‘ಜೆ.ಆರ್‌.ಲೋಬೊಗೆ ಅಕ್ರಮವಾಗಿ ಕಚೇರಿ ಹಂಚಿಕೆ’

7
ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕರ ಆರೋಪ

‘ಜೆ.ಆರ್‌.ಲೋಬೊಗೆ ಅಕ್ರಮವಾಗಿ ಕಚೇರಿ ಹಂಚಿಕೆ’

Published:
Updated:

ಮಂಗಳೂರು: ಮಾಜಿ ಶಾಸಕ ಜೆ.ಆರ್.ಲೋಬೊ ಅವರು ಶಾಸಕರಾಗಿದ್ದ ಅವಧಿಯಲ್ಲಿ ಪಡೆದಿದ್ದ ಕಚೇರಿಯನ್ನು ಪುನಃ ಬಾಡಿಗೆ ಆಧಾರದಲ್ಲಿ ಅವರಿಗೆ ಹಂಚಿಕೆ ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕ ಪ್ರೇಮಾನಂದ‌ ಶೆಟ್ಟಿ, 'ಲೋಬೊ ಅವರು ರಾಜಕೀಯ ಪ್ರಭಾವ ಬಳಸಿ ಕಚೇರಿ ಪಡೆದಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಹಂಚಿಮೆ ಮಾಡಲಾಗಿದೆ' ಎಂದು ಆರೋಪಿಸಿದರು.

ಪಾಲಿಕೆ ಅಧೀನದಲ್ಲಿರುವ ಕದ್ರಿ ಮಲ್ಲಿಕಟ್ಟೆ ವಾಣಿಜ್ಯ ಸಂಕೀರ್ಣದಲ್ಲಿ ಲೋಬೊ ಅವರಿಗೆ ಶಾಸಕರ ಕಚೇರಿ ಹಂಚಿಕೆ ಮಾಡಲಾಗಿತ್ತು. ಈಗ ಅದೇ ಕಚೇರಿಯನ್ನು ₹ 5.53 ಲಕ್ಷ ಠೇವಣಿ ಮತ್ತು ₹ 7,237 ಮಾಸಿಕ ಬಾಡಿಗೆ ಆಧಾರದಲ್ಲಿ ಹಂಚಿಕೆ ಮಾಡಲಾಗಿದೆ. ಪ್ರಸ್ತಾವವನ್ನು ಪ್ರಥಮ ದರ್ಜೆ ಸಹಾಯಕರು ನೇರವಾಗಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಿದ್ದು, ಅವರು ಅನುಮೋದನೆ ನೀಡಿದ್ದಾರೆ. ಇದು ಸಂಪೂರ್ಣವಾಗಿ ಕಾನೂನುಬಾಹಿರ ತೀರ್ಮಾನ ಎಂದು ಹೇಳಿದರು.

ಪ್ರಥಮ ದರ್ಜೆ ಸಹಾಯಕರು ಸಿದ್ಧಪಡಿಸುವ ಪ್ರಸ್ತಾವವು ಹಲವು ಹಂತಗಳನ್ನು ದಾಟಿ ಆಯುಕ್ತರನ್ನು ತಲುಪಬೇಕು. ಆದರೆ, ಈ ಪ್ರಕರಣದಲ್ಲಿ ಪ್ರಥಮ ದರ್ಜೆ ಸಹಾಯಕರು ನೇರವಾಗಿ ಪಾಲಿಕೆಯ ಆಯುಕ್ತರಿಗೆ ಕಡತ ಸಲ್ಲಿಸಿದ್ದಾರೆ. ಹರಾಜಿನ ಮೂಲಕ ಹಂಚಿಕೆ ಮಾಡಬೇಕಾದ ಕೊಠಡಿಯನ್ನು ನೇರವಾಗಿ ಹಂಚಿಕೆ ಮಾಡಿರುವುದು ಸಂಶಯಕ್ಕೆ ಎಡೆಮಾಡಿದೆ ಎಂದರು.

ಮೊದಲು ಈ ಕೊಠಡಿಯನ್ನು ಶಾಸಕ ವೇದವ್ಯಾಸ ಕಾಮತ್‌ ಅವರಿಗೆ ಹಂಚಿಕೆ ಮಾಡಲಾಗಿತ್ತು. ಈ ಕಾರಣದಿಂದ ಲೋಬೊ ಅವರ ಮನವಿಯನ್ನು ಪಾಲಿಕೆ ಆಯುಕ್ತರು ತಿರಸ್ಕರಿಸಿದ್ದರು. ಕೆಲವೇ ದಿನಗಳಲ್ಲಿ ತೀರ್ಮಾನವನ್ನು ಬದಲಾಯಿಸಿ, ಕಚೇರಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

‘ಲೋಬೊ ಅಧಿಕಾರಿಯಾಗಿದ್ದ ಅವಧಿಯಲ್ಲಿ ಕೆಯುಐಡಿಎಫ್‌ಸಿ ನೆರವಿನ ಕುಡ್ಸೆಂಪ್‌ ನಿರ್ದೇಶಕರಾಗಿದ್ದರು. ಕುಡ್ಸೆಂ‍ಪ್ ಕಚೇರಿಯೂ ಕದ್ರಿ ಮಲ್ಲಿಕಟ್ಟೆ ವಾಣಿಜ್ಯ ಸಂಕೀರ್ಣದಲ್ಲಿದೆ. ಕುಡ್ಸೆಂಪ್ ಮೇಲಿನ ವ್ಯಾಮೋಹದ ಕಾರಣದಿಂದಾಗಿಯೇ ಲೋಬೊ ಕಚೇರಿ ಉಳಿಸಿಕೊಂಡಿರಬಹುದು. ಸಾಮಾಜಿಕ ಕೆಲಸಗಳನ್ನು ಮಾಡುವುದಾಗಿ ನೆಪ ಹೇಳಿಕೊಂಡು ಕಚೇರಿ ಕಬಳಿಸಿದ್ದಾರೆ ಎಂದು ಟೀಕಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕವೂ ಲೋಬೊ ಅಧಿಕಾರ ದಾಹದಿಂದ ಕಚೇರಿ ಉಳಿಸಿಕೊಂಡಿದ್ದಾರೆ. ಮಹಾನಗರ ಪಾಲಿಕೆಯ ಆಡಳಿತ ನಡೆಸುತ್ತಿರುವವರು ತಮ್ಮ ಪಕ್ಷದ ಮುಖಂಡನಿಗಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ತೀರ್ಮಾನವನ್ನು ಬಿಜೆಪಿ ಖಂಡಿಸುತ್ತದೆ. ಕಚೇರಿ ಹಂಚಿಕೆಯನ್ನು ತಕ್ಷಣವೇ ರದ್ದು ಮಾಡದಿದ್ದರೆ, ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !