ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ದ್ರವ್ಯ ನಿಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ: ಗೃಹ ಸಚಿವ ಎಂ.ಬಿ. ಪಾಟೀಲ

ಪೊಲೀಸ್‌ ಅಧಿಕಾರಿಗಳ ಸಭೆ
Last Updated 28 ಜನವರಿ 2019, 13:11 IST
ಅಕ್ಷರ ಗಾತ್ರ

ಮಂಗಳೂರು: ಮಾದಕ ದ್ರವ್ಯ ಜಾಲವನ್ನು ನಿಗ್ರಹಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಪೊಲೀಸ್‌ ಅಧಿಕಾರಿಗಳ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪೊಲೀಸರು ಉತ್ತಮ ಕೆಲಸ ನಿರ್ವಹಿಸುತ್ತಿದ್ದು, ಮಾದಕ ದ್ರವ್ಯ ಜಾಲದ ವಿರುದ್ಧ ಕಠಿಣ ನಿಲುವು ತಾಳಿದ್ದಾರೆ ಎಂದರು.

ಮಂಗಳೂರು ಶಿಕ್ಷಣ ಕೇಂದ್ರವಾಗಿದ್ದು, ಇಲ್ಲಿಗೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಮಾದಕ ದ್ರವ್ಯ ಮಾರಾಟಗಾರರು ಇಂತಹ ವಿದ್ಯಾರ್ಥಿಗಳನ್ನೇ ಗುರಿಯಾಗಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಬೇರು ಸಹಿತ ಕಿತ್ತು ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮಂಗಳೂರು ಕೋಮುಗಲಭೆ ಪೀಡಿತ ಪ್ರದೇಶ ಎಂಬ ಭಾವನೆ ಇತ್ತು. ಆದರೆ, ಇಲ್ಲಿನ ಪೊಲೀಸ್‌ ಅಧಿಕಾರಿಗಳ ಉತ್ತಮ ಕಾರ್ಯನಿರ್ವಹಣೆಯಿಂದ ಅಂತಹ ಹಣೆಪಟ್ಟಿ ಕಳಚುವಂತಾಗಿದೆ. ಸುಂದರ ಮಂಗಳೂರು ನಿರ್ಮಾಣವಾಗುತ್ತಿದೆ ಎಂದರು.

ಸಿಬ್ಬಂದಿಯ ಕೊರತೆ ಸೇರಿದಂತೆ ಹಲವು ಬೇಡಿಕೆಗಳನ್ನು ಪೊಲೀಸ್‌ ಇಲಾಖೆ ಮುಂದಿಟ್ಟಿದೆ. ಎಲ್ಲವನ್ನೂ ಈಡೇರಿಸುವುದು ಸಾಧ್ಯವಿಲ್ಲ. ಅದಾಗ್ಯೂ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಫೋನ್‌–ಇನ್‌ ಕಾರ್ಯಕ್ರಮದ ಮೂಲಕ ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕಡಿಮೆ ಮಾಡಲಾಗುತ್ತಿದ್ದು, ಇದೊಂದು ಉತ್ತಮ ಹೆಜ್ಜೆ ಎಂದು ಬಣ್ಣಿಸಿದರು.

ಗೊಂದಲಗಳು ಸಹಜ: ಮತೀಯ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಹೈಕಮಾಂಡ್‌ ಸೂಚನೆಯಂತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ಗೊಂದಲಗಳು ಸಹಜ. ಅವೆಲ್ಲ ತಾನಾಗಿಯೇ ಪರಿಹಾರ ಆಗುತ್ತವೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಮತದಾರರು ಮತ್ತೊಮ್ಮೆ ಅವರಿಗೆ ಅವಕಾಶ ನೀಡಿಲ್ಲ. ಆದರೆ, ಕೆಲವರು ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಆಶಿಸುತ್ತಿದ್ದಾರೆ. ಅದರಲ್ಲಿ ತಪ್ಪಿಲ್ಲ ಎಂದ ಅವರು, ಮೈತ್ರಿ ಸರ್ಕಾರ 5 ವರ್ಷ ಪೂರೈಸಲಿದ್ದು, ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸಭೆಯಲ್ಲಿ ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್‌, ನಗರ ಪೊಲೀಸ್‌ ಆಯುಕ್ತ ಟಿ.ಆರ್. ಸುರೇಶ್‌, ಡಿಸಿಪಿಗಳಾದ ಹನುಮಂತ್ರಾಯ, ಉಮಾ ಪ್ರಶಾಂತ್‌, ಪೊಲೀಸ್ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT