ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಕೋವಿಡ್ ವಾರ್ಡ್‌ನಲ್ಲೂ ‘ರಕ್ಷಕ’

ಇತರ ಸೋಂಕಿತರಿಗೆ ಮನೋಸ್ಥೈರ್ಯ ನೀಡಿದ ನವೀನ್ ಕಾಮತ್
Last Updated 21 ಜುಲೈ 2020, 19:45 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ವಿರುದ್ಧ ಸಮಾಜದಲ್ಲಿ ಹಲವಾರು ವಾರಿಯರ್ಸ್ ಹೋರಾಡುತ್ತಿದ್ದರೆ, ಮಂಗಳೂರಿನ ಗೃಹ ರಕ್ಷಕದ ದಳದ ನವೀನ್ ಕಾಮತ್ ಸೋಂಕಿತರ ವಾರ್ಡ್‌ನೊಳಗೂ ಆತ್ಮಸ್ಥೈರ್ಯ ತುಂಬುವ ಸೇವೆ ಮುಂದುವರಿಸಿದ್ದಾರೆ.

ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಬಂದರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ನವೀನ್ ಕಾಮತ್ ಅವರಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿತ್ತು. ಬಳಿಕ ಅವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಅವರು ಇತರ ಸೋಂಕಿತರಿಗೆ ಮನೋಸ್ಥೈರ್ಯ ತುಂಬುತ್ತಿದ್ದಾರೆ.

‘ನಾನು ಖಾಸಗಿ ಆಸ್ಪತ್ರೆಯೊಂದರಲ್ಲಿ ಜ್ವರ ಪರೀಕ್ಷಿಸಿದ ಸಂದರ್ಭ ಮಲೇರಿಯಾ ಮತ್ತು ಕೋವಿಡ್–19 ಎರಡೂ ಪರೀಕ್ಷಾ ವರದಿಗಳು ಪಾಸಿಟಿವ್ ಬಂದಿತ್ತು. ಆ ಬಳಿಕ ನನ್ನನ್ನು ಇಲ್ಲಿನ ವಾರ್ಡ್‌ಗೆ ಸೇರಿಸಿದರು’ ಎಂದು ನವೀನ್ ಕಾಮತ್ ತಿಳಿಸಿದರು. ರೋಗದ ಬಗ್ಗೆ ಧೃತಿಗೆಡೆದ ನವೀನ್, ಇಲ್ಲಿನ ಕೋವಿಡ್–19 ವಾರ್ಡ್‌ನಲ್ಲಿ ಇತರರಿಗೆ ಧೈರ್ಯ ತುಂಬುತ್ತಿದ್ದಾರೆ.

‘ನನಗೆ ಸ್ವಲ್ಪ ಅನಾರೋಗ್ಯ ಇತ್ತು. ವಾರ್ಡ್‌ಗೆ ದಾಖಲಿಸಿದ ಕೂಡಲೇ ಆತಂಕವಾಯಿತು. ಆದರೆ, ಇಲ್ಲಿ ನವೀನ್ ಧೈರ್ಯ ತುಂಬಿದರು. ಸಹಾಯ ಮಾಡಿದರು. ಈಗ ನಾನೂ ನಿಶ್ಚಿಂತೆಯಿಂದ ಇದ್ದೇನೆ’ ಎಂದು ಅವರ ವಾರ್ಡ್‌ನಲ್ಲಿದ್ದ ಹಿರಿಯರೊಬ್ಬರು ತಿಳಿಸಿದರು.

‘ನಮಗೆ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಆದರೆ, ಪಾಸಿಟಿವ್ ವರದಿ ಬಂದ ಕಾರಣ ಇಲ್ಲಿ ದಾಖಲಿಸಿದ್ದಾರೆ. ಇದರಿಂದ ಗೊಂದಲ ಉಂಟಾಗಿತ್ತು. ಈಗ ನವೀನ್ ಹಾಗೂ ನಾವೆಲ್ಲ ಸುಖ–ದುಖ ಮಾತನಾಡಿಕೊಳ್ಳುವ ಕಾರಣ ಧೈರ್ಯ ಬಂದಿದೆ ’ ಎಂದು ಸೋಂಕಿತ ಸಹೋದರರಿಬ್ಬರು ಪ್ರತಿಕ್ರಿಯಿಸಿದರು. ಇವರ ವಾರ್ಡ್‌ನಲ್ಲಿ 27 ಸೋಂಕಿತರು ಇದ್ದಾರೆ.

‘ಕೋವಿಡ್ ಕುರಿತ ವದಂತಿಗಳಿಂದಾಗಿ ಆತಂಕಕ್ಕೆ ಒಳಗಾಗಿದ್ದೆವು. ಆದರೆ, ವಾಸ್ತವದಲ್ಲಿ ಅಂತಹ ಸಮಸ್ಯೆ ಇಲ್ಲ ಎನ್ನುವುದನ್ನು ನಾವು ಇಲ್ಲಿ ಬಂದ ಬಳಿಕ ಅರಿತುಕೊಂಡೆವು. ಪರಸ್ಪರ ಸ್ಪಂದನೆಯೇ ನಮಗೆ ರೋಗ ನಿರೋಧಕ ಶಿಕ್ತಿ ನೀಡಿದೆ’ ಎಂದು ಮತ್ತೊಬ್ಬ ಸೋಂಕಿತರು ತಿಳಿಸಿದರು.

‘ಆರಂಭದಲ್ಲಿ ವದಂತಿಯಿಂದ ಆತಂಕಕ್ಕೆ ಒಳಗಾದವರೆಲ್ಲ, ಇಲ್ಲಿನ ನಮ್ಮ ವಾರ್ಡ್‌ನಲ್ಲಿ ಹುಮ್ಮಸ್ಸಿನಿಂದ ಇದ್ದಾರೆ. ಧೈರ್ಯ ತುಂಬುವುದಷ್ಟೇ ನಮ್ಮ ಕೆಲಸ. ಅದೂ ಅಂತರ ಹಾಗೂ ವೈದ್ಯರ ಸೂಚನೆಯನ್ನು ಪಾಲಿಸಿಕೊಂಡು. ಉಳಿದಿದ್ದನ್ನು ವೈದ್ಯರು ಮತ್ತು ಆಸ್ಪತ್ರೆಯವರು ಮಾಡುತ್ತಿದ್ದಾರೆ’ ಎನ್ನುತ್ತಾರೆ ನವೀನ್ ಕಾಮತ್. ಹಿರಿಯ ಅಧಿಕಾರಿಗಳ ಬೆಂಬಲವನ್ನೂ ಸ್ಮರಿಸುತ್ತಾರೆ.

‘ನಮ್ಮ ಗೃಹರಕ್ಷಕ ದಳದ ಸಿಬ್ಬಂದಿ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಾರೆ. ಅದರಿಂದಾಗಿ ಕ್ಲಿಷ್ಟಕರ ಸಂದರ್ಭದಲ್ಲೂ ಅವರಲ್ಲಿ ಮನೋಸ್ಥೈರ್ಯ ಇರುತ್ತದೆ. ಈಗ ಕೋವಿಡ್–19 ಸೋಂಕಿನ ಸಂದರ್ಭದಲ್ಲೂ ಇತರರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ’ ಎಂದು ಸಮಾದೇಷ್ಟ ಡಾ.ಮುರಲೀ ಮೋಹನ ಚೂಂತಾರು ಪ್ರಶಂಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT