ರಕ್ತದ ಮಡುವಿನಲ್ಲಿ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ಪರೀಕ್ಷೆ ನಡೆಸಿದ ವೈದ್ಯರು ಹೇಳಿದರು ಎಂದು ಅವರ ಬಾಮೈದ ಅಪ್ಪು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಟ್ಟೆ ಹಾಗೂ ಕತ್ತಿನ ಭಾಗದಲ್ಲಿ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ನಸುಕಿನಲ್ಲಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸುತ್ತೇವೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟನೆ ಬಗ್ಗೆ ಕದಿರೇಶ್‌ ಸಹೋದರ ಸುರೇಶ್‌ ದೂರು ನೀಡಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದೇವೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್‌ ತಿಳಿಸಿದರು.

ಪಾಯದಲ್ಲಿ ರಕ್ತ

ಪ್ರತ್ಯಕ್ಷದರ್ಶಿಯೊಬ್ಬರ ಮಾಹಿತಿಯಂತೆ ಕಾಟನ್‌ಪೇಟೆ ಪೊಲೀಸರು, ಸ್ಥಳಕ್ಕೆ ಬಂದಾಗ ಪಾಯದಲ್ಲಿ ರಕ್ತ ಬಿದ್ದಿದ್ದು ಕಂಡಿತು. ಪೊಲೀಸರು ಸಾಕ್ಷ್ಯ ನಾಶವಾಗದಂತೆ ತಡೆಯುವ ಸಲುವಾಗಿ ಪಾಯಕ್ಕೆ ಟಾರ್ಪಲ್‌ ಹೊದಿಸಿದರು. ದೇವಸ್ಥಾನದ ಎರಡೂ ಗೇಟ್‌ಗಳನ್ನು ಬಂದ್‌ ಮಾಡಿ ಸಾರ್ವಜನಿಕರ ಸಂಚಾರ ನಿರ್ಬಂಧಿಸಿದರು.

ಬೆರಳಚ್ಚು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ರಕ್ತಸಿಕ್ತವಾದ ಮಣ್ಣನ್ನು  ಸಂಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT