ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಕೆಲಸ ಶುರುವಾಗದಿದ್ದರೆ ಟೋಲ್‌ ಬಂದ್‌

ನವಯುಗ್‌ ಕಂಪನಿಯ ಅಧಿಕಾರಿಗಳಿಗೆ ಸಂಸದ ನಳಿನ್‌ ಎಚ್ಚರಿಕೆ
Last Updated 5 ಜುಲೈ 2018, 13:47 IST
ಅಕ್ಷರ ಗಾತ್ರ

ಮಂಗಳೂರು: ತಲಪಾಡಿಯಿಂದ ಕುಂದಾಪುರವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಎಂಟು ವರ್ಷದಿಂದ ನಡೆಯುತ್ತಿದೆ. ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಫ್ಲೈಓವರ್‌ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಸಂಸದ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ಗುರುವಾರ ತಲಪಾಡಿಯಿಂದ ಸುರತ್ಕಲ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಅವೈಜ್ಞಾನಿಕ ಕಾಮಗಾರಿಯಿಂದ ಸರ್ವೀಸ್‌ ರಸ್ತೆ, ಚರಂಡಿ ಸಮಸ್ಯೆ ತಲೆದೋರಿದೆ. ನವಯುಗ್‌ ಕಂಪನಿಯ ವೈಯಕ್ತಿಕ ಸಮಸ್ಯೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಇದೀಗ ನಿರಂತರ ಸಭೆ ನಡೆಸಿ, ತಕ್ಷಣ ಕಾಮಗಾರಿಯ ವೇಳಾಪಟ್ಟಿ ತಯಾರಿಸಿ ಕೊಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ತೊಕ್ಕೊಟ್ಟು ಮೇಲ್ಸೇತುವೆ ಡಿಸೆಂಬರ್‌ ಅಂತ್ಯಕ್ಕೆ ಮತ್ತು ಪಂಪ್‌ವೆಲ್‌ ಫ್ಲೈಓವರ್ ಕಾಮಗಾರಿಯನ್ನು ಜನವರಿ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ವೇಳಾಪಟ್ಟಿಯಂತೆ 15 ದಿನದಲ್ಲಿ ಕಾಮಗಾರಿಯಲ್ಲಿ ಪ್ರಗತಿ ಕಾಣದೇ ಇದ್ದರೆ, ತಲಪಾಡಿ ಟೋಲ್‌ ಬಂದ್‌ ಮಾಡಿ ಹಣ ವಸೂಲಿ ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಇಲ್ಲಿ ಎದುರಾದ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ 6–7 ತಿಂಗಳು ಬೇಕು. ಅದಕ್ಕಿಂತ ಮುಂಚೆ ಎರಡೂ ಫ್ಲೈಓವರ್‌ಗಳು ಹಾಗೂ ನಂತೂರು ಸಮೀಪದ ಸರ್ವೀಸ್‌ ರಸ್ತೆಗಳನ್ನು ದುರಸ್ತಿ ಮಾಡಿ, ವಿಸ್ತಾರಗೊಳಿಸಬೇಕು. ಚರಂಡಿಗಳನ್ನು ಸರಿಪಡಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ನವಯುಗ್ ಕಂಪನಿಗೆ ಈಗಾಗಲೇ ಅನೇಕ ಎಚ್ಚರಿಕೆಗಳನ್ನು ನೀಡಲಾಗಿದೆ. ಅದಾಗ್ಯೂ ಕೊನೆಯ ಎಚ್ಚರಿಕೆಯನ್ನು ಈಗ ನೀಡಲಾಗುತ್ತಿದ್ದು, ಅದಕ್ಕೂ ಸ್ಪಂದಿಸದೇ ಇದ್ದರೆ, ಕಾನೂನು ಹೋರಾಟವನ್ನೂ ನಡೆಸುತ್ತೇವೆ ಎಂದು ತಿಳಿಸಿದರು. ತಲಪಾಡಿ ಟೋಲ್‌ ಬಳಿ ಅವೈಜ್ಞಾನಿಕ ಚರಂಡಿ, ಕಸದ ರಾಶಿ, ರಿಲಯನ್ಸ್‌ ಪೆಟ್ರೋಲ್‌ ಬಂಕ್‌ ಸಮೀಪದ ಅಂಡರ್‌ಪಾಸ್‌ ಬಳಿ ನೀರು ಹರಿಯಲು ತಡೆಯಾಗಿರುವುದು, ಬೀರಿ ಜಂಕ್ಷನ್‌, ತೊಕ್ಕೊಟ್ಟು ಫ್ಲೈಓವರ್‌ ಪಕ್ಕದ ಚರಂಡಿ, ಜಪ್ಪಿನಮೊಗರು, ಪಂಪ್‌ವೆಲ್‌, ನಂತೂರು, ಕೊಟ್ಟಾರ, ಕೂಳೂರು, ಬೈಕಂಪಾಡಿ ಹಾಗೂ ಸುರತ್ಕಲ್‌ನಲ್ಲಿ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯನ್ನು ನಳಿನ್‌ಕುಮಾರ್‌ ಪರಿಶೀಲಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಲಹೆಗಾರರಾದ ಅಜಿತ್‌ಕುಮಾರ್‌ ಜೈನ್‌, ರವಿಕುಮಾರ್‌, ನವಯುಗ ಕಂಪನಿಯ ಮುಖ್ಯ ಯೋಜನಾ ವ್ಯವಸ್ಥಾಪಕ ಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT