‘ಸಂಶೋಧನೆಗಳ ಗುಣಮಟ್ಟ ಹೆಚ್ಚಬೇಕು’

7
ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್

‘ಸಂಶೋಧನೆಗಳ ಗುಣಮಟ್ಟ ಹೆಚ್ಚಬೇಕು’

Published:
Updated:
Deccan Herald

ಮಂಗಳೂರು: ‘ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಸಂಶೋಧನೆಗಳ ಗುಣಮಟ್ಟ ಹೆಚ್ಚಿಸಬೇಕಿರುವುದು ಈಗಿನ ತುರ್ತಾಗಿದೆ. ಕಾಟಾಚಾರದ ಪಿಎಚ್‌.ಡಿ ಅಧ್ಯಯನಗಳಿಗೆ ತಿಲಾಂಜಲಿ ನೀಡುವ ಮೂಲಕ ಅದನ್ನು ಸಾಧಿಸಬೇಕಿದೆ’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಬಿವೃದ್ಧಿ ಮತ್ತು ಜಲ ಸಂಪನ್ಮೂಲ ಖಾತೆಗಳ ರಾಜ್ಯ ಸಚಿವ ಸತ್ಯಪಾಲ್ ಸಿಂಗ್‌ ಹೇಳಿದರು.

ಸುರತ್ಕಲ್‌ನ ಎನ್‌ಐಟಿ–ಕರ್ನಾಟಕದಲ್ಲಿ ಶುಕ್ರವಾರ ಗ್ರಂಥಾಲಯ ಮತ್ತು ಕಂಪ್ಯೂಟರ್‌ ವಿಜ್ಞಾನ ವಿಭಾಗದ ನೂತನ ಕಟ್ಟಡಗಳನ್ನು ಉದ್ಘಾಟಿಸಿದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾವು ಹಿಂದುಳಿಯಲು ಸಂಶೋಧನೆಗಳಲ್ಲಿನ ಲೋಪಗಳೇ ಕಾರಣ’ ಎಂದರು.

ದೇಶ ಈಗ ಆವಿಷ್ಕಾರ ಮತ್ತು ವೃತ್ತಿಪರತೆಯ ಕಡೆಗೆ ಹೊರಳಬೇಕಿದೆ. ಇದಕ್ಕಾಗಿ ಪಿಎಚ್‌.ಡಿ ಅಧ್ಯಯನ ಕ್ರಮದಲ್ಲಿ ಅಗಾಧವಾದ ಬದಲಾವಣೆ ತರಬೇಕಿದೆ. ಕಾಟಾಚಾರಕ್ಕೆ ಹತ್ತು ಅಧ್ಯಯನಗಳನ್ನು ನಡೆಸುವ ಬದಲಿಗೆ ಸರಿಯಾದ ಕ್ರಮದಲ್ಲಿ ಒಂದು ಅಧ್ಯಯನ ನಡೆದರೆ ಸಾಕು. ಬಹುಶಿಸ್ತೀಯ ಅಧ್ಯಯನ ನಡೆಸಲು ಅನುಕೂಲವಾಗುವಂತೆ ವಿವಿಧ ವಿಭಾಗಗಳ ನಡುವೆ ಸಮನ್ವಯ ಸಾಧಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಅಂತರರಾಷ್ಟ್ರೀಯ ಮಟ್ಟದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಯಾವುದೇ ಸಂಸ್ಥೆಯೂ ಸ್ಥಾನ ಪಡೆದಿಲ್ಲ. ಈ ಕೊರತೆ ನೀಗಲು ಮುಂದಿನ ಹತ್ತು ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ 20 ಸಂಸ್ಥೆಗಳನ್ನು ರೂಪಿಸಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ಉನ್ನತ ಅಧ್ಯಯನಕ್ಕಾಗಿ ವಿದೇಶಗಳಿಗೆ ಹೋಗುವುದನ್ನು ತಪ್ಪಿಸುವುದು ಇದರ ಉದ್ದೇಶ ಎಂದರು.

ಹಲ್ಲಿಲ್ಲದ ಕಾಯ್ದೆ:  ಬಳಿಕ ನಡೆದ ಸಂವಾದದಲ್ಲಿ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ‘ದೇಶದಲ್ಲಿ ಈಗ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಸಮಸ್ಯೆ ಇಲ್ಲ. ಆದರೆ, ಮಧ್ಯದಲ್ಲಿ ಶಾಲೆ ಬಿಡುವ ಮಕ್ಕಳ ಪೋಷಕರ ವಿರುದ್ಧ ಯಾವುದೇ ಕ್ರಮ ಜರುಗಿಸುವ ಅವಕಾಶ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಇಲ್ಲ. ಅದು ಹಲ್ಲಿಲ್ಲದ ಕಾಯ್ದೆ’ ಎಂದು ತಿಳಿಸಿದರು.

ದೇಶದಲ್ಲಿ ಸರಿಯಾದ ತರಬೇತಿ ಇಲ್ಲದ 15 ಲಕ್ಷ ಶಿಕ್ಷಕರು ಇದ್ದಾರೆ. ಅವರಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಮೂಲ ವಿಜ್ಞಾನದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ರಮವೂ ಸಿದ್ಧವಾಗಿದೆ. ದೇಶದಿಂದ ಹೊರಹೋಗಿರುವ ಪ್ರತಿಭಾವಂತರು ಮತ್ತೆ ಇಲ್ಲಿಗೆ ಬಂದು ಕೆಲಸ ಮಾಡುವ ವಾತಾವರಣ ನಿರ್ಮಿಸುವುದು ಸರ್ಕಾರದ ಗುರಿ ಎಂದು ಸಂವಾದದಲ್ಲಿ ಎದುರಾದ ಪ್ರಶ್ನೆಗಳಿಗೆ ಉತ್ತರಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲ್, ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ, ಎನ್‌ಐಟಿಕೆ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಎಚ್.ಬಲವೀರ ರೆಡ್ಡಿ, ನಿರ್ದೇಶಕ ಪ್ರೊ.ಉಮಾಮಹೇಶ್ವರ ರಾವ್‌ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !