ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧೆಗೆ ಅಪರೂಪದ ಬೈಪಾಸ್ ಶಸ್ತ್ರಚಿಕಿತ್ಸೆ- ಇಂಡಿಯಾನಾ ಆಸ್ಪತ್ರೆ ವೈದ್ಯರ ಸಾಧನೆ

Last Updated 27 ಆಗಸ್ಟ್ 2021, 3:15 IST
ಅಕ್ಷರ ಗಾತ್ರ

ಮಂಗಳೂರು: ನಗರದ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಹೃದಯ ಶಸ್ತ್ರಚಿಕಿತ್ಸಕ ಡಾ.ಎಂ.ಕೆ. ಮೂಸಾ ಕುಂಞಿ ಮತ್ತು ಅವರ ವೈದ್ಯಕೀಯ ತಂಡವು, ವೃದ್ಧೆಯೊಬ್ಬರಿಗೆ ಅಪರೂಪದ ಹಾಗೂ ಬಹು ಕಷ್ಟದ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

ಕಾಸರಗೋಡಿನ 61 ವರ್ಷದ ನಬೀಸಾ ಅವರ ಹೃದಯದ ಪಂಪ್ ಮಾಡುವ ಶಕ್ತಿ ಶೇ 15ಕ್ಕಿಂತ ಕಡಿಮೆ ಇದ್ದು, ಅಪಾಯದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂತಹ ರೋಗಿಗೆ ಸಾಮಾನ್ಯವಾಗಿ ಹೃದಯ ಕಸಿ ಅಗತ್ಯವಿರುತ್ತದೆ. ಆದರೆ, ಸುಧಾರಿತ ಹೊಸ ತಂತ್ರಗಳನ್ನು ಬಳಸಿಕೊಂಡು ಮಾಡಿದ ಯಶಸ್ವಿ ಬೈಪಾಸ್ ಶಸ್ತ್ರಚಿಕಿತ್ಸೆಯಿಂದ, ಅವರಿಗೆ ಹೃದಯ ಕಸಿ ಮಾಡುವಿಕೆಯ ಅಗತ್ಯವನ್ನು ತಪ್ಪಿಸಿದೆ ಎಂದು ಡಾ. ಮೂಸಾ ಹೇಳಿದ್ದಾರೆ.

ಹಾರ್ಟ್-ಲಂಗ್ ಯಂತ್ರದ ಬಳಕೆಯ ಅಗತ್ಯವಿಲ್ಲದ ಅತ್ಯಾಧುನಿಕ ‘ಆಫ್-ಪಂಪ್ ಬೈಪಾಸ್ ಸರ್ಜರಿ’ ತಂತ್ರವನ್ನು ಬಳಸಿ, ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವಾರದೊಳಗೆ ರೋಗಿಯು ಚೇತರಿಸಿಕೊಂಡಿದ್ದಾರೆ. ಅವರ ಹೃದಯದಲ್ಲಿನ ನಾಲ್ಕು ಬ್ಲಾಕ್‌ಗಳನ್ನು ಬೈಪಾಸ್ ಮಾಡಲಾಗಿದೆ. ಈಗ ಆಕೆಯ ಹೃದಯ ಪಂಪಿಂಗ್ ಶಕ್ತಿ ಶೇ 22ಕ್ಕಿಂತ ಹೆಚ್ಚಾಗಿದೆ. ಅವರು ಸಹಜವಾಗಿ ನಡೆದಾಡುವಷ್ಟು ಮತ್ತು ಎರಡು ಮಹಡಿಗಳನ್ನು ಹತ್ತುವಷ್ಟು ಸಶಕ್ತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

‘ನನ್ನ ಅನುಭವದಲ್ಲಿ, ಹೃದಯದ ಸಹಜ ಪಂಪಿಂಗ್ ಸಾಮರ್ಥ್ಯ ಮರಳಿ ಪಡೆಯಲು ಅವರು ಕೆಲವು ತಿಂಗಳುಗಳಿಂದ ಎರಡು ವರ್ಷಗಳವರೆಗೆ ತೆಗೆದುಕೊಳ್ಳಬಹುದು’ ಎಂದು ಡಾ. ಮೂಸಾ ಅಭಿಪ್ರಾಯಪಟ್ಟಿದ್ದಾರೆ.

ಈ ರೀತಿಯ ಅತ್ಯಂತ ಅಪರೂಪದ ಬೈಪಾಸ್ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿಯುಳ್ಳ ಭಾರತ ಮತ್ತು ಪ್ರಪಂಚದ ಬೆರಳೆಣಿಕೆಯಷ್ಟು ಹೃದಯ ಶಸ್ತ್ರಚಿಕಿತ್ಸಕರಲ್ಲಿ ಡಾ. ಮೂಸಾ ಒಬ್ಬರು ಎಂದು ಆಸ್ಪತ್ರೆಯ ಮುಖ್ಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಯುಸೂಫ್‌ ಕುಂಬ್ಳೆ ತಿಳಿಸಿದ್ದಾರೆ.

ನಬೀಸಾ ಉತ್ತಮ ಆರೋಗ್ಯ ಹೊಂದಿದ್ದು, ತಿಂಗಳ ಹಿಂದೆ ಇದ್ದಕ್ಕಿದ್ದಂತೆ ತೀವ್ರ ಉಸಿರಾಟದ ತೊಂದರೆ ಮತ್ತು ಎದೆಯ ಅಸ್ವಸ್ಥತೆ ಕಾಣಿಸಿಕೊಂಡಿತು. ಉಸಿರಾಟದ ತೊಂದರೆಯಿಂದಾಗಿ ಅವರಿಗೆ ನಡೆಯಲು ಅಥವಾ ಮಲಗಲು ಆಗುತ್ತಿರಲಿಲ್ಲ. ಬಹುಶಃ ಅವರು ಸೈಲೆಂಟ್ ಹಾರ್ಟ್ ಅಟ್ಯಾಕ್‌ನಿಂದ ಬಳಲುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾನಾ ಆಸ್ಪತ್ರೆಯಲ್ಲಿ ಮಾಡಿದ ಆಂಜಿಯೋಗ್ರಾಮ್ ಮತ್ತು ಇತರ ವೈದ್ಯಕೀಯ ತಪಾಸಣೆಗಳ ಮೂಲಕ ಹೃದಯದ ಪಂಪಿಂಗ್ ಶಕ್ತಿ ಶೇ 15ರಷ್ಟು ಇರುವುದು ಹಾಗೂ ವಿಸ್ತರಿಸಿದ ಹೃದಯ ಮತ್ತು ಮುಖ್ಯ ಅಪಧಮನಿ ಬ್ಲಾಕ್ ಸೇರಿದಂತೆ ನಾಲ್ಕು ನಿರ್ಣಾಯಕ ಬ್ಲಕ್‌ಗಳನ್ನು ಹೊಂದಿರುವುದು ಕಂಡುಬಂತು ಎಂದು ಡಾ.ಮೂಸಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT